ದೇಶ-ವಿದೇಶ ಪ್ರಮುಖ

ತೃಣಮೂಲ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ, ಬಿಜೆಪಿ ಕಚೇರಿಗೆ ಬೆಂಕಿ

ಕೋಲ್ಕತ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳುವುದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ.

ತೃಣಮೂಲ ಕಾಂಗ್ರೆಸ್‌ಗೆ ತೀವ್ರ ಸ್ಪರ್ಧೆ ಒಡ್ಡಿದ್ದ ಬಿಜೆಪಿಯು ರಾಜ್ಯದಲ್ಲಿ 75ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಪ್ರಮುಖ ವಿರೋಧ ಪಕ್ಷವಾಗಿ ಮೂಡಿಬಂದಿದೆ. ಚುನಾವಣೆಗೂ ಮೊದಲೇ ತೀವ್ರ ರಾಜಕೀಯ ಹಿಂಸಾಚಾರಗಳನ್ನು ಕಂಡಿದ್ದ ರಾಜ್ಯದಲ್ಲಿ ಇಂದು ಮತ್ತೆ ಬಿಜೆಪಿ ಕಚೇರಿಗಳಿಗೆ ಹಲವೆಡೆ ಬೆಂಕಿ ಹಚ್ಚಿ ಸುಟ್ಟುಹಾಕಲಾಗಿದೆ.

ತೃಣಮೂಲ ಕಾಂಗ್ರೆಸ್‌ನ ಗೂಂಡಾಗಳು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಪಕ್ಷದ ನಾಯಕ ಬಿ.ಎಲ್ ಸಂತೋಷ್ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದರೆ ಏನಾಗುತ್ತದೆ ಎಂಬುದು ಇಂದು ಸಾಬೀತಾಗಿದೆ. ಇವರು ಯಾವ ಬಗೆಯ ಆಡಳಿತ ನೀಡುತ್ತಾರೆ ಎಂಬುದಕ್ಕೂ ಇದು ದಿಕ್ಸೂಚಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿದ್ದು ಒಬ್ಬ ಬಿಜೆಪಿ ಕಾರ್ಯಕರ್ತನ ಹತ್ಯೆ ಕೂಡ ನಡೆದಿರುವುದಾಗಿ ಮಾಹಿತಿ ಬಂದಿದೆ.

ಆರಾಮ್‌ಬಾಗ್‌, ಬಿಷ್ಣುಪುರ್‌, ಎಂತಾಲಿ, ಹೌರಾ ಮತ್ತು ಬೋಲ್‌ಪುರ್‌ ಪ್ರದೇಶಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆಯೂ ಗೂಂಡಾಗಳು ದಾಳಿ ನಡೆಸುತ್ತಿದ್ದಾರೆ ಎಂದು ಪಕ್ಷ ದೂರಿದೆ.

ಆದರೆ ತೃಣಮೂಲ ನಾಯಕರು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ತಾರಾ ನಾಯಕರು ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರು. ಪರಿಣಾಮವಾಗಿ, ಕಳೆದ ಚುನಾವಣೆಯಲ್ಲಿ ಕೇವಲ 3 ಶಾಸಕರನ್ನು ಹೊಂದಿದ್ದ ಬಿಜೆಪಿ ಈ ಬಾರಿ 75ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಪ್ರಧಾನ ಪ್ರತಿಪಕ್ಷವಾಗಿ ಬೆಳೆದಿದೆ.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಸ್ಯಾಮ್‌ಸಂಗ್‌ ಸಂಸ್ಥೆ ಅಧ್ಯಕ್ಷ ಲೀ ಕುನ್ ಹೀ ನಿಧನ

Harshitha Harish

ಜಲಿಯನ್‌ವಾಲಾ ಬಾಗ್ ಸ್ಮಾರಕ ಟ್ರಸ್ಟ್‌ನಿಂದ ಕಾಂಗ್ರೆಸ್ ಅಧ್ಯಕ್ಷರಿಗೆ ಗೇಟ್‌ಪಾಸ್; ವಿಧೇಯಕಕ್ಕೆ ಸಂಸತ್ ಅಂಗೀಕಾರ

Upayuktha

ಬೆಳ್ತಂಗಡಿ: ಮಹಾನಗರ ಪಾಲಿಕೆ, ದ.ಕ‌.ಜಿ.ಪಂ ಹಾಗೂ ತಾ.ಪಂ. ಸದಸ್ಯರ ಕ್ರೀಡಾಕೂಟ

Sushmitha Jain