ಪ್ರಮುಖ ರಾಜ್ಯ

ತಕ್ಷಶಿಲೆ ಮಾದರಿಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಏ.26ಕ್ಕೆ ಲೋಕಾರ್ಪಣೆ: ರಾಘವೇಶ್ವರ ಶ್ರೀಗಳ ಘೋಷಣೆ

ಮಂಗಳೂರು: ಗೋಕರ್ಣದ ಸಮೀಪ ಅಶೋಕೆಯ ಸ್ವಚ್ಛ ಸುಂದರ ಪರಿಸರದಲ್ಲಿನ ನಿರ್ಮಾಣಗೊಳ್ಳುತ್ತಿರುವ ಭಾರತೀಯ ವಿದ್ಯೆ, ಕಲೆ, ಸಂಸ್ಕೃತಿಗಳಿಗೇ ಮೀಸಲಾದ ತಕ್ಷಶಿಲೆ ಮಾದರಿಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಏಪ್ರಿಲ್ 26ರಂದು ಲೋಕಾರ್ಪಣೆಯಾಗಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರಕಟಿಸಿದರು.

ಮಂಗಳೂರಿನ ಕುಂಜತ್‌ಬೈಲಿನ ಮಾರುತಿ ಬಡಾವಣೆಯಲ್ಲಿ ಆಯೋಜಿಸಲಾದ ಎರಡು ದಿನಗಳ ಗೋಸತ್ಸಂಗ ಮತ್ತು ಆಶೀರ್ವಚನ ಕಾರ್ಯಕ್ರಮಗಳ ಕೊನೆಯಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಶ್ರೀಗಳು ಈ ವಿಚಾರ ಪ್ರಕಟಿಸಿದರು.

ವಿವಿವಿ ಕುರಿತು ಶ್ರೀಗಳು ಸುದ್ದಿಗೋಷ್ಠಿಯಲ್ಲಿ ನೀಡಿದ ವಿವರವಾದ ಮಾಹಿತಿ ಇಲ್ಲಿದೆ:

ನಶಿಸಿ ಹೋಗುತ್ತಿರುವ ಭಾರತೀಯ ವಿದ್ಯೆ ಮತ್ತು ಕಲೆಗಳನ್ನು ಉಳಿಸಿ ಬೆಳೆಸುವ ಮಹತ್ಸಂಕಲ್ಪದೊಂದಿಗೆ ಗೋಕರ್ಣ ಸಮೀಪದ ಅಶೋಕೆಯಲ್ಲಿ ಶ್ರೀರಾಮಚಂದ್ರಾಪುರ ಮಠವು ಆಚಾರ್ಯ ಚಾಣಕ್ಯನ ಹೆಸರಿನಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸ್ಥಾಪಿಸುತ್ತಿದೆ. ನೂತನ ವಿವಿ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಏಪ್ರಿಲ್ 26ರಂದು ಲೋರ್ಪಾಣೆಗೊಳ್ಳಲಿದೆ.

ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪೀಠಾರೋಹಣ ಮಾಡಿ 25 ವಸಂತಗಳು ತುಂಬಿದ್ದು, ಸುವರ್ಣಯುಗ ಆರಂಭದ ನೆನಪಿಗಾಗಿ ಈ ವಿಶಿಷ್ಟ ಕೊಡುಗೆಯನ್ನು ಶ್ರೀರಾಮಚಂದ್ರಾಪುರ ಮಠ ಸಮಾಜಕ್ಕೆ ನೀಡುತ್ತಿದೆ.

ಭಾರತೀಯ ಗೋವಂಶದ ರಕ್ಷಣೆಗಾಗಿ ಕಳೆದ ವರ್ಷ ವಿfವದ ಏಕೈಕ ಗೋಸ್ವರ್ಗವನ್ನು ಸಮಾಜಕ್ಕೆ ಧಾರೆ ಎರೆದ ಶ್ರೀಮಠ ಇದೀಗ ಆದಿಗುರುವಿಗೆ ಕಿರು ಕಾಣಿಕೆಯಾಗಿ ವಿಶ್ವವಿದ್ಯಾಪೀಠವನ್ನು ಸಮರ್ಪಿಸುತ್ತಿದೆ.

ಇಡೀ ಸಮಾಜದಲ್ಲಿ ಧರ್ಮ ಜಾಗೃತಿ ಹಾಗೂ ದೇಶದ ಸಂಸ್ಕೃತಿಯ ಪುನರುತ್ಥಾನಕ್ಕೆ ನಾಂದಿ ಹಾಡುವ ವಿಶ್ವವಿದ್ಯಾಪೀಠವೊಂದರ ಅಗತ್ಯತೆ – ಅನಿವಾರ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ (ವಿವಿವಿ) ಸ್ಥಾಪನೆಗೆ ಶ್ರೀಮಠ ಮುಂದಾಗಿದೆ.

