ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಅಂಬಿಕಾ ವಿದ್ಯಾಸಂಸ್ಥೆಯಲ್ಲಿ ವಿವೇಕಾನಂದ ಜಯಂತಿ ಆಚರಣೆ

ಭಾರತವಿಂದು ಬೇಡುವ ಬದಲಾಗಿ ನೀಡುವ ರಾಷ್ಟ್ರವೆನಿಸಿದೆ: ಡಾ.ವಿನಾಯಕ ಭಟ್

ಪುತ್ತೂರು: ಸ್ವಾಮಿ ವಿವೇಕಾನಂದರು ಬಯಸಿದಂತಹ ಸ್ವಾವಲಂಬನೆ ಆತ್ಮನಿರ್ಭರ ಭಾರತದ ಹೆಸರಿನಲ್ಲಿ ಇಂದು ಸಾಕಾರಗೊಳ್ಳುತ್ತಿದೆ. ಭಾರತ ಇತರ ರಾಷ್ಟ್ರಗಳಿಂದ ಬೇಡುವುದರ ಬದಲಾಗಿ ನೀಡುವ ಸ್ಥಿತಿಗೆ ಬಂದಿದೆ. ಇಲ್ಲಿನ ಯುವಶಕ್ತಿ ಇಂತಹ ಹಿರಿಮೆಯನ್ನು ಆದರ್ಶವಾಗಿಟ್ಟುಕೊಂಡು ರಾಷ್ಟ್ರೀಯ ಯುವದಿನಕ್ಕೆ ಹೊಸ ಅರ್ಥವನ್ನು ಕಲ್ಪಿಸಿಕೊಡಬೇಕು ಎಂದು ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ ಗಾಳಿಮನೆ ಹೇಳಿದರು.

ಅವರು ಪುತ್ತೂರಿನ ಬಪ್ಪಳಿಗೆಯಲ್ಲಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್ ನಡೆಸುವ ಅಂಬಿಕಾ ಮಹಾವಿದ್ಯಾಲಯದ ಸಂಸ್ಕøತ, ಕನ್ನಡ ಹಾಗೂ ತತ್ವಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಅಂಬಿಕಾ ಬಾಲವಿದ್ಯಾಲಯದಲ್ಲಿ ಮಂಗಳವಾರ ನಡೆದ ವಿವೇಕಾನಂದ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಇಂದು ಯುವಜನತೆ ವಿವಿಧ ಆಕರ್ಷಣೆಗಳಿಗೆ ಬಲಿಯಾಗುತ್ತಿರುವುದನ್ನು ನೋಡುವಾಗ ಖೇದವೆನಿಸುತ್ತದೆ. ಯಾರನ್ನು ತಮ್ಮ ಜೀವನದ ಹೀರೋಗಳಾಗಿ ನಾವು ಕಾಣಬೇಕಿತ್ತೋ ಅವರನ್ನು ಮರೆಯುತ್ತಿದ್ದೇವೆ. ಕೇವಲ ನಮ್ಮನ್ನು ಭ್ರಮೆಗೆ ಒಳಪಡಿಸುವ ಮಂದಿಯನ್ನು ನಾವು ಆದರ್ಶವಾಗಿ ಸ್ವೀಕರಿಸುತ್ತಿದ್ದೇವೆ. ಇಂತಹ ಮನಃಸ್ಥಿತಿಯಿಂದ ಹೊರಬಂದು ಅತ್ಯುನ್ನತ ಆದರ್ಶವನ್ನು ದೇಶಕ್ಕೆ ನೀಡಿದ ವಿವೇಕಾನಂದರಂತಹ ವ್ಯಕ್ತಿಗಳು ನಮಗೆ ಮಾದರಿಯಾಗಬೇಕು ಎಂದರು.

ನಾವು ಜಗತ್ತನ್ನು ಗೆಲ್ಲುವುದು ಶಕ್ತಿಯಿಂದಲ್ಲ ಬದಲಾಗಿ ಅತ್ಯುತ್ತಮ ಚಾರಿತ್ರ್ಯದಿಂದ. ಹಾಗಾಗಿ ಚಾರಿತ್ರ್ಯವನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ. ದೇಶಪ್ರೇಮ, ದೇಶದೆಡೆಗಿನ ತುಡಿತ ನಮ್ಮನ್ನು ಎತ್ತರಕ್ಕೆ ಒಯ್ಯುತ್ತದೆ. ವಿವೇಕಾನಂದರ ಜನ್ಮದಿನದಂದು ದೇಶಕ್ಕಾಗಿ ನಾನು ದುಡಿಯುತ್ತೇನೆ. ನನ್ನ ಪ್ರತಿಭೆಯನ್ನು ಈ ದೇಶಕ್ಕಾಗಿ ವಿನಿಯೋಗಿಸುತ್ತೇನೆ ಎಂಬ ಪ್ರತಿಜ್ಞೆಯನ್ನು ಮಾಡಬೇಕು ಎಂದು ಕರೆನೀಡಿದರು.

