ನಗರ ಸ್ಥಳೀಯ

ಪುತ್ತೂರು: ಶಿಶು ಸಂಗಮದಲ್ಲಿ ನಲಿದಾಡಿ ಖುಷಿಪಟ್ಟ ಚಿಣ್ಣರು

ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ‘ವಿವೇಕಾನಂದ ಜಯಂತಿ’ ಆಚರಣೆ

ಪುತ್ತೂರು: ಕೈ ಕೈ ಹಿಡಿದು ತಮ್ಮದೇ ಪ್ರಪಂಚದಲ್ಲಿ ತೇಲಾಡುತ್ತಿರುವ ಮಕ್ಕಳ ದಂಡು. ತರಲೆ ತುಂಟಾಟಗಳಲ್ಲಿ ನಿರತರಾದ ಮಕ್ಕಳನ್ನು ನೋಡುತ್ತಾ ನಿಂತಿರುವ ಹೆತ್ತವರು ಮತ್ತು ಶಿಕ್ಷಕರು. ಯಾರ ಪರಿವೆಯೂ ಇಲ್ಲದೇ ಸಹಪಾಟಿಗಳೊಂದಿಗೆ ಮೋಜು ಮಸ್ತಿಯೊಂದಿಗೆ, ಆಟವಾಡುತ್ತಾ ನಲಿದಾಡುವ ಮಕ್ಕಳ ದಂಡೇ ಅಲ್ಲಿ ನೆರೆದಿತ್ತು. ಈ ದೃಶ್ಯ ಕಂಡು ಬಂದದ್ದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಆವರಣದಲ್ಲಿ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಜಯಂತಿ ಮತ್ತು ಸಮಾಲೋಚನಾ ಸಭೆ ಕಾರ್ಯಕ್ರಮವು ‘ನೆಲ- ನೆಲೆ ಮತ್ತು ಶಿಕ್ಷಣ’ ಎಂಬ ಆಶಯದಡಿಯಲ್ಲಿ ನಡೆಯಿತು. ಈ ಬಾರಿಯ ವಿವೇಕಾನಂದ ಜಯಂತಿ ಆಕರ್ಷಕ ಕೇಂದ್ರವಾಗಿ ಎಲ್ಲರ ಚಿತ್ತವನ್ನು ಸೆಳೆಯುತ್ತಿದ್ದದ್ದು ಮಕ್ಕಳಿಗಾಗಿ ಆಯೋಜಿಸಿದ ‘ಶಿಶು ಸಂಗಮ’ ಎಂಬ ಚಿಣ್ಣರ ಸಮ್ಮೇಳನ.

ಪ್ರತಿ ವರ್ಷವೂ ವಿವೇಕಾನಂದ ಜಯಂತಿಯು ವಿಭಿನ್ನವಾದ ವಿಶೇಷತೆಯೊಂದಿಗೆ ಆಚರಿಸಲಾಗುತ್ತದೆ. ಆದರೆ ಈ ಬಾರಿಯ ನೆಲ -ನೆಲೆ ಮತ್ತು ಶಿಕ್ಷಣ ಎಂಬ ಆಶಯಕ್ಕೆ ಪೂರಕವಾಗಿ ಆರಂಭಿಕ ಶಿಕ್ಷಣಕ್ಕೆ ಒತ್ತು ಕೊಡುವ ಸದುದ್ದೇಶದಿಂದಾಗಿ ಚಿಣ್ಣರ ಸಮ್ಮೇಳನಕ್ಕೆ ಪ್ರಾಮುಖ್ಯತೆ ನೀಡಲಾಗಿತ್ತು. ಈ ಸಮ್ಮೇಳನದಲ್ಲಿ 31 ಶಿಶು ಮಂದಿರದ ಸುಮಾರು ಒಂದು ಸಾವಿರದ ಇನ್ನೂರಕ್ಕೂ ಹೆಚ್ಚು ಪುಟಾಣಿಗಳು ಭಾಗವಹಿಸಿದ್ದರು.

ಎಲ್ಲರ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾದ ಈ ಶಿಶು ಸಂಗಮ-ಚಿಣ್ಣರ ಸಮ್ಮೇಳನಕ್ಕೆ ಮತ್ತಷ್ಟು ಮೆರುಗು ನೀಡಿದ್ದು ಮಕ್ಕಳಿಗಾಗಿ ನಿರ್ಮಿತವಾದ ಗುಹೆ. ಮುದ್ದು ಮಕ್ಕಳು ಗುಹೆಯನ್ನು ನೋಡುತ್ತಾ, ಪ್ರಾಣಿಗಳ ಧ್ವನಿಯನ್ನು ಆಲಿಸುತ್ತಾ, ಕೆಲ ಮಕ್ಕಳು ನಗುತ್ತಾ ಹೊರ ಬರುತ್ತಿದ್ದರೆ, ಇನ್ನೂ ಕೆಲ ಪುಟಾಣಿಗಳು ಓಡಿ ಬರುತ್ತಿದ್ದರು. ಒಟ್ಟಿನಲ್ಲಿ ಮಕ್ಕಳು ಏನೂ ಮಾಡಿದರೂ ಚೆಂದ ಎಂಬ ಭಾವ ನೋಡುಗರ ಮನದಲ್ಲಿ ಮೂಡಿತ್ತು.

ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರಿಂದ ಮಕ್ಕಳ ಸಾಮ್ರಾಜ್ಯವೇ ಧರೆಗಿಳಿದಂತೆ ಭಾಸವಾಗುತ್ತಿತ್ತು. ಅಳುವ ಮಕ್ಕಳನ್ನು ಸಂತೈಸುವ ಶಿಕ್ಷಕರು ಒಂದೆಡೆಯಾದರೆ, ರೈಲು ಬಂಡಿಯಂತೆ ಸಾಲುಗಟ್ಟಿ ನಿಂತಿರುವ ಪುಟಾಣಿಗಳು ಮತ್ತೊಂದೆಡೆ, ಹೀಗೆ ಮಕ್ಕಳು ಉಪಹಾರವನ್ನು ಸೇವಿಸುತ್ತಾ ಶಿಕ್ಷಕರು ಹೇಳುವ ಮಾತನ್ನು ಮುಗ್ಧ ಭಾವದಿಂದ ಆಲಿಸುತ್ತಿರುವ ದೃಶ್ಯವೂ ಕಣ್ಣಿಗೆ ಕಟ್ಟಿದಂತಿತ್ತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಇ. ಶಿವಪ್ರಸಾದ್ ಅವರು ಈ ಶಿಶು ಸಂಗಮಕ್ಕೆ ದ್ವೀಪ ಪ್ರಜ್ವಲನೆ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. ತದನಂತರ ಸಾಲುಗಟ್ಟಿ ಕುಳಿತ ಪುಟಾಣಿಗಳು ಪ್ರಾರ್ಥನೆ ಮಾಡಿ ಖುಷಿ ಪಟ್ಟರು. ಪುಟಾಣಿ ಮಕ್ಕಳಂತೂ ಹುಲಿ ವೇಷ ಹಾಕಿ ವೇದಿಕೆಯಲ್ಲಿ ನೆರೆದಿದ್ದ ಕೆಲ ಪುಟಾಣಿಗಳು ಭಯಪಟ್ಟರೆ, ಇನ್ನು ಅನೇಕರ ಚಿತ್ತವನ್ನೂ ಸೆಳೆಯುವಲ್ಲಿ ಯಶಸ್ವಿಯಾಯಿತು. ಹೀಗೆ ಆರಂಭವಾದ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ್ದು ಮಕ್ಕಳಿಗಾಗಿ ನಿರ್ಮಿತವಾದ ಆಟೋಟ ಸ್ಪರ್ಧೆಗಳು, ಮತ್ತು ಸುಂದರವಾದ ಉದ್ಯಾನವನ. ಎತ್ತ ನೋಡಿದ್ದರಲ್ಲಿ ಮಕ್ಕಳದ್ದೇ ಕಾರುಬಾರು, ಮಕ್ಕಳದ್ದೇ ಸಾಮ್ರಾಜ್ಯ ಎನ್ನುವಂತಿತ್ತು ಚಿಣ್ಣರ ಸಮ್ಮೇಳನ.

ವಿವೇಕಾನಂದ ಜಯಂತಿಯ ವಿಶೇಷ ಆಕರ್ಷಣೆಯಾದ ಶಿಶು ಸಂಗಮ- ಚಿಣ್ಣರ ಸಮ್ಮೇಳನವನ್ನು ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ. ಮಕ್ಕಳಂತೂ ತುಂಬಾ ಸಂಭ್ರಮಿಸಿದ್ದಾರೆ. ಇಲ್ಲಿ ನಡೆದ ಬೇರೆ ಬೇರೆ ಚಟುವಟಿಕೆಯೂ ಹೊಸ ಅನುಭವವನ್ನು ತಂದು ಕೊಟ್ಟಿದೆ. ಜೊತೆಗೆ ಎಲ್ಲಾ ಶಿಶು ಮಂದಿರದ ಮಕ್ಕಳನ್ನೂ ಒಂದೆಡೆ ಸೇರಿಸಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

– ಅಕ್ಷತಾ, ಶಿಕ್ಷಕಿ ವಿವೇಕಾನಂದ ಇಂಗ್ಲೀಷ್ ಮೀಡಿಯಾಂ ಸ್ಕೂಲ್ ಪುತ್ತೂರು.

