ಧರ್ಮ-ಅಧ್ಯಾತ್ಮ ಹಬ್ಬಗಳು-ಉತ್ಸವಗಳು

ವಿಜಯದಶಮಿ, ಮಧ್ವಜಯಂತಿ: ಆಚಾರ್ಯ ಮಧ್ವ- ಮನುಕುಲತಿಲಕ- ಅಸಾಮಾನ್ಯ ಅಧ್ಯಾತ್ಮಸಾಧಕ

ತಮ್ಮ ನಡೆನುಡಿಗಳಿಂದ ಜನತೆಯ ಕ್ಷೇಮವನ್ನು ಬಯಸಿದ, ಸಾಧಿಸಿದ ಶ್ರೀಮಧ್ವಾಚಾರ್ಯರು ತಮ್ಮ ಅಪೂರ್ವ ಗ್ರಂಥಗಳಿಂದಲೂ ಸಮಾಜದ ಸೌಖ್ಯವನ್ನೂ ನೀಡಿ ಅನ್ವರ್ಥನಾಮರೆನಿಸಿದರು. ಮಧು ಅಂದರೆ ಸುಖ, ಆನಂದ. ಅದನ್ನು ನೀಡುವ ಅಂದರೆ ಶಾಸ್ತ್ರ. ಅದನ್ನು ರಚಿಸಿದವರಾದ್ದರಿಂದ ಮಧ್ವ ಎಂದು ಸಾರ್ಥಕನಾಮರಾಗಿ ಮೋಕ್ಷಾದರ್ಶ ಮತ್ತು ಜೀವನಾದರ್ಶವನ್ನು ನೀಡಿದರು.

ಆ ಹುಡುಗನ ವಯಸ್ಸು ಕೇವಲ ಹನ್ನೆರಡು! ಮುಖ ತೇಜಸ್ಸಿನಿಂದ ಕಂಗೊಳಿಸುತ್ತಿತ್ತು. ಹೊಂಬಣ್ಣದ ಶರೀರ. ಕಂಗಳಲ್ಲಿ ದಿವ್ಯ ಪ್ರಭೆ ಪ್ರತಿಫಲಿಸುತ್ತಿತ್ತು. ಹಣೆಯಲ್ಲಿ ಗೋಪಿ ಚಂದನ. ಶಿಖೆಯನ್ನು ಬಿಟ್ಟಿದ್ದ ಅವನು ಚುರುಕು ಬುದ್ಧಿಯವ ನೆಂಬುದು ನೋಡಿದ ಕೂಡಲೇ ಗೋಚರಿಸುತ್ತಿತ್ತು. ಮೊಣಕಾಲ ಮೇಲೆ ಬರುವಂತೆ ತುಂಡು ಪಂಚೆಯುಟ್ಟು ಮೈಮೇಲೆ ಉತ್ತರೀಯ ಹೊದ್ದಿದ್ದ ಅವನು ಅಂದು ತನ್ನ ತಂದೆಯ ಮುಂದೆ ಬಂದು ನಿಂತಾಗ ಅದು ಎಂದಿನಂತಿರಲಿಲ್ಲ. ಏನೋ ಒಂದು ಮಹತ್ವದ ಸಂಗತಿಯನ್ನು ಅರುಹಲು ಅವನು ಅಲ್ಲಿ ಬಂದು ನಿಂತಂತಿತ್ತು. ಯಾವುದೋ ತಾಳೆಗರಿ ಗ್ರಂಥದ ಪರಿಶೀಲನೆಯಲ್ಲಿದ್ದ ತಂದೆ ಏನನ್ನುವಂತೆ ಎದುರು ನಿಂತ ಮಗನತ್ತ ನೋಡಿದರು.

‘ಅಪ್ಪಾ, ನಾನೊಂದು ನಿರ್ಧಾರವನ್ನು ತಳೆದಿದ್ದೇನೆ. ಅದನ್ನು ತಮಗೆ ತಿಳುಹಲೆಂದು ಬಂದೆ’.
‘ನಿರ್ಧಾರ?! ಏನು ನಿರ್ಧಾರವಪ್ಪ ಅದು?’
‘ನಾನು ಸಂನ್ಯಾಸ ದೀಕ್ಷೆ ಸ್ವೀಕರಿಸಲು ನಿಶ್ಚಯಿಸಿದ್ದೇನೆ.’
ತಂದೆಗೆ ತಮ್ಮ ಕಿವಿಗಳನ್ನೇ ನಂಬಲಾಗಲಿಲ್ಲ. ತಾವು ಕೇಳುತ್ತಿರುವುದು ನಿಜವೇ? ಅಥವಾ ಹುಡುಗ ಹುಡುಗಾಟದ ಮಾತನಾಡುತ್ತಿದ್ದಾನೆಯೇ?
‘ಏನಂದೆ? ಸಂನ್ಯಾಸ ದೀಕ್ಷೆಯೇ? ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲಿ!’
‘ಹೌದು ಅಪ್ಪ. ನನಗೆ ಈ ಲೌಕಿಕ ಜೀವನದಲ್ಲಿ ಆಸಕ್ತಿ ಇಲ್ಲ. ಹೆಂಡತಿ, ಮಕ್ಕಳು, ಆಸ್ತಿ ಪಾಸ್ತಿ ಎಂಬ ಈ ಜಂಜಾಟದಲ್ಲಿ ಬೀಳಲು ಇಷ್ಟವಿಲ್ಲ. ನನಗೆ ಸಂನ್ಯಾಸಕ್ಕೆ ಅಪ್ಪಣೆ ಕೊಡಿ.’
‘ಅದರ ಚಿಂತೆ ಬೇಡ, ನಿಮಗೊಬ್ಬ ಮಗ ಹುಟ್ಟಿ ವಂಶ ಮುಂದುವರಿಸುತ್ತಾನೆ. ನನ್ನನ್ನು ಬಿಟ್ಟು ಕೊಡಿ.’
ಹೀಗೆ ಶುರುವಾದ ಅಪ್ಪ ಮಗನ ನಡುವಿನ ದ್ವಂದ್ವ ಮಗ ಗೆಲ್ಲುವುದರಲ್ಲಿ ಮುಕ್ತಾಯಗೊಂಡಿತು. ಅವನ ಸಂಕಲ್ಪದ ಮುಂದೆ ತಂದೆತಾಯಿಯ ಮೋಹ ಮುರಿದುಬಿತ್ತು. ಅವನು ಶ್ವೇತ ವಸ್ತ್ರವನ್ನು ನೀರಿನಲ್ಲಿ ವಿಸರ್ಜಿಸಿ ಕಾಷಾಯ ವಸ್ತ್ರವನ್ನು ಧರಿಸಿಯೇ ಬಿಟ್ಟ, ಕೇವಲ ಹನ್ನೆರಡು ವರ್ಷ ವಯಸ್ಸಿನಲ್ಲಿ.

ಯಾರೀ ಬಾಲಕ?
ಅಷ್ಟು ಚಿಕ್ಕ ವಯಸ್ಸಿನಲ್ಲೇ ಆ ಬಾಲಕ ಸಂನ್ಯಾಸ ಸ್ವೀಕರಿಸಬೇಕಾದರೆ ಅನೇಕ ಜನ್ಮಗಳ ಪುಣ್ಯಶೇಷವಿರಲೇಬೇಕು. ನಿಜ. ತಮ್ಮ ಹಿಂದಿನ ಜನ್ಮದಲ್ಲಿ ಹನುಮಂತ ಹಾಗೂ ಭೀಮಸೇನನಾಗಿದ್ದ ತಾವು ಈ ಜನ್ಮದಲ್ಲಿ ಈ ರೂಪದಲ್ಲಿ ಹುಟ್ಟಿರುವುದಾಗಿ ಸರಿದ ಅವರು ತ್ರಿಮತಸ್ಥಾಚಾರ್ಯರಲ್ಲಿ ಒಬ್ಬರಾದ ಶ್ರೀಮನ್ಮಧ್ವಾಚಾರ್ಯರು. ಸನಾತನ ಧರ್ಮಕ್ಕೆ ಸುತ್ತಲೂ ಅಪಾಯಗಳು ಮುತ್ತಿಕೊಂಡಿದ್ದಾಗ ವೇದೋದ್ಧಾರಕ್ಕಾಗಿ ಅವತರಿಸಿದ ಮಹಾನುಭಾವರು.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು, “ಧರ್ಮವು ನಶಿಸಿ, ಅಧರ್ಮವು ವಿಜೃಂಭಿಸಿದಾಗ ಧರ್ಮ ಸಂಸ್ಥಾಪನೆಗಾಗಿ ಅವತರಿಸುವುದಾಗಿ’’ ನೀಡಿರುವ ಭರವಸೆಯಂತೆ ವಿವಿಧ ಕಾಲ ಖಂಡಗಳಲ್ಲಿ, ವಿವಿಧ ರೂಪಗಳಲ್ಲಿ ಅವತರಿಸಿ ಧರ್ಮವನ್ನು ವಿನಾಶದಿಂದ ರಕ್ಷಿಸಿದ್ದನ್ನು ಭರತ ಖಂಡದ ಇತಿಹಾಸ ಸಾರಿ ಹೇಳುತ್ತದೆ. ಹಾಗೆ ಜನಿಸಿದವರು ಈ ಸಂತ ಶ್ರೇಷ್ಠರು.