ಅತಿಥಿಯಾಗಿ ಭಾಗವಹಿಸಿದ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ಪ್ರಪಂಚ ನಮ್ಮೆಡೆಗೆ ತಿರುಗಿ ನೋಡಬೇಕೆಂದು ನಾವಿಂದು ಬಯಸುತ್ತಿದ್ದೇವೆ. ಆದರೆ 1893ರಲ್ಲೇ ಸ್ವಾಮಿ ವಿವೇಕಾನಂದರು ಚಿಕಾಗೋ ಭಾಷಣದ ಮೂಲಕ ಜಗತ್ತನ್ನು ಭಾರತದೆಡೆಗೆ ತಿರುಗಿಸಿ ಹೆಮ್ಮೆ ತಂದಿದ್ದಾರೆ. ಅವರ ಜನ್ಮದಿನ ಅನ್ನುವುದು ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಎಷ್ಟು ಅಳವಡಿಸಿಕೊಂಡಿದ್ದೇವೆ ಎಂಬುದರ ವಿಮರ್ಶೆಗಾಗಿ ನಿಗದಿಪಡಿಸಲಾದ ದಿನವಾಗಬೇಕು ಎಂದು ಅಭಿಪ್ರಾಯಪಟ್ಟರು.

ಉಪಸ್ಥಿತರಿದ್ದ ಅಂಬಿಕಾ ವಸತಿಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಂಕರನಾರಾಯಣ ಭಟ್ ಮಾತನಾಡಿ ವಿವೇಕಾನಂದರಿಂದಾಗಿ ಯುವಶಕ್ತಿಗೆ ಹೊಸ ಚೇತನ ದೊರಕಿದೆ. ಅವರ ಚಿಂತನೆಗಳು ನಮಗೆ ಸದಾ ಮಾರ್ಗದರ್ಶಕ ಎಂದರು.

ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ. ಇಂದು ಐ.ಕ್ಯು. ಎಂಬ ಕಲ್ಪನೆ ಹಳತಾಗಿ ಎಸ್.ಕ್ಯು. (ಸ್ಪಿರಿಚುವಲ್ ಕೋಶಂಟ್) ಕಲ್ಪನೆ ಗಾಢವಾಗಿ ಕಾಣಿಸುತ್ತಿದೆ. ಇದು ನಮ್ಮ ಜೀವನದ ತುರೀಯಾವಸ್ಥೆಯೂ ಹೌದು. ಇದನ್ನು ತಲಪುವುದು ನಮ್ಮ ಬದುಕಿನ ಗುರಿಯಾಗಬೇಕು. ವಿವೇಕಾನಂದರು ಹೇಳಿದಂತೆ ಗುರಿಯೊಂದನ್ನು ಮನದೊಳಗೆ ಪ್ರತಿಷ್ಟಾಪಿಸಿ ಹಗಲಿರುಳೂ ಅದಕ್ಕಾಗಿ ಶ್ರಮಿಸಿ ಯಶಸ್ಸನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ಶ್ರೀಲಕ್ಷ್ಮೀ, ನಿಶ್ಚಿತಾ ಹಾಗೂ ಪ್ರಿಯಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಅದಿತಿ ಎಂ.ಎಸ್ ಸ್ವಾಗತಿಸಿ, ಶ್ರೀಲಕ್ಷ್ಮಿ ವಂದಿಸಿದರು. ವಿದ್ಯಾರ್ಥಿನಿ ವೈಷ್ಣವಿ ಜೆ.ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸರ್ಕಾರದ ಕೊರೋನಾ ನಿಯಮಗಳಿಗನುಸಾರ ಕಾರ್ಯಕ್ರಮ ಆಯೋಜಿಸಲಾಯಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ದ.ಕ. ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳಿಂದ ಕೊರೊನಾ ಪಾಸಿಟಿವ್ ಇಲ್ಲ

Upayuktha

ಕೊರೊನಾ: ದಕ ಜಿಲ್ಲೆಯಲ್ಲಿ ಇಂದು ವರದಿ ಬಂದ ಎಲ್ಲ ಪ್ರಕರಣಗಳೂ ನೆಗೆಟಿವ್

Upayuktha

ಆಳ್ವಾಸ್ ಶಿಕ್ಷಣ ಸಂಸ್ಥೆಗೆ ರಾಷ್ಟ್ರೀಯ ಯುವ ಸೈನಿಕ ದಳದಿಂದ ಉತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿ

Upayuktha