ವಿಶ್ವವಿದ್ಯಾಪೀಠದ ಮಹತಿಯನ್ನು ಸಮಾಜಕ್ಕೆ ಪರಿಚಯಿಸುವ ದೃಷ್ಟಿಯಿಂದ ಈಗಾಗಲೇ ಬೆಂಗಳೂರಿನಲ್ಲಿ ಸಂವಾಧ ಏರ್ಪಡಿಸಲಾಗಿದ್ದು, ಅದ್ಭುತ ಸ್ಪಂದನೆ ದೊರೆತಿದೆ. ಮಂಗಳೂರಿನಲ್ಲೂ ಮುಂದಿನ ತಿಂಗಳು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಶ್ರೀಗಳು ತಿಳಿಸಿದರು.
ಭರತ ಖಂಡದ ಸುವರ್ಣಯುಗದ ಕುರುಹಾಗಿ ಉಳಿದಿರುವ ತಕ್ಷಶಿಲೆ ವಿಶ್ವವಿದ್ಯಾನಿಲಯದ ಪುನರವತರಣ ಮತ್ತು ಧರ್ಮಯೋಧರ ಸೃಷ್ಟಿ ಈ ಯೋಜಿತ ವಿಶ್ವವಿದ್ಯಾಪೀಠದ ಮೂಲಧ್ಯೇಯವಾಗಿದೆ.

ಅಶೋಕೆಯಲ್ಲಿ ಸುಮಾರು 10 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ವಿಶಿಷ್ಟ ಗುರುಭವನವನ್ನು ವಿಶ್ವವಿದ್ಯಾಪೀಠಕ್ಕೆ ಮೊದಲ ಸಮರ್ಪಣೆಯಾಗಿ ಶ್ರೀಗಳು ಸಲ್ಲಿಸಿದ್ದಾರೆ. ಪೀಠಾರೋಹಣದ ದಿನವೇ ಶ್ರೀಶಂಕರರ ನೆನಪಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವ ಘೋಷಣೆಯನ್ನು ಶ್ರೀಗಳು ಮಾಡಿದ್ದರು. ಶ್ರೀಗಳ ಸಂಕಲ್ಪ ಸಾಕಾರವಾಗುವ ಕಾಲ ಇದೀಗ ಸನ್ನಿಹಿತವಾಗಿದೆ.

ವಿಶ್ವವಿದ್ಯಾಪೀಠ 10 ತಿಂಗಳಲ್ಲಿ ಪೂರ್ಣ:
ದಾಖಲೆಯ ಹತ್ತು ತಿಂಗಳಾವಧಿಯಲ್ಲಿ ಪರಿಪೂರ್ಣ ವಿಶ್ವವಿದ್ಯಾಪೀಠವನ್ನು ಸಮಾಜಕ್ಕೆ ಸಮರ್ಪಿಸಲು ಉದ್ದೇಶಿಸಲಾಗಿದೆ. ಭಾರತೀಯ ವಿದ್ಯೆಗಳನ್ನು ಉಳಿಸಿ ಬೆಳೆಸುವುದು ಹಾಗೂ ದೇಶರಕ್ಷಣೆ, ಧರ್ಮರಕ್ಷಣೆಗೆ ಬದ್ಧರಾದ, ಸಂಸ್ಕೃತಿಯ ಆಳ ಅರಿವು ಇರುವ ಧರ್ಮಯೋಧರನ್ನು ಸಿದ್ಧಪಡಿಸುವುದು ಈ ವಿಶ್ವವಿದ್ಯಾಪೀಠದ ಉದ್ದೇಶವಾಗಿದೆ. ತಕ್ಷಶಿಲೆ ವಿಶ್ವವಿದ್ಯಾನಿಲಯದಲ್ಲಿ ಆಚಾರ್ಯ ವಿಷ್ಣಗುಪ್ತ ಚಾಣಕ್ಯನು ಧರ್ಮಯೋಧ ಚಂದ್ರಗುಪ್ತನನ್ನು ಸೃಷ್ಟಿಸಿ ಆತನ ಮೂಲಕ ನಂದನ ಅಂಧಕಾರಶಾಸನವನ್ನು ಕೊನೆಗೊಳಿಸಿ ಧರ್ಮ ಸಾಮ್ರಾಜ್ಯ ಉದಯಕ್ಕೆ ಕಾರಣನಾದಂತೆ ವಿಶ್ವವಿದ್ಯಾಪೀಠದ ಮಡಿಲಲ್ಲಿ ವಿಶ್ವವಿಜಯೀ ವಿದ್ಯಾವೀರರನ್ನು ಸೃಜಿಸುವ ಮೂಲಕ ಭಾರತವರ್ಷದಲ್ಲಿ ಮತ್ತೊಮ್ಮೆ ರಾಮರಾಜ್ಯವನ್ನು ಉದಯಗೊಳಿಸುವುದು, ಧರ್ಮ ಪ್ರೆಭುತ್ವವನ್ನು ಮರಳಿ ಸ್ಥಾಪಿಸುವುದು ಯೋಜಿತ ವಿಶ್ವವಿದ್ಯಾಪೀಠದ ಧ್ಯೇಯವಾಗಿದೆ.