ಪದವಿ ಕಾಲೇಜಿನ ತರಗತಿ ಕೊಠಡಿಯಲ್ಲಿ ಶಿಕ್ಷಕರು ಮಕ್ಕಳಿಗಾಗಿ ಕಥೆ ಹೇಳುವುದು, ನೃತ್ಯ ಮಾಡಿಸುವುದು ಹೀಗೆ ಅನೇಕ ಬಗೆ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪುಟಾಣಿಗಳನ್ನು ತಲ್ಲೀನರಾಗಿಸಿದ್ದರು. ಸುಮಾರು 31ಕ್ಕೂ ಹೆಚ್ಚು ಶಿಶು ಮಂದಿರದಿಂದ ಬಂದ ಮಕ್ಕಳಿಗೆ ಎತ್ತರಕ್ಕೆ ಹಾರು, ಪುಟಾಣಿ ಸೇತುವೆ, ಬಾಲ್ ಪಾಸ್, ಕೈ ಅಚ್ಚು, ಚಕ್ಕುಲಿ ಆಟ ಸೇರಿದಂತೆ ಅನೇಕ ಆಟೋಟಗಳು ಮಕ್ಕಳ ಸಂತೋಷವನ್ನು ಹೆಚ್ಚಿಸುವಲ್ಲಿ ಪ್ರಮುಖ ಕಾರಣವಾಯಿತು.

ಹೀಗೆ ವಿವೇಕಾನಂದ ಜಯಂತಿಯಲ್ಲಿ ವಿಶೇಷವಾದ ಆಕರ್ಷಣೆಯಾದ ಚಿಣ್ಣರ ಸಮ್ಮೇಳನವೂ ನೆರೆದಿದ್ದ ಜನರನ್ನು ಸಂಭ್ರಮಿಸಿದ್ದು ಮಾತ್ರವಲ್ಲದೇ ನೆರೆದ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ತೊದಲು ಮಾತುಗಳನ್ನು ಆಡುವ ಎರಡೂವರೆ ವರ್ಷದ ಮಕ್ಕಳಿಂದ ಹಿಡಿದು ಐದು ವರ್ಷದ ವರೆಗಿನ ಮಕ್ಕಳು ವಿಶೇಷ ಆಕರ್ಷಣೆಯಾಗಿದ್ದರು. ಮಕ್ಕಳ ತುಂಟಾಟ ತರಲೆ, ಮುಗ್ಧತೆ, ಚೇಷ್ಟೆ ಜಯಂತಿಯ ಪ್ರಮುಖ ಕೇಂದ್ರಬಿಂದುವಾದ ಚಿಣ್ಣರ ಸಮ್ಮೇಳನಕ್ಕೆ ಸಾಕ್ಷಿಯಾಗಿತ್ತು.

ವಿವೇಕಾನಂದ ಜಯಂತಿಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗಿದೆ. ಮಕ್ಕಳಿಗಾಗಿಯೇ ಈ ದಿನವನ್ನು ಮೀಸಲಿಟ್ಟದ್ದು ಖುಷಿಯ ವಿಚಾರ. ಬೇರೆ ಬೇರೆ ಆಟೋಟಗಳಲ್ಲಿ ಮಕ್ಕಳು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗಾಗಿಯೇ ನಿರ್ಮಿತವಾದ ಗುಹೆಯೂ ಖುಷಿಯನ್ನು ತಂದುಕೊಂಡಿದೆ. ಶಿಶು ಸಂಗಮ ಚಿಣ್ಣರ ಸಮ್ಮೇಳನ ಎಂಬ ಪರಿಕಲ್ಪನೆಗೆ ಸುಂದರವಾಗಿ ಮೂಡಿಬಂದಿದೆ.

– ಉಷಾ, ಶಿಕ್ಷಕಿ ಶಾರದಾ ಶಿಶುಮಂದಿರ, ಕುಂತೂರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕುಂಬಳೆ ಶಾಲಾ ವಿದ್ಯಾರ್ಥಿಗಳಿಂದ ಮಳೆ ಸಂತ್ರಸ್ತರಿಗೆ ಪರಿಹಾರದ ಕಿಟ್ ವಿತರಣೆ

Upayuktha

ಮಂಕುತಿಮ್ಮನ ಕಗ್ಗದಲ್ಲಿ ಜೀವನ ದರ್ಶನ: ಪುಂಜಾಲಕಟ್ಟೆಯಲ್ಲಿ ಆನ್‌ಲೈನ್‌ ವಿಶೇಷ ಉಪನ್ಯಾಸ

Upayuktha

ಆಳ್ವಾಸ್ ಕಾಲೇಜು ಪ್ರಾಧ್ಯಾಪಕಿ ಸಪ್ನಾಗೆ ಪಿಎಚ್.ಡಿ

Upayuktha