ವೇದೋಪನಿಷತ್ತುಗಳು ಭರತ ಭೂಮಿಯ ಅಮೂಲ್ಯ ಆಸ್ತಿ. ಜಗತ್ತೇ ಕೊಂಡಾಡುವ ಜ್ಞಾನನಿಧಿ. ಮಹಾನ್ ಋಷಿಗಳ ಅಖಂಡ ತಪಸ್ಸಿನ ಫಲವಾಗಿ ಅವರಿಗೆ ಗೋಚರಿಸಿ ಮನುಕುಲಕ್ಕೆ ಅವರು ನೀಡಿದ ಅಪೌರುಷೇಯವಾದ ಜೀವನ ಧರ್ಮಶಾಸ್ತ್ರ. ಅವು ಅಂದಿಗೂ ಇಂದಿಗೂ ಎಂದೆಂದಿಗೂ ಮಾನವರನ್ನು ದೈವತ್ವದ ಕಡೆಗೆ ಕರೆದೊಯ್ಯುವ ಮಾರ್ಗಸೂತ್ರಗಳು.

ಶ್ರೀಮನ್ಮಧ್ವಾಚಾರ್ಯರಂಥ ಆಚಾರ್ಯರುಗಳು ಎಷ್ಟೊ ಮಂದಿ ಹುಟ್ಟಿ ದಾರಿ ತಪ್ಪುತ್ತಿದ್ದ ಜನರನ್ನು ಧರ್ಮಮಾರ್ಗಕ್ಕೆ ಕರೆದುಕೊಂಡು ಬರುವ ಕಾರ್ಯವನ್ನು ಮಾಡಿದರೂ ಅವರ ಮಹಾನ್ ಕಾರ್ಯಕ್ಕೆ ವಿಘ್ನಗಳನ್ನೊಡುತ್ತಿದ್ದ ವಿರೋಧಿ ಶಕ್ತಿಗಳು ಕಾಲಕಾಲಕ್ಕೆ ತಲೆ ಎತ್ತಿ ಅಂಥವರ ಪ್ರಯತ್ನಗಳನ್ನು ಕುಂಠಿತಗೊಳಿಸುತ್ತಿದ್ದುದು ಅಷ್ಟೇ ವಾಸ್ತವ. ಎಲ್ಲ ಮತಗಳ ಗುರುಗಳು ಹೇಳಿದ್ದನ್ನು ಸರಿಯಾಗಿ ಪಾಲಿಸದೆ, ಅರ್ಥಮಾಡಿಕೊಳ್ಳದೆ ಕೆಲವೊಮ್ಮೆ ಮಿತಿಮೀರಿ ವರ್ತಿಸುತ್ತಿದ್ದ ಅವರ ಶಿಷ್ಯವರ್ಗದವರೂ ಅವರ ಕಾರ್ಯಕ್ಕೆ ಅಡ್ಡಿ ಆತಂಕಗಳನ್ನುಂಟುಮಾಡುತ್ತಿದ್ದುದನ್ನು ಕಡೆಗಣಿಸುವಂತಿಲ್ಲ.

ಸುಮಾರು ಎಂಟುನೂರು ವರ್ಷಗಳ ಹಿಂದಿನ ಮಾತು. ಇಂದಿನ ಉಡುಪಿಯಿಂದ ಸುಮಾರು ಎಂಟು ಕಿಲೋಮೀಟರಿನ ಆಸುಪಾಸಿನಲ್ಲಿರುವ ಪಾಚೆ ಅಥವಾ ಪಾಜಕ ಗ್ರಾಮದಲ್ಲಿನ ಬೀದಿಯ ನಡುಮನೆಯ ವಾಸಿ ನಾರಾಯಣಭಟ್ಟ ಮತ್ತು ವೇದವತಿಯರ ಮೂರನೆಯ ಸುಪುತ್ರರೆ ಶ್ರೀ ಮಧ್ವರು. ಅವರ ಅಣ್ಣಂದಿರಿಬ್ಬರೂ ಬಾಲ್ಯಕ್ಕೆ ಮುನ್ನವೇ ವಿಧಿವಶ. ಸಾತ್ತ್ವಿಕ ಬ್ರಾಹ್ಮಣ ದಂಪತಿ ಬಯಸಿ ಪಡೆದ ಕೂಸಿಗೆ ಇಟ್ಟ ಹೆಸರು ಅವರ ಆರಾಧ್ಯದೈವವಾದ ವಾಸುದೇವ. ಜನನ ಆಶ್ವಯುಜ ಮಾಸ ಶುಕ್ಲಪಕ್ಷ ದಶಮಿಯ ದಿನ. ಅಂದರೆ ವಿಜಯದಶಮಿಯ ಶುಭ ತಿಥಿಯಲ್ಲಿ. ಹುಟ್ಟಿದ ಇಸವಿಯ ಬಗೆಗೆ ಭಿನ್ನಾಭಿಪ್ರಾಯವಿದ್ದರೂ ಬಹುಮತದಂತೆ ಕ್ರಿ.ಶ. 1200. ಅವರು ಜನಿಸಿದ ಪಾಜಕ ಪರಶುರಾಮ ಕ್ಷೇತ್ರವೆಂದರೆ ಪ್ರಸಿದ್ಧಿ.

ಪರಶುರಾಮರ ಮೂರ್ತಿಯನ್ನು ಧರಿಸಿದ ಪರಶುರಾಮ ಬೆಟ್ಟ, ದುರ್ಗೆಯಿಂದ ಕಂಗೊಳಿಸುವ ಕುಂಜಾರುಗಿರಿ ಸನಿಹದ ತಾಣಗಳು. ಪಾಜಕದ ಸುತ್ತಲಿರುವ ತೀರ್ಥಗಳೇ ಪರಶು ತೀರ್ಥ, ಧನುಸ್ ತೀರ್ಥ, ಬಾಣ ತೀರ್ಥ ಮತ್ತು ಗದಾ ತೀರ್ಥ. ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಪಿಶಾಚಿಯಿಂದ ರಕ್ಷಿಸಿದ ಹಿರಿಮೆ ಆ ಮಗುವಿನದು. ಹುರುಳಿಯನ್ನು ತಿಂದು ಅರಗಿಸಿಕೊಂಡ ಕೂಸು, ತಂದೆಯನ್ನು ಋಣಭಾರದಿಂದ ಪಾರು ಮಾಡಲು ಗ್ರಾಮದ ಧನಿಕನಿಗೆ ಹುಣಿಸೆ ಬೀಜಗಳನ್ನು ಕೊಟ್ಟಾಗ, ಆ ಧನಿಕನಿಗೆ ಆ ಬೀಜಗಳು ಬಂಗಾರದ ನಾಣ್ಯಗಳಾಗಿ ಕಂಡವಂತೆ. ಆ ಬಾಲಕ ಕುಂಜಾರುಗಿರಿಯಲ್ಲಿ ಓಡಾಡಿದ ಜಾಗಗಳಲ್ಲಿ ಹೆಜ್ಜೆ ಗುರುತುಗಳು ಕಲ್ಲಿನಲ್ಲಿ ಮೂಡುತ್ತಿದ್ದವಂತೆ. ಇದನ್ನೆಲ್ಲ ಕಂಡ ಹಳ್ಳಿಯ ಜನ ಮಗು ದೈವಾಂಶ ಸಂಜಾತವೆಂದೆ ಭಾವಿಸಿ ಬಾಲಕೃಷ್ಣನನ್ನು ನೆನೆಯುತ್ತಿದ್ದರಂತೆ.

