ದೇಶ-ವಿದೇಶ ಪ್ರಮುಖ

ಚಂದಿರನ ನೆಲದಲ್ಲಿ ಇಡಿಯಾಗಿರುವ ವಿಕ್ರಮ್ ಲ್ಯಾಂಡರ್; ಮತ್ತೆ ಸಂಪರ್ಕದ ಭರವಸೆಯಲ್ಲಿ ಇಸ್ರೋ

ವಾಲಿದ ಸ್ಥಿತಿಯಲ್ಲಿರುವ ಲ್ಯಾಂಡರ್ ವಿಕ್ರಮ್ (ಚಿತ್ರ ಕೃಪೆ: ಇಸ್ರೋ ಟ್ವಿಟರ್)

ಬೆಂಗಳೂರು: ಚಂದ್ರಯಾನ-2 ಭಾಗವಾದ ವಿಕ್ರಮ್ ಲ್ಯಾಂಡರ್ ಜತೆ ಮತ್ತೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಇಸ್ರೋ ಇನ್ನೂ ಭರವಸೆ ಕಳೆದುಕೊಂಡಿಲ್ಲ. ಚಂದ್ರನ ನೆಲದಲ್ಲಿ ಇಳಿದಿರುವ (ಹಾರ್ಡ್‌ ಲ್ಯಾಂಡಿಂಗ್) ವಿಕ್ರಮ್ ಅನ್ನು ಚಂದ್ರಯಾನ-2 ಕಕ್ಷೆಗಾಮಿಯ ಮೂಲಕ ಇಸ್ರೋ ಪತ್ತೆ ಮಾಡಿದ್ದು, ಸದ್ಯ ವಿಕ್ರಮ್ ಸ್ವಲ್ಪ ವಾಲಿಕೊಂಡಂತೆ ನಿಂತಿದೆ.

ರೋವರ್ ಪ್ರಜ್ಞಾನ್ ಅನ್ನು ತನ್ನ ಹೊಟ್ಟೆಯೊಳಗೆ ಇರಿಸಿಕೊಂಡಿರುವ ವಿಕ್ರಮ್ ಅಂತಿಮ ಕ್ಷಣದಲ್ಲಿ ಕೇವಲ 2.1 ಕಿ.ಮೀ ದೂರದಲ್ಲಿದ್ದಾಗ ನಿಯಂತ್ರಣ ಕೇಂದ್ರದ ಜತೆ ಸಂಪರ್ಕ ಕಡಿದುಕೊಂಡು ಚಂದಿರನ ನೆಲದ ಮೇಲೆ ಬಿತ್ತು.

‘ಪೂರ್ವ ನಿಗದಿತ ಸ್ಥಳದ ಸಮೀಪದಲ್ಲೇ ವಿಕ್ರಮ್‌ ಹಾರ್ಡ್ ಲ್ಯಾಂಡಿಂಗ್ ಆಯಿತು. ಲ್ಯಾಂಡರ್ ಈಗಲೂ ಇಡಿಯಾಗಿಯೇ ಇದ್ದು ಸ್ವಲ್ಪ ಬಾಗಿದ ಸ್ಥಿತಿಯಲ್ಲಿದೆ’ ಎಂದು ಇಸ್ರೋ ಅಧಿಕಾರಿ ತಿಳಿಸಿದರು.

ಲ್ಯಾಂಡರ್ ಜತೆ ಸಂಪರ್ಕ ಮರುಸ್ಥಾಪನೆ ಸಾಧ್ಯವೇ ಎಂಬ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಇಸ್ರೋ ಟೆಲಿಮಿಟ್ರಿ, ಟ್ರ್ಯಾಕಿಂಗ್‌ ಮತ್ತು ಕಮಾಂಡ್‌ ನೆಟ್‌ವರ್ಕ್‌ (ಇಸ್ಟ್ರಾಕ್‌) ಕೇಂದ್ರದಲ್ಲಿ ವಿಜ್ಞಾನಿಗಳ ಒಂದು ತಂಡ ಈ ನಿಟ್ಟಿನಲ್ಲಿ ಸತತವಾಗಿ ಶ್ರಮಿಸುತ್ತಿದೆ’ ಎಂದು ಅವರಿ ತಿಳಿಸಿದರು.