ಎಲ್ಲಿ ಸ್ಥಾಪನೆಯಾಗಲಿದೆ?
ಶಂಕರಾಚಾರ್ಯರು ಮೂರು ಬಾರಿ ಭೇಟಿ ನೀಡಿದ ಮತ್ತು ಹಲವು ತಿಂಗಳ ಕಾಲ ವಾಸವಿದ್ದ ಶಂಕರರ ಜ್ಞಾನಶಿಶು ಎನಿಸಿದ ಶ್ರೀರಾಮಚಂದ್ರಾಪುರ ಮಠದ ಮೂಲಸ್ಥಾನ, ಗೋಕರ್ಣ ಸಮೀಪದ ಅಶೋಕೆಯ ಸ್ವಚ್ಛ, ಸುಂದರ ಪರಿಸರದಲ್ಲಿ ನೂತನ ವಿಶ್ವವಿದ್ಯಾಪೀಠ ತಲೆ ಎತ್ತಲಿದೆ.

ಪಾರಂಪರಿಕ ವಾಸ್ತುಶಿಲ್ಪವನ್ನು ಒಳಗೊಂಡ ಈ ವಿಶಿಷ್ಟ ವಿದ್ಯಾಪೀಠದಲ್ಲಿ ಭಾರತೀಯ ವಿದ್ಯಾವಿಶ್ವವೇ ಅಧ್ಯಯನ ವಸ್ತು. ಭಾರತೀಯ ಸಂಸ್ಕೃತಿಯ ಮೂಲಾಧಾರ ಎನಿಸಿದ ನಾಲ್ಕು ವೇದಗಳು, ಜ್ಯೋತಿಷ್ಯವನ್ನು ಒಳಗೊಂಡ ವೇದದ ಆರು ಅಂಗಗಳು, ಆಯುರ್ವೇದವೇ ಮೊದಲಾದ ನಾಲ್ಕು ಉಪವೇದಗಳು, ರಾಮಾಯಣ, ಮಹಾಭಾರತ ಒಳಗೊಂಡಂತೆ ಇತಿಹಾಸ- ಪುರಾಣಗಳು, ಆರು ದರ್ಶನಗಳು, ಸಕಲ ಕಲೆಗಳು, ಸಮಯುಗದ ಜಗತ್ತಿನ ಸಾಮಾನ್ಯ ಜ್ಞಾನ, ಆಧುನಿಕ ತಂತ್ರಜ್ಞಾನ, ದೇಶದ ಚರಿತ್ರೆ, ಸಂವಹನ ಕೌಶಲ, ಕಾನೂನು, ಧರ್ಮಯೋಧನಿಗೆ ಎದುರಾಗಬಹುದಾದ ವಿಪತ್ತುಗಳನ್ನು ಮನಸ್ಸಿನಲ್ಲಿರಿಸಿಕೊಂಡು ಆತ್ಮರಕ್ಷಣೆಯ ಸಮರ ವಿದ್ಯೆಗಳು ವಿದ್ಯಾವಿನ್ಯಾಸದಲ್ಲಿ ಸೇರಿವೆ.

ವಿಶ್ವವಿದ್ಯಾಪೀಠದಲ್ಲಿ ವಿಕಾಸಗೊಂಡ ವಿದ್ಯಾರ್ಥಿ ಬಾಹ್ಯಜಗತ್ತಿನಲ್ಲಿ ಅಪ್ರಸ್ತುತನಾಗಬಾರದು ಎಂಬ ಕಾರಣಕ್ಕೆ ಇಂಗ್ಲಿಷ್, ಹಿಂದಿ ಮೊದಲಾದ ನವಸಮಾಜ ಭಾಷೆಗಳ ಅಧ್ಯಯನಕ್ಕೂ ಅವಕಾಶ ಇರುತ್ತದೆ. ಸಮಾಜದ ಎಲ್ಲ ವರ್ಗದವರಿಗೂ ಇಲ್ಲಿ ಅವಕಾಶವಿದ್ದು ಅವರವರಿಗೆ ಸಲ್ಲುವ ವಿದ್ಯೆಗಳನ್ನು ಅವರು ಪಡೆದುಕೊಳ್ಳಬಹುದಾಗಿದೆ.

ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ಮೂಲಕ ದೇಶದ ಮೂಲೆಮೂಲೆಗಳ ತಜ್ಞ ವಿದ್ವಾಂಸರಿಂದ ಪಾಠದ ವ್ಯವಸ್ಥೆ ಇಲ್ಲಿನ ವೈಶಿಷ್ಟಯ. ಸರ್ಕಾರದ ಭಿಕ್ಷೆಗೆ ಕೈಚಾಚದೇ, ಸಂಪನ್ಮೂಲ ಹಾಗೂ ಮಾನ್ಯತೆ ಎರಡೂ ವಿಶ್ವವಿದ್ಯಾಪೀಠದ್ದೇ ಆಗಿರುತ್ತದೆ. ಸರ್ಕಾರದ ಮಾನ್ಯತೆಯ ಅವಶ್ಯಕತೆ ಇರುವಲ್ಲಿ ಪರೀಕ್ಷೆಗಳನ್ನು ಅಧಿಕೃತ ವ್ಯವಸ್ಥೆಯಿಂದ ಪಡೆದುಕೊಳ್ಳಲು ಪರ್ಯಾಯ ಕ್ರಮ ಅನುಸರಿಸಲಾಗುತ್ತದೆ.

ವೇದ- ಶಾಸ್ತ್ರಗಳು, ಪರಂಪರೆ- ಪದ್ಧತಿಗಳನ್ನು ಒಳಗೊಂಡ ಸಮಗ್ರ ಭಾರತೀಯ ಸಂಸ್ಕೃತಿಯಲ್ಲಿ ಹುದುಗಿರುವ ಅದೆಷ್ಟೋ ಮಹತ್ವದ ಸಂಗತಿಗಳ ಕುರಿತು ಸಂಶೋಧನಾಲಯವೊಂದು ಇಲ್ಲಿ ಅನಾವರಣಗೊಳ್ಳಲಿದ್ದು, ಅದು ವಿಶ್ವವಿದ್ಯಾಪೀಠದ ಮುಕುಟಮಣಿಯಾಗಲಿದೆ.

ಶ್ರೀಶಂಕರ ಥೀಮ್ ಪಾರ್ಕ್‌:
ಶಂಕರ ಭಗವತ್ಪಾದಕರ ಪಾದಸ್ಪ್ರಶದ ಧನ್ಯತೆಯನ್ನು ಕಂಡ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪರಿಸರದಲ್ಲಿ ಅವರ ಜೀವನ ಸಾಧನೆಗಳನ್ನು ಜೀವಲೋಕಕ್ಕೆ ಮನೋಜ್ಞವಾಗಿ ಬಿಂಬಿಸುವ ಥೀಮ್ ಪಾರ್ಕ್‌ ನೂತನ ವಿಶ್ವವಿದ್ಯಾಪೀಠದ ಆವರಣದಲ್ಲಿ ತಲೆ ಎತ್ತಲಿದೆ. ದಿವ್ಯೌಷಧವನದ ನಡುವೆ ಶಂಕರರ ಪಾವನ ಜೀವನದ ಶಿಲ್ಪ ಕಲ್ಪ, ಭವ್ಯಭವನದಲ್ಲಿ ಶ್ರೀಶಂಕರರ ಹೆಸರಿನಲ್ಲಿ ಭಾರತೀಯ ಸಂಸ್ಕೃತಿ ಸಂಶೋಧನಾಲಯ, ಆಡಿಯೋ ವೀಡಿಯೋ ಪ್ರದರ್ಶಿನಿ, ವಸ್ತು ಸಂಗ್ರಹಾಲಯ, ಬೃಹತ್‌ ಶಾಂಕರ ಗ್ರಂಥ ಸಂಗ್ರಹಾಗಾರ ಇರುತ್ತದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕಾವು ಜಂಕ್ಷನ್‌ನಲ್ಲಿ ಲಾರಿ-ಕಾರು ಡಿಕ್ಕಿ: ವೇ.ಮೂ ಕೊಡಿಪ್ಪಾಡಿ ನಾರಾಯಣ ಜೋಯಿಸರು ಇನ್ನಿಲ್ಲ

Upayuktha

ಕೋವಿಡ್ 19 ತಾಜಾ ಅಪ್‌ಡೇಟ್ಸ್‌: ದ.ಕ. 11, ಉಡುಪಿ 9 ಕೊರೊನಾ ಪಾಸಿಟಿವ್ ಪ್ರಕರಣಗಳು

Upayuktha

ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶಾಕ್: 25ರೂ.ಗಳಷ್ಟು ಏರಿಕೆಯಾದ ಅಡುಗೆ ಅನಿಲ ದರ

Sushmitha Jain