ವಾಸುದೇವನದು ಕೇವಲ ಶರೀರ ಶ್ರೀಮಂತಿಕೆಯಲ್ಲ. ಆ ಬಾಲಕನ ಕಂಠ ಸರಸ್ವತಿಯ ಸಿರಿಯನ್ನು ಹೊತ್ತು ಭಾವ-ಭಾಷೆ ಅಸ್ಖಲಿತವಾಗಿ, ಸಂಸ್ಕೃತದ ಗುಣಿತಾಕ್ಷರಗಳು ಅಗಣಿತವಾಗಿ ಹೊರಹೊಮ್ಮುತ್ತಿದ್ದುವಂತೆ. ಬಾಲ್ಯದಿಂದಲೆ ಶ್ಲೋಕ ಪಂಡಿತನಾದ ವಾಸುದೇವ, ಉಡುಪಿಯ ಅನಂತೇಶ್ವರನ ಭಕ್ತರಾದ ತಂದೆಯಿಂದ ಪುರಾಣ ಕಥನಗಳನ್ನು ಕೇಳಿ ಆಧ್ಯಾತ್ಮದಲ್ಲಿ ಆಸಕ್ತಿ ತಳೆಯುತ್ತಾನೆ.

ಉಪನಯನವಾಗುತ್ತಿದ್ದಂತೆ ತೋಟಂತಿಲ್ಲಾಯರ ಗುರುಕುಲ ಸೇರುತ್ತಾನೆ. ಅಲ್ಲಿಯ ಪಾಠ-ಪ್ರವಚನಗಳು ತೀರ ಸಾಧಾರಣವೆನಿಸಿ, ಯತಿಯಾಗಬೇಕೆಂಬ ಹಂಬಲದಿಂದ ಉಡುಪಿಯ ಅಚ್ಯುತಪ್ರಜ್ಞರೆಂಬ ಆಚಾರ್ಯರನ್ನು ಭೇಟಿ ಮಾಡಿ ಅವರಿಂದ ಸಂನ್ಯಾಸ ದೀಕ್ಷೆ ಪಡೆಯುತ್ತಾನೆ. ಅಚ್ಯುತಪ್ರಜ್ಞರಾದರಾದರೋ ತಮ್ಮ ಶಿಷ್ಯನ ಜ್ಞಾನ ಸಂಪತ್ತನ್ನು ಕಂಡು ವಾಸುದೇವನನ್ನು `ಪೂರ್ಣಪ್ರಜ್ಞ’ನೆಂದು ಕರೆಯುತ್ತಾರೆ.

ಕಾವಿ ಧರಿಸಿದ ಬಾಲಕನಿಗೆ ಆಗ ಕೇವಲ ಹನ್ನೊಂದು ವರುಷಗಳು. ಈ ವಿಷಯ ತಿಳಿದ ನಾರಾಯಣಭಟ್ಟ-ವೇದಾವತಿ ದಂಪತಿ ಮಗನನ್ನು ಗೃಹಸ್ಥನನ್ನಾಗಿಸಲು ಪ್ರಯತ್ನಪಟ್ಟರೂ ಅದು ಫಲಕಾರಿಯಾಗದೆ ನಿರಾಶರಾಗುತ್ತಾರೆ. ಅಚ್ಯುತಪ್ರಜ್ಞರಾದರೋ ತಮ್ಮ ಪೀಠಕ್ಕೆ ಉತ್ತರಾಧಿಕಾರಿ ಸಿಕ್ಕಿದನೆಂಬ ಸಂತಸದಿಂದ `ಪೂರ್ಣಪ್ರಜ್ಞ’ನಲ್ಲಿ ಅಂತಃಸ್ಫುಟವಾಗಿದ್ದ ವಿದ್ವತ್ತು ಪ್ರಕಾಶಗೊಳ್ಳಲು ನೆರವಾಗುತ್ತಾರೆ ಪೂರ್ಣಪ್ರಜ್ಞ ಯತಿಯಾದರೋ ಅಷ್ಟೇ. ಒಮ್ಮೆ ಕೇಳಿದ ವಿಷಯವನ್ನು ಮರೆಯುವವರೆ ಅಲ್ಲ. ಸರಸ್ವತಿಯ ಅನುಗ್ರಹದಿಂದ ಭಾರತ-ಭಾಗವತಗಳು ಅವರ ನಾಲಗೆಯಲ್ಲಿ ವಿಜೃಂಭಿಸುತ್ತವೆ.

ಯಾವ ವಿಷಯದ ಬಗ್ಗೆಯಾಗಲಿ ನಿರ್ದಿಷ್ಟ ನಿಲುವು ಆ ಯತಿಯದು. ಹಿಂದಿನ ವ್ಯಾಖ್ಯಾನಕಾರರ ಟೀಕೆ-ಟಿಪ್ಪಣಿಗಳನ್ನು ಅಂಧಾನುಕರಣೆ ಮಾಡುವ ಪರಿಪಾಠವಿಲ್ಲದವರು. ಅಂದಿನ ಧಾರ್ಮಿಕ ಬಿರುಗಾಳಿಯಲ್ಲಿ ದಿಕ್ಕು ಕಾಣದೆ ವಿಸ್ತರಿಸ ಹೊರಟ ವೈದಿಕರು `ಅಹಂ ಬ್ರಹ್ಮಾಸ್ಮಿ’ಯನ್ನು `ನಾನೇ ಪರಬ್ರಹ್ಮ. ನನ್ನ ಆರಾಧನೆಯೆ ನಿಮ್ಮ ಗುರಿ’ ಎಂದು ತಮ್ಮನ್ನು ತಾವೇ ದೇವರೆಂದು ಕರೆದು ಅಮಾಯಕ ಭಕ್ತರನ್ನು ಶೋಷಿಸುತ್ತಿದ್ದರು. ಸಗುಣ ಬ್ರಹ್ಮನೆಂದರೆ ಕಾವಿ ಧರಿಸಿದ ಸಂನ್ಯಾಸಿ ಎಂಬ ಭಾವ ಬೇರೂರಿ ಆ ಸಂನ್ಯಾಸಿಯ ಸೇವೆಯೆ ಭಗವಂತನ ಸೇವೆ ಎಂಬ ವಾದ ಮುಂಚೂಣಿಯಲ್ಲಿತ್ತು.

ಜಗತ್ತು ಮಿಥ್ಯೆ ಅರ್ಥಾತ್ ಕ್ಷಣಿಕ ಎಂಬ ಶ್ರೀ ಶಂಕರರ ಮಾತನ್ನು ಭೂಮಿಯೆಂಬುದೇ ಇಲ್ಲ. ಅದು ಕೇವಲ ಭ್ರಮೆ ಎನ್ನುವಂತಹ ಮಾಯವಾದವೂ ತಲೆ ಎತ್ತಿ ಮೆರೆಯುತ್ತಿತ್ತು. ಶ್ರೀರಾಮನುಜರ ವಿಶಿಷ್ಟಾದ್ವೈತ ಸೀಮಿತ ವೈದಿಕ ಪ್ರಜ್ಞೆ ಎಂಬ ಅನಿಸಿಕೆ ಕೆಲವರದಾದರೆ, ಅದು ತ್ರಿಶಂಕು ವೇದಾಂತ ಎಂದು ಮತ್ತೆ ಹಲವರ ಟೀಕೆ-ಟಿಪ್ಪಣಿ. ಹೀಗಾಗಿ ನಿಜವಾದ ಜಿಜ್ಞಾಸುಗಳಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಹೇಳುವವವರೆ ಇಲ್ಲವಾಗಿ ನಾಸ್ತಿಕತೆ ಮೆರೆಯಲಾರಂಭಿಸಿತು.