ಚಂದ್ರಯಾನ-2 ಯೋಜನೆಯಲ್ಲಿ ಆರ್ಬಿಟರ್‌ (ಕಕ್ಷೆಗಾಮಿ) ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್‌) ಎಂಬ ಮೂರು ಭಾಗಗಳು ಸೇರಿವೆ.

ಲ್ಯಾಂಡರ್ ಮತ್ತು ರೋವರ್‌ಗಳಿಗೆ ಚಂದ್ರನ ನೆಲದಲ್ಲಿ ಒಂದು ದಿನದ (ಭೂಮಿಯ ಲೆಕ್ಕಾಚಾರದಲ್ಲಿ 14 ದಿನ) ಆಯುಷ್ಯವಿದೆ. ಈ 14 ದಿನಗಳ ಅವಧಿಯಲ್ಲಿ ಲ್ಯಾಂಡರ್ ಜತೆ ಸಂಪರ್ಕ ಸಾಧಿಸಲು ಇಸ್ರೋ ಸತತ ಪ್ರಯತ್ನ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಶನಿವಾರ ಪ್ರಕಟಿಸಿದ್ದರು. ಭಾನುವಾರ ಚಂದ್ರನ ನೆಲದ ಮೇಲೆ ಲ್ಯಾಂಡರ್‌ ಪತ್ತೆಯಾದ ಬಳಿಕ ಪುನಃ ಅದೇ ಮಾತನ್ನು ಪುನರುಚ್ಚರಿಸಿದ್ದರು.

ಲ್ಯಾಂಡರ್‌ ಭಗ್ನವಾಗದೆ ಸಂಪೂರ್ಣ ಇಡಿಯಾಗಿದ್ದರೆ ಮಾತ್ರ ಸಂಪರ್ಕ ಮರುಸ್ಥಾಪನೆ ಸಾಧ್ಯತೆ ಇರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದರು. ಇದೀಗ ಆರ್ಬಿಟರ್‌ ಕಳುಹಿಸಿದ ಚಿತ್ರವನ್ನು ಗಮನಿಸಿದರೆ ವಿಕ್ರಮ್ ಸ್ವಲ್ಪ ವಾಲಿಕೊಂಡಿದ್ದನ್ನು ಬಿಟ್ಟರೆ ಇಡಿಯಾಗಿಯೇ ಇದೆ. ಹೀಗಾಗಿ ಸಂಪರ್ಕ ಮರುಸ್ಥಾಪನೆ ಸಾಧ್ಯತೆ ಇನ್ನೂ ಹಸಿರಾಗಿದೆ.

ಲ್ಯಾಂಡರ್‌ನಲ್ಲಿ ವಿದ್ಯುತ್ ಉತ್ಪಾದನೆ ಕಷ್ಟವೇನೂ ಅಲ್ಲ. ಅದರ ಸುತ್ತಲೂ ಸೋಲಾರ್ ಫಲಕಗಳಿದ್ದು ವಿದ್ಯುಚ್ಛಕ್ತಿ ಲಭ್ಯವಿದೆ. ಅಲ್ಲದೆ ಆಂತರಿಕವಾಗಿ ಜೋಡಿಸಿರುವ ಬ್ಯಾಟರಿಯಲ್ಲೂ ಸಾಕಷ್ಟು ಇಂಧನವಿದೆ. ಹೀಗಾಗಿ ಸಂಪರ್ಕ ಮರು ಸ್ಥಾಪನೆ ಸಾಧ್ಯತೆ ಉಜ್ವಲವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Related posts

ಪಂಜಾಬಿ ಸಾಹಿತಿ ಅಮೃತಾ ಪ್ರೀತಂ ಜನ್ಮ ಶತಮಾನೋತ್ಸವಕ್ಕೆ ಗೂಗಲ್‌ನಿಂದ ವಿಶೇಷ ಡೂಡಲ್‌

Upayuktha

ಬೆಂಗಳೂರಿನ ಶ್ರೀಭಾರತೀ ವಿದ್ಯಾಲಯದಲ್ಲಿ ಸ್ವಾತಂತ್ರೋತ್ಸವ

Upayuktha

ವಿವಾಹವಾಗಲು ನಿರಾಕರಣೆ ; ಯುವತಿ ಆತ್ಮಹತ್ಯೆ ಗೆ ಶರಣು

Harshitha Harish