ಈ ಎಲ್ಲ ಸಂದೇಹಗಳಿಗೆ ಸಮಾಧಾನಕರವಾದ ಉತ್ತರ ನೀಡಬೇಕೆಂಬ ಆಸಡ್ಡೆ ಬಲವತ್ತರವಾಗಿ ಪೂರ್ಣಪ್ರಜ್ಞರು ತಾವು ಅಚ್ಯುತಪ್ರಜ್ಞರ ಉತ್ತರಾಧಿಕಾರಿಯಾಗಲು ಸಮ್ಮಿತಿಸಿದರು. ಹೀಗೆ ಕೇವಲ ಸಂನ್ಯಾಸ ದೀಕ್ಷೆ ಮಾತ್ರ ಪಡೆದಿದ್ದ ಪೂರ್ಣಪ್ರಜ್ಞ ಗುರುಗಳ ಪೀಠವನ್ನೆರಿದಾಗ, ಅವನನ್ನು ಆರ್ಶೀರ್ವದಿಸಿ ಗುರುಗಳು ನೀಡಿದ ನಾಮಧೇಯ `ಆನಂದತೀರ್ಥ’ `ಆನಂದತೀರ್ಥ’. ಎಂಬುದು `ಮಧ್ವ’ ಎಂಬ ವೈದಿಕ ನಾಮದ ವಿವರಣೆ. ಆನಂದತೀರ್ಥ ಯತಿಗೆ ಈ ವೈದಿಕ ನಾಮವೇ ನಾಮದ ವಿವರಣೆ. ಆನಂದತೀರ್ಥ ಯತಿಗೆ ಈ ವೈದಿಕ ನಾಮವೇ ಪ್ರಿಯವಾಗಿ ಅದೇ ಅವರ ಕಾವ್ಯಾನಾಮವಾಯಿತು. ಪೂರ್ಣಬೋಧ ಭಕ್ತರು ಪ್ರೀತಿಯಿಂದ ಕರೆದ ಹೆಸರು. ದಶಪ್ರಮತಿ, ಸರ್ವಜ್ಞ, ದ್ವೈತಾಚಾರ್ಯ ಇನ್ನಿತರ ನಾಮಧೇಯಗಳು.

ಬಾಲ್ಯದಲ್ಲಿಯೆ ಯತಿಪಟ್ಟ ಕಟ್ಟಿಕೊಂಡ ಆನಂದತೀರ್ಥರಿಗೆ ಜಗತ್ತಿನ ಸೃಷ್ಠಿಯ ಬಗೆಗೆ, ಅದರಲ್ಲಿ ಕಾಣುವ ವಿಭಿನ್ನತೆಯ ಬಗೆಗೆ ಕುತೂಹಲ. ಅದ್ವೈತ ಅಭೇದದ ತತ್ತ್ವವನ್ನು ಪ್ರತಿಪಾದಿಸಿದರೆ ದ್ವೈತ ಜಗತ್ತಿನ ಸಕಲ ಚರಾಚರ ವಸ್ತುಗಳ ಭೇದವನ್ನು ಗುರುತಿಸುತ್ತದೆ. ವೈದಿಕ ಸಂಪ್ರದಾಯ ಯಾವುದನ್ನು ಗುರುತಿಸುತ್ತದೆ, ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವುದು ಭೇದವೋ ಅಥವಾ ಅಭೇದವೋ ಎಂಬ ಹುಡುಕಾಟ. ಈ ಹುಡುಕಾಟಕ್ಕಾಗಿ ಹದಿವಯಸ್ಸಿನಲ್ಲಿ ಕ್ಷೇತ್ರ ದರ್ಶನ. ಶ್ರೀರಂಗಂ, ಅನಂತ ಶಯನ, ಕನ್ಯಾಕುಮಾರಿ, ರಾಮೇಶ್ವರಗಳ ಯಾತ್ರೆ, ಆ ಯಾತ್ರೆಯ ಸಮಯದಲ್ಲಿ ದೇವ-ದೇವಿಯರಲ್ಲಿನ ಭೇದತ್ವ, ಮನುಷ್ಯ-ಮನುಷ್ಯರದಲ್ಲಿನ ಭೇದ, ಜಡವಸ್ತುಗಳಲ್ಲಿನ ಭೇದ, ಪ್ರಕೃತಿಯಲ್ಲಿನ ವೈವಿಧ್ಯ-ಇವೆಲ್ಲವನ್ನು ಗಮನಿಸಿದ ಪೂರ್ಣಪ್ರಜ್ಞರಿಗೆ ಜಗತ್ತು ಸತ್ಯ, ಅದು ಮಾಯೆಯಲ್ಲ, ಅದರ ನಿಯಂತ್ರಕ ಪರಮ ಸತ್ಯ. ಆ ನಿಯಂತ್ರಕ ಸ್ವತಂತ್ರ, ಅವನ ಇಚ್ಛೆಯಂತೆ ನಡೆಯುವ, ನಡೆಸುವ ಎಲ್ಲ ಘಟನೆಗಳು, ಕಾರಣ ಪುರುಷರು ಅಸ್ವತಂತ್ರ ಎಂಬ ಭಾವ ಅವರಿಗೆ ಸುಸ್ಪಷ್ಟವಾಗಿ ಮನದಟ್ಟಾಯಿತು. ಆ ಭೇದಗಳನ್ನು ಸ್ಥೂಲವಾಗಿ ಐದು ಭಾಗಗಳಾಗಿ ನೋಡಬಹುದೆಂದು ಮಧ್ವರು ವಿವರಿಸಿದ್ದು ಜೀವಕ್ಕೂ ಜೀವಕ್ಕೂ ಭೇದ, ಜೀವಕ್ಕೂ ಜಡಕ್ಕೂ ಭೇದ, ಜಡಕ್ಕೂ ಜಡಕ್ಕೂ ಭೇದ, ಜೀವಕ್ಕೂ ಪರಮಾತ್ಮನಿಗೂ ಭೇದ ಹಗೂ ಜಡಕ್ಕೂ ಪರಮಾತ್ಮನಿಗೂ ಭೇದ. ಆ ಪರಮಾತ್ಮನನ್ನು ಯವ ಹೆಸರಿನಿಂದ ಕರೆದರೂ ಒಂದೆ. ಆ ಭೇದ ಪ್ರಕೃತಿ ನಿಯಮ.

ಈ ಸತ್ಯವನ್ನು ಮನಗಂಡ ಮಧ್ವರು ತಮ್ಮ ದಕ್ಷಿಣ ಭಾರತ ಯಾತ್ರೆಯ ಅನಂತರ ಮಾಡಿದ ಮೊದಲ ಕೆಲಸ ಭಗವದ್ಗೀತೆಗೆ ಭಾಷ್ಯ ಬರೆದದ್ದು. ಆ ಭಾಷ್ಯದ ಹಿನ್ನೆಲೆಯಲ್ಲಿಯೇ, ಭಾರತೀಯ ತತ್ತ್ವಶಾಸ್ತ್ರದಲ್ಲಿ ಹೊಸದೊಂದು ವಿಚಾರಧಾರೇ ಪ್ರವಹಿಸತೊಡಗಿತು. ತಮ್ಮ ತತ್ತ್ವವಾದವನ್ನು ಪ್ರವಚನಗಳ ಮೂಲಕ ಪ್ರಚುರಪಡಿಸಿದ ಮಧ್ವರು ಅದುವರೆವಿಗೆ ಪ್ರಚಲಿತವಾಗಿದ್ದ ಇಪ್ಪತ್ತೊಂದು ವೇದಾಂತ ಭಾಷ್ಯಗಳಲ್ಲಿನ ವಿಷಯಕ್ಕೆ ಹೊರತಾದ ನೂತನ ರೂಪವನ್ನು ಕೊಟ್ಟು ವೇದಾಂತ ಜ್ಞಾನಪ್ರಿಯರನ್ನು ಆಕರ್ಷಿಸಿದರು. ಅಂದಿನ ಭಕ್ತ ಸಮೂಹ ಮಧ್ವರ ವಿಚಾರಧಾರೆಗೆ ಮನಸೋತು ಅವರಿಗೆ ಆಚಾರ್ಯ ಪಟ್ಟ ಕಟ್ಟಿದರು. ಶ್ರೀ ಶಂಕರ, ಶ್ರೀ ರಾಮಾನುಜರಂತೆ ಆನಂದತೀರ್ಥ. ಪೂರ್ಣಪ್ರಜ್ಞ ನಾಮಾಂಕಿತ ಮಧ್ವರು ಹದಿಹರೆಯದಲ್ಲಿಯೇ ಆಚಾರ್ಯ ಶ್ರೀ ಮಧ್ವರೆನಿಸಿ ಲೋಕ ವಿಖ್ಯಾತರಾದರು.

ಹೀಗೆ ಆಚಾರ್ಯಪಟ್ಟವೇರಿದ ಶ್ರೀ ಮಧ್ವರಿಗೆ ಬದರಿಯ ಆಕರ್ಷಣೆ ಬಹಳ. ತಾವು ಬರೆದ ಗೀತಾಭಾಷ್ಯವನ್ನು ಶ್ರೀ ವೇದವ್ಯಾಸರಿಗೆ ಸಮರ್ಪಿಸಬೇಕು. ಅದು ಅವರಿಗೆ ಸಮ್ಮತಿಯಾಗಬೇಕು. ಆಗಷ್ಟೆ ತಮ್ಮ ಭಾಷ್ಯಕ್ಕೆ ಮೌಲ್ಯ ಎಂಬ ವಿನಯಶೀಲತೆ ಆಚಾರ್ಯರದು. ಹೀಗಾಗಿ ಅವರ ಬದರಿಯಾತ್ರೆ. ಅಂದಿನ ದಿನಗಳಲ್ಲಿ `ಬದರಿಯಾತ್ರೆ’ ಸಾಮಾನ್ಯ ಸಂಗತಿಯಲ್ಲ ಇಂದಿನ ಕಾಲದ ರಸ್ತೆಗಳಾಗಲಿ, ವಾಹನ ಸೌಕರ್ಯವಾಗಲಿ ಇಲ್ಲದ ಆ ಕಾಲದಲ್ಲಿ ಹರಿದ್ವಾರ, ಹೃಷಿಕೇಶಗಳ ಮಾರ್ಗವಾಗಿ ಆಚಾರ್ಯರ ಪಯಣ, ಕೊರೆಯುವ ಚಳಿಯಲ್ಲಿ ಗಂಗೆಯ ಸ್ನಾನ, ದುರ್ಗಮವಾದ ಬೆಟ್ಟಗುಡ್ಡಗಳು, ಕಾಡು-ಕಣಿವೆಗಳ ಮಾರ್ಗದಲ್ಲಿ ಆಚಾರ್ಯರು ಕೇವಲ ಬೆರಳೆಣಿಕೆಯ ಶಿಷ್ಯ ಸಮೂಹದೊಂದಿಗೆ ಬದರಿನಾರಾಯಣ ದರ್ಶನಕ್ಕೆ ಹೊರಟರು.

ಕೇವಲ ಬದರಿನಾರಾಯಣನ ದರ್ಶನದಿಂದ ತೃಪ್ತರಾಗದ ಆಚಾರ್ಯರು, ಶಿಷ್ಯರನ್ನು ಅಲ್ಲಿಯೇ ಬಿಟ್ಟು ಮೂಲ ವ್ಯಾಸ ಬದರಿಯತ್ತ ಹೆಜ್ಜೆ ಹಾಕತೊಡಗಿದರು. ಮಾರ್ಗ ಮಧ್ಯದಲ್ಲಿ `ಮಾನ’ ಎಂಬ ಜಾಗದಲ್ಲಿ ಸರಸ್ವತಿ ನದಿಯ ಉಗಮ ಸ್ಥಾನಕ್ಕೆ ಭೇಟಿ. ಅಲ್ಲಿಯೇ ಶ್ರೀ ವೇದವ್ಯಾಸರು ಗುಹೆಯೊಂದರಲ್ಲಿ ಕುಳಿತು ಗಣಪತಿಗೆ ಉಕ್ತಲೇಖನ ನೀಡಿ ತಮ್ಮ ಭಾರತವನ್ನು ಬರೆಸಿದ್ದು. ಆ ಸ್ಥಳದಿಂದ ನರ-ನಾರಾಯಣ ಪರ್ವತಗಳನ್ನು ವೀಕ್ಷಿಸಿ ಮುಂದೆ ಉತ್ರ ಬದರಿ ಅಥವಾ ವ್ಯಾಸ ಶಿಷ್ಯರು ಅಪೂರ್ವ ಸ್ವಾಗತ ಬಯಸಿ ಗುರುಗಳೆಡೆಗೆ ಶ್ರೀಮಧ್ವರನ್ನು ಕರೆದೊಯ್ದರು. ಅಲ್ಲಿಗೆ ಬಂದ ಆಚಾರ್ಯರು ಶಿರ ಸಾಷ್ಟಾಂಗ ನಮಸ್ಕರಿಸಿ ತಮ್ಮ ಗೀತಾಭಾಷ್ಯವನ್ನು ಅವರಿಗೆ ಸಮರ್ಪಿಸಿದರು. ಅದರಿಂದ ಸಂತುಷ್ಟಗೊಂಡ ಶ್ರೀ ವೇದವ್ಯಾಸರು ಕಲಿಯುಗದ ಮಧ್ವರು ತ್ರೇತಾಯುಗದ ಹನುಮ, ದ್ವಾಪರದ ಭೀಮಸೇನರ ಅವತಾರವೆಂಬುದನ್ನು ಮನಗಂಡು ಅವರಿಗೆ ತಮ್ಮ ಬ್ರಹ್ಮಸೂತ್ರಾದಿ ಶಾಸ್ತ್ರಗಳ ಉಪದೇಶ ಮಾಡಿದರು.

ತ್ರೇತಾಯುಗದಲ್ಲಿ ಶ್ರೀರಾಮ ಭಕ್ತರಾಗಿ ದಾಸ್ಯ ಭಾವನೆಯಿಂದ ನಾರಾಯಣನ ಸೇವೆ ಮಾಡಿದರೆ, ದ್ವಾಪರದಲ್ಲಿ ಭೀಮಸೇನನ ಅವತಾರದಲ್ಲಿ ಶ್ರೀಕೃಷ್ಣನ ಕೈಂಕರ್ಯ ಮಾಡಿ ಸುಯೋಧನನ ಸಂಹಾರಕ್ಕೆ ಸಹಾಯಕರಾಗಿ ಕ್ಷತ್ರಿಯ ಧರ್ಮಾನುಷ್ಠಾಪನೆ ಮಾಡುತ್ತಾರೆ. ಅವರ ಮೂರನೆಯ ಅವತಾರವೇ ಮಧ್ವಾಚಾರ್ಯ ನಾಮಾಂಕಿತ ಯತಿಪುರುಷನದು. ಈ ಅವತಾರದಲ್ಲಿ ಬ್ರಾಹ್ಮಣ್ಯ ಧರ್ಮ ಮೆರೆದ ಆಚಾರ್ಯರು ಶ್ರೀವೇದವ್ಯಾಸರ ಗ್ರಂಥಗಳಿಗೆ ಸುಭಾಷ್ಯವನು ಬರೆಯುತ್ತಾರೆ.

ಆಚಾರ್ಯರು ಸ್ವತಃ ಶ್ರೀವೇದವ್ಯಾಸರ ಬಳಿ ಅಧ್ಯಯನ ಮಾಡಿದ ಕಾರಣ ಅವು ಪ್ರಮಾಣಬದ್ಧ. ಮೂಲತತ್ತ್ವಕ್ಕೆ ಅನುಗುಣ. ಆಚಾರ್ಯರ ಗೀತಾಭಾಷ್ಯವನ್ನು ಮೆಚ್ಚಿದ ವೇದವ್ಯಾಸ, ನಾರಾಯಣರ ಅನುಮತಿ ಆಚಾರ್ಯರಿಗೆ ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆಯಲು ಪ್ರೇರಣೆ. ಹೀಗಾಗಿ ಮೂಲ ಬದರಿಯಿಂದ ವಿಶಾಲ ಬದರಿಗೆ ಮರಳಿ ಬಂದ ಆಚಾರ್ಯರು, ಅಲ್ಲಿ ಮಾಡಿದ ಮೊದಲ ಕೆಲಸ ಬ್ರಹ್ಮಸೂತ್ರಗಳಿಗೆ ಭಾಷ್ಯ ರಚನೆ. ಅವರ ಕಾರ್ಯಕ್ಷೇತ್ರ ಬದರಿಯ ಅನಂತ ಮಠ; ಅಲ್ಲಿಗೆ ಬಂದಿದ್ದ ಶಿಷ್ಯರಲ್ಲಿ ಪ್ರಮುಖರು ಶ್ರೀ ಸತ್ಯತೀರ್ಥರೆಂಬ ಯತಿಗಳು. ಆಚಾರ್ಯರೊಂದಿಗೆ ಅಚ್ಯುತಪ್ರಜ್ಞರಲ್ಲಿ ಶಿಷ್ಯತ್ವ. ವಹಿಸಿ ವೇದಾಧ್ಯಯನ ಮಾಡಿದ ಸಹಪಾಠಿಗಳು. ಬದರಿ ವೃಕ್ಷದ ತಾಣದಲ್ಲಿ ಅನಂತನನ್ನು ನೋಡುತ್ತಾ ಅನಂತವನ್ನು ಚಿಂತಿಸುತ್ತಾ ಭಾಷ್ಯ ಬರೆದ ಶ್ರೇಯಸ್ಸು ಶ್ರೀ ಮಧ್ವಾಚಾರ್ಯರದು.

ಬದರಿಯಿಂದಲೆ ಆರಂಭವಾಯಿತು. ಮಧ್ವ ಯತಿಗಳ ದಿಗ್ವಿಜಯ ಯಾತ್ರೆ. ತಾವು ಪ್ರತಿಪಾದಿಸಿದ ತತ್ತ್ವವಾದವನ್ನು ಪ್ರವಚನಗಳ ಮೂಲಕ ವಿಶದೀಕರಿಸುತ್ತ ಉಡುಪಿಗೆ ಹಿಂದಿರುಗಿ ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಅನೇಕ ವಿದ್ವಾಂಸರು ಅವರ ತರ್ಕಕ್ಕೆ ಮನಸೋತು ಅವರ ಶಿಷ್ಯರಾಗಿ ಹಿಂಬಾಲಿಸುತ್ತಾರೆ. ದಿನೇ ದಿನೇ ಆಚಾರ್ಯರ ಕೀರ್ತಿ ಉತ್ತರ-ಮಧ್ಯ ಭಾರತವನ್ನು ಮುಟ್ಟುತ್ತದೆ.

ಗೋದಾವರಿ ತೀರದ ಕ್ಷೇತ್ರದಲ್ಲಿ ನಡೆಯುತ್ತಿದ್ದ ವಿದ್ವತ್ಸಭೆಯ ಮುಖ್ಯಸ್ಥರಾದ ಶೋಭನಭಟ್ಟರೆಂಬ ವೇದ ವಿದ್ವಾಂಸರ ಆಹ್ವಾನದ ಮೇರೆಗೆ ಆಚಾರ್ಯರು ಅಲ್ಲಿ ಭಾಗವಹಿಸುತ್ತಾರೆ. ಶೋಭನಭಟ್ಟರೇ ಸ್ವತಃ ದಾರ್ಶನಿಕರು. ವೇದ ವಿದ್ವಾಂಸರು. ಆ ಸಭೆಯ ಇತರ ವಿದ್ವಾಂಸರೂ ಅಷ್ಟೆ. ಅದುವರೆವಿಗೆ ರೂಢಿಯಲ್ಲಿದ್ದ ಸಮಸ್ತ ವೇದಾಂತ ತತ್ತ್ವಗಳ ಪಾರಂಗತರು. ಭಾರತಿ, ವಿಜಯರಿಂದ ಮೊದಲುಗೊಂಡು ಶಂಕರ, ರಾಮಾನುಜರ ತತ್ತ್ವಗಳಲ್ಲಿ ಅಚಲ ನಿಷ್ಠೆಯುಳ್ಳವರು. ಚಾರ್ವಾಕ, ಬೌದ್ಧ, ಕಣಾದ, ತಾರ್ಕಿಕ, ಕಪಿಲ ಇವರ ವಿಚಾರಧಾರೆಯನ್ನು ಅರಗಿಸಿಕೊಂಡವರು. ಸಭೆಯಲ್ಲಿ ಆಚಾರ್ಯರು ತಮ್ಮ ವಾದವನ್ನು ಮಂಡಿಸಿದಾಗ, ಆ ವಿದ್ವಾಂಸರುಗಳಿಂದ ಪ್ರಶ್ನೆಗಳ ಸುರಿಮಳೆ. ಆ ಪ್ರಶ್ನೆ ಮಾಲಿಕೆಗಳನ್ನು ತಮ್ಮ ತರ್ಕದಿಂದ, ವಾದದಿಂದ ಎದುರಿಸಿ, ದ್ವೈತ ವಾದದ ಶ್ರೇಷ್ಠತೆಯನ್ನು ಮೆರೆಸಿದ ಶ್ರೇಯಸ್ಸು ಆಚಾರ್ಯರದು.

ಆ ಮತಗಳಲ್ಲಿನ ವಿರೋಧಾಭಾಸಗಳನ್ನು ಎತ್ತಿ ಹಿಡಿದು, ತಮ್ಮ ಮತ ಯಾವ ರೀತಿ ಪ್ರಕೃತಿ ನಿಯಮಕ್ಕೆ ಅನುಗುಣ ಎಂದು ಮನವರಿಕೆ ಮಾಡಿಕೊಟ್ಟರು. ವಾದದಲ್ಲಿ ನಿರುತ್ತರರಾದ ಶೋಭನಭಟ್ಟರು, ಆಚಾರ್ಯರ ಪಾಂಡಿತ್ಯವನ್ನು, ತರ್ಕವನ್ನು ಒಪ್ಪಿಕೊಂಡು ಮಧ್ವ ಮತದ ಪ್ರಪ್ರಥಮ ಹರಿಕಾರರಾಗುತ್ತಾರೆ. ಆಚಾರ್ಯರು ಹೇಳುವುದು, ಅವರು ವಿವರಣೆ ನೀಡುವುದು ಪ್ರವಚನಗಳ ಪದ್ಧತಿಯಾಗಿ ಬಿಡುತ್ತದೆ. ಆಚಾರ್ಯರ ಟೀಕೆಗಳನ್ನು ತಾಳೆಗರಿಗಳ ಮೇಲೆ ಮೂಡಿಸಿದ ಸೌಭಾಗ್ಯ ಸತ್ಯತೀರ್ಥರದ್ದಾಗುತ್ತದೆ.

ಉಡುಪಿಗೆ ಬಂದ ಆಚಾರ್ಯರಿಗೆ ಪಡುವಣ ಕಡಲಿನಲ್ಲಿ ದೊರಕಿದ ಮೂರ್ತಿ ಬಾಲಕೃಷ್ಣ. ಚಂದನದ ಗಡ್ಡೆಯಲ್ಲಿ ಹುದುಗಿದ್ದ ಈ ಮೂರ್ತಿ ದ್ವಾರಕೆಯಿಂದ ಬಂದಿದೆಯೆಂಬ ನಂಬಿಕೆ ಭಕ್ತರದು. ಈ ಬಾಲಕೃಷ್ಣನನ್ನು ಆಚಾರ್ಯರು ಉಡುಪಿಯ ಅನಂತೇಶ್ವರ ದೇಗುಲದ ಪಕ್ಕದಲ್ಲಿ ಪ್ರತಿಷ್ಠಾಪಿಸುತ್ತಾರೆ. ಪಶ್ಚಿಮಾಭಿಮುಖವಾಗಿರುವ ಈ ಮೂರ್ತಿಯೇ ಇಂದಿಗೂ ಉಡುಪಿಯಲ್ಲಿ ಪೂಜೆಗೊಳ್ಳುತ್ತಿದೆ. ಈ ಮಂದಿರದ ನಿರ್ಮಾಣವಾದ ದಿನದಿಂದ ಹಿಡಿದು ಇಂದಿಗೂ ಅದು ಮಧ್ವ ಮತದ ಕೇಂದ್ರಸ್ಥಾನವಾಗಿದೆ. ಈ ಪರಿಸರದಲ್ಲಿಯೇ ಆಚಾರ್ಯರು ಸುಮಾರು ಮೂವತ್ತೇಳು ಗ್ರಂಥಗಳನ್ನು ರಚಿಸಿದ್ದು ಅವುಗಳಲ್ಲಿ ದ್ವಾದಶ ಸ್ತೋತ್ರ, ಮಹಾಭಾರತ ತಾತ್ಪರ್ಯ ನಿರ್ಣಯ, ಭಾಗವತ ತಾತ್ಪರ್ಯ ನಿರ್ಣಯ, ಗೀತೆ ಮತ್ತು ಬ್ರಹ್ಮಸೂತ್ರಗಳ ಮೇಲಿನ ಭಾಷ್ಯ, ಉಪನಿಷತ್ಪ್ರಸ್ಥಾನ ಗ್ರಂಥಗಳು ಪ್ರಮುಖವೆನಿಸಿವೆ. ಆಚಾರ್ಯರ ಗ್ರಂಥಗಳನ್ನು `ಸರ್ವಮೂಲಗ್ರಂಥ’ಗಳೆಂದು ಗೌರವದಿಂದ ಸಂಬೋಧಿಸಲಾಗುತ್ತದೆ. ಈ ಒಂದೊಂದು ಗ್ರಂಥ ರಚನೆಗೂ ವಿಶೇಷ ಹಿನ್ನೆಲೆಯಿದ್ದು ಅವು ಮಧ್ವಮತದ ಪರಮ ಪವಿತ್ರ ಆಕರ ಗ್ರಂಥಗಳಾಗಿವೆ.

ಅವರ ಪ್ರತಿಯೊಂದು ಮೆರಗು ಮಿಂಚಿದ್ದು, ಗೇಯತೆಯಲ್ಲಿ ಅಸಾಧಾರಣವಾಗಿದ್ದು ಅನೇಕ ವಿದ್ವಾಂಸರತು, ಮಠಾಧಿಪತಿಗಳು ಅವುಗಳಿಗೆ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ವ್ಯಾಖ್ಯಾನಗಳ ಸಹಾಯವಿಲ್ಲದೆ ಅವುಗಳನ್ನು ಅರ್ಥೈಸುವುದು ಬಹಳ ಕಠಿಣ. ಶಾಸ್ತ್ರ ಗ್ರಂಥಗಳೆನಿಸಿದ ಅವುಗಳನ್ನು ಗುರು ಮುಖೇನವೇ ಅಧ್ಯಯನ ಮಾಡಬೇಕು.
ಆಚಾರ್ಯರು ಬದರಿಯ ಸೆಳೆತದಿಂದ ಮತ್ತೊಮ್ಮೆ ಉತ್ತರ ಭಾರತದ ಯಾತ್ರೆಯನ್ನು ಕೈಗೊಂಡು, ಮಧ್ವಮತದ ದುಂದುಭಿಯನ್ನು ಮೊಳಗುತ್ತಾರೆ. ಈ ಬಾರಿಯ ಯಾತ್ರೆಯಲ್ಲಿ ಅವರು ಮುಸಲ್ಮಾನರ, ಚೋರರ ಸಂಪರ್ಕಕ್ಕೆ ಬಂದು, ಆ ಜನವೂ ಸಹ ಅವರ ವಿದ್ವತ್ತಿಗೆ, ಮಾನವೀಯತೆಗೆ ಮರುಳಾಗಿ, ತಮ್ಮ ಗೌರವವನ್ನು ಸೂಚಿಸಿ ಆಚಾರ್ಯರ ಪಯಣ ಸುಗಮವಾಗಲು ಸಹಕರಿಸುತ್ತಾರೆ.

ವ್ಯಾಸ-ನಾರಾಯಣನ ದರ್ಶನದ ಅನಂತರ ಹಿಂದಿರುಗಿದ ಆಚಾರ್ಯರು ಶ್ರೀಕೃಷ್ಣನ ಅನವರತ ಪೂಜೆಗಾಗಿ ಅಷ್ಟ ಮಠಗಳನ್ನು ಸ್ಥಾಪಿಸಿ ಅದಕ್ಕೆ ಯೋಗ್ಯ ಯತಿಗಳನ್ನು ನೇಮಿಸುತ್ತಾರೆ. ಆ ಅಷ್ಟ ಮಠಗಳ ಪೂಜಾ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಅವುಗಳ ಕೇಂದ್ರ ಸ್ಥಾನಗಳು ಫಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ ಕಾಣಿಯೂರು ಮತ್ತು ಪೇಜಾವರ.

ಅವರ ಶಿಷ್ಯರಲ್ಲಿ ಪ್ರಮುಖರು ಪದ್ಮನಾಭತೀರ್ಥ, ನರಹರಿತೀರ್ಥ, ಮಾಧವತೀರ್ಥ ಮತ್ತು ಅಕ್ಷೋಭತೀರ್ಥರು. ಇವರುಗಳೆ ಇಂದಿನ ಮಾಧ್ವ ಮಠಗಳಾದ ಉತ್ತರಾದಿ ಮಠ, ವ್ಯಾಸರಾಯ ಮಠ, ರಾಘವೇಂದ್ರ ಮಠ ಮತ್ತು ಮುಳುಬಾಗಿಲು ಶ್ರೀಪಾದರಾಜ ಮಠಗಳ ಮೂಲ ಪುರುಷರು. ಉತ್ತರೋತ್ತರ ಈ ಮಠಗಳು ಕವಲೊಡೆದು ಅನೇಕ ವಿಭಜನೆಗಳಾಗಿವೆ.
ಆಚಾರ್ಯರಿಂದ ಪ್ರಭಾವಿತರಾದವರಲ್ಲಿ ಗೌಡ ಸಾರಸ್ವತರು ಹಾಗೂ ಅಂತಾರಾಷ್ಟ್ರೀಯ ಹರೇ ಕೃಷ್ಣ ಪಂಥದ ಮೂಲ ಪುರುಷ ಪ್ರಭುಪಾದರೂ ಸೇರಿದ್ದಾರೆ. ಅವರೂ ಮಧ್ವ ಸಿದ್ಧಾಂತಗಳನ್ನು ಒಪ್ಪುತ್ತಾ ಶ್ರೀಕೃಷ್ಣ ಸರ್ವೋತ್ತಮ ತತ್ತ್ವವನ್ನು ಪರಿಪಾಲಿಸುತ್ತಾರೆ.

ಮಧ್ವರ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದವರಲ್ಲಿ ಶ್ರೀ ಶ್ರೀಪಾದರಾಜರು, ಶ್ರೀ ವ್ಯಾಸರಾಜರು, ಶ್ರೀ ವಾದಿರಾಜತೀರ್ಥರು, ಶ್ರೀ ಜಯತೀರ್ಥರು, ಶ್ರೀ ರಾಘವೇಂದ್ರತೀರ್ಥರು ಪ್ರಮುಖರು. ಈ ಯತಿಗಳು ಕೇವಲ ವ್ಯಾಸಕೂಟಸ್ಥರಲ್ಲ. ಗೃಹಸ್ಥರನ್ನು ದಾಸರಾಗಲು ಪ್ರೇರಣೆ ನೀಡಿದವರು. ಕರ್ನಾಟಕ ಸಂಗೀತ ಪಿತಾಮಹ ಶ್ರೀಪುರಂದರದಾಸರು, ಶ್ರೀ ಕನಕದಾಸರು, ಶ್ರೀ ವಿಜಯದಾಸರು, ಶ್ರೀಜಗನ್ನಾಥದಾಸರು ಆಚಾರ್ಯ ಶ್ರೀಮಧ್ವರ ತತ್ತ್ವಗಳನ್ನು ಜನಸಾಮಾನ್ಯರ ಹತ್ತಿರ ತಂದವರು.

ಶ್ರೀಮಧ್ವಾಚಾರ್ಯರ ಜೀವನ ಚರಿತ್ರೆಯನ್ನು, ಅವರ ಸಾಕ್ಷಾತ್ ಶಿಷ್ಯರಾಗಿದ್ದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀ ನಾರಾಯಣ ಪಂಡಿತಾಚಾರ್ಯರು ಸಂಸ್ಕøತ ಕಾವ್ಯ ರೂಪದಲ್ಲಿ ಬರೆದಿದ್ದು `ಸುಮಧ್ವವಿಜಯ’ ಎಂದು ಹೆಸರಿಸಿದ್ದಾರೆ. ಅದೊಂದು ಅಧಿಕೃತ ಚಾರಿತ್ರಿಕ ಕೃತಿಯಾಗಿದ್ದು ಆ ಗುರು ಚರಿತ್ರೆಯ ಪಠನ ಮಂಗಳಕರವಾಗಿದೆ. ವಾಯುದೇವರ ಅವತಾರವೆಂದೇ ಪರಿಗಣಿಸಲಾಗಿರುವ ಶ್ರೀ ಮಧ್ವಾಚಾರ್ಯರು ತಾವು ಹನುಮ-ಭೀಮರ ಅನಂತರ ಬಂದವರೆಂದು ತಮ್ಮ ಅಸಾಧಾರಣ ಭೀಮ ಬಲದ ಕಾರ್ಯಗಳಿಂದ ನಿರೂಪಿಸಿದ್ದಾರೆ. ಅವರು ಈ ಜಗತ್ತಿನ ಜಂಜಾಟದಿಂದ ದೂರ ಸರಿಯಲು ಸೂಕ್ಷ್ಮ ರೂಪ ಧರಿಸಿ ಉಡುಪಿಯಿಂದ ಬದರಿಗೆ ತೆರಳಿದ ಘಟನೆ ಇದನ್ನು ಸಮರ್ಥಿಸುತ್ತದೆ.

ಆಚಾರ್ಯರ ಉತ್ತುಂಗ ವ್ಯಕ್ತಿತ್ವಕ್ಕೆ ದರ್ಪಣವೆಂಬಂತೆ 23 ಅಡಿ ಎತ್ತರದ ಅವರ ಶಿಲಾಮೂರ್ತಿಯನ್ನು 8 ಅಡಿ ಪಾಣಿಪೀಠದ ಮೇಲೆ 40 ಅಡಿ ಎತ್ತರದ ಕಾಂಕ್ರೀಟಿನ ಹಂದರದ ಮೇಲೆ ಕುಂಜಾರುಗಿರಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಭವ್ಯಮೂರ್ತಿಗೆ ದಿವ್ಯ ಸ್ಮಾರಕ ರೂಪಿಸಿದ ಕೀರ್ತಿ ಉಡುಪಿಯ ಶ್ರೀ ಫಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರದಾಗಿದೆ.

ಆಚಾರ್ಯರು ಉಡುಪಿಯ ಅನಂತೇಶ್ವರ ದೇಗುಲದಿಂದ ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ –ಅಂದರೆ ಮಾಘ ಶುದ್ಧ ನವಮಿ, ಕ್ರಿ. ಶ. 1280- ಬದರಿಯೆಡೆಗೆ ಸೂಕ್ಷ್ಮ ರೂಪಿನಿಂದ ತೆರಳುತ್ತಾರೆ. ಆ ದಿನವನ್ನು `ಮಧ್ವ ನವಮಿ’ಯಂದು ಆಚರಿಸಲಾಗುತ್ತಿದೆ. ಸೂಕ್ಷ್ಮ ರೂಪದಲ್ಲಿ ಅದೃಶ್ಯರಾದ ಕಾರಣ, ಅವರ ಹೆಸರಿನಲ್ಲಿ ಯಾವುದೇ ಬೃಂದಾವನ ಇರುವುದಿಲ್ಲ. ಅವರು ಅದೃಶ್ಯರಾದ ಸ್ಥಳವನ್ನು ಅನಂತೇಶ್ವರ ದೇಗುಲದಲ್ಲಿ ಗುರುತು ಮಾಡಿರುತ್ತಾರೆ.

ಆಚಾರ್ಯ ಶ್ರೀ ಮಧ್ವರನ್ನು ಶ್ರೀ ಶ್ರೀಪಾದರಾಜ ಯತಿಗಳು ತಮ್ಮ `ಮಧ್ವ ಸ್ತುತಿ’ಯಲ್ಲಿ ಹೀಗೆ ವರ್ಣಿಸುತ್ತಾರೆ.

ಜಯ ಜಯ ಜಗತ್ರಾಣ, ಜಗದೊಳಗೆ ಸುತ್ರಾಣ
ನಿಖಿಳ ಗುಣ ಸದ್ಧಾಮ, ಮಧ್ವ ನಾಮ

ಶ್ರೀಮಧ್ವಾಚಾರ್ಯರು ರಚಿಸಿರುವ `ಸರ್ವಮೂಲ’ವೆಂಬ ಮೂವತ್ತೇಳು ಗ್ರಂಥಗಳು
1. ಗೀತಾ ಪ್ರಸ್ಥಾನ – 1. ಗೀತಾ ಭಾಷ್ಯ, 2. ಗೀತಾ ತಾತ್ಪರ್ಯ ನಿರ್ಣಯ
2. ಸೂತ್ರ ಪ್ರಸ್ಥಾನ – 1. ಬ್ರಹ್ಮಸೂತ್ರ ಭಾಷ್ಯ 2. ಅಣು ವ್ಯಾಖ್ಯಾನ 3. ನ್ಯಾಯ ವಿವರಣ 4. ಅಣು ಭಾಷ್ಯ
3. ಉಪನಿಷತ್ ಪ್ರಸ್ಥಾನ – ಎಲ್ಲ ಹತ್ತು ಮುಖ್ಯ ಉಪನಿಷತ್ತುಗಳ ಮೇಲೆ ಭಾಷ್ಯ
4. ಋಗ್ಭಾಷ್ಯ – ಋಗ್ವೇದದ ಮೊದಲ ಋಕ್ಕುಗಳಿಗೆ ಅರ್ಥ.
5. ಪ್ರಕರಣಗಳು- ಕಥಾಲಕ್ಷಣ, ಪ್ರಮಾಣ ಲಕ್ಷಣ, ತತ್ತ್ವಸಂಖ್ಯಾನ, ತತ್ತ್ವವಿವೇಕ, ಮಾಯವಾದ ಖಂಡನ, ಮಿಥ್ಯಾತ್ವಾನುಮಾನ ಖಂಡನ, ಉಪಾದಿ ಖಂಡನ, ತತ್ತೋದ್ಯೋತ, ಶ್ರೀಮದ್ವಿಷ್ಣುತತ್ತ್ವನಿರ್ಣಯ.
6. ಪುರಾಣೇತಿಹಾಸ- ಮಹಾಭಾರತ ತಾತ್ಪರ್ಯ ನಿರ್ಣಯ, ಭಾಗವತ ತಾತ್ಪರ್ಯ, ಯಮಕ ಭಾರತ.
7. ಸ್ತೋತ್ರಗಳು- ದ್ವಾದಶ ಸ್ತೋತ್ರ, ನರಸಿಂಹ ನಖ ಸ್ತೋತ್ರ, ಕೃಷ್ಣಾಮೃತ ಮಹಾರ್ಣವ, ಜಯಂತೀ ನಿರ್ಣಯ, ಯತಿ ಪ್ರಣವ ಕಲ್ಪ, ಸದಾಚಾರ ಸ್ಮೃತಿ.

-ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಸಂಸ್ಕೃತಿ ಚಿಂತಕರು – 9035618076

Summery: Madhvacharya, sometimes anglicised as Madhva Acharya, and also known as Pūrna Prajña and Ānanda Tīrtha, was a Hindu philosopher and the chief proponent of the Dvaita school of Vedanta. Madhva called his philosophy Tattvavāda meaning “arguments from a realist viewpoint.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಬೆಳಕಿನ ಹಬ್ಬ ದೀಪಾವಳಿ ತರದಿರಲಿ ನಿಮ್ಮ ಬಾಳಿಗೆ ಅಂಧಕಾರ

Upayuktha

ಕಲಬುರ್ಗಿ ಯಲ್ಲಿ 73ನೇ ಕಲ್ಯಾಣ ಕರ್ನಾಟಕ ಉತ್ಸವ

Harshitha Harish

ನ. 3ರಂದು ಬಹಾಯಿ ಆಧ್ಯಾತ್ಮಿಕ ಸಭೆ 

Upayuktha

Leave a Comment