ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಪ್ರತಿಭೆಯನ್ನು ಗೌರವಿಸಿ, ಸಮಾಜಕ್ಕೆ ತೋರ್ಪಡಿಸುವಂತಾಗಲಿ: ಸುಬ್ರಹ್ಮಣ್ಯ ಭಟ್

ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅಭಿನಂದನ ಸಮಾರಂಭ

ಪುತ್ತೂರು: ಬದುಕಿನಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡಾಗ ಜೀವನದ ಪಯಣ ಸುಗಮವಾಗುತ್ತದೆ. ಎದುರಾಗುವ ಆಪತ್ತುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಪರಿಹರಿಸುವಲ್ಲಿ ವ್ಯಕ್ತಿತ್ವದ ಗಟ್ಟಿತನ ಪ್ರಕಟಗೊಳ್ಳುತ್ತದೆ. ವಿಪತ್ತಿನ ಸಂದರ್ಭದಲ್ಲಿ ಧೈರ್ಯವನ್ನು ಕಳೆದುಕೊಳ್ಳದೆ ಛಲದಿಂದ ಮುನ್ನಡೆದರೆ ವ್ಯಕಿಮೌಲ್ಯದ ಉತ್ತಮ ಪ್ರತಿನಿಧಿಯಾಗಿ ಮೂಡಿ ಬರಲು ಸಾಧ್ಯವಾಗುತ್ತದೆ ಎಂದು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಹೇಳಿದರು.

ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳ ಅಭಿನಂದನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಉತ್ತಮ ಅಂಕಗಳನ್ನು ರ‍್ಯಾಂಕ್ ಗಳನ್ನು ಗಳಿಸುವುದು ವಿದ್ಯಾರ್ಥಿಗಳು ಮಾಡಿದಂತಹ ಸತತ ಪರಿಶ್ರಮದಿಂದಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಯನ್ನು ಗೌರವಿಸಿ, ಪ್ರತಿಭೆಯನ್ನು ಸಮಾಜಕ್ಕೆ ತೋರ್ಪಡಿಸುವಂತಾಗಬೇಕು. ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸಬೇಕು. ಪಠ್ಯವನ್ನು ಮೀರಿದ ಜೀವನ ಪಾಠವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಇಚ್ಛಾಶಕ್ತಿ, ಆತ್ಮಸ್ಥೈರ್ಯಗಳನ್ನು ಬೆಳೆಸಿಕೊಳ್ಳಬೇಕು. ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವು ಗುರುತಿಸುವಂಥ ಕಾರ್ಯಗಳನ್ನು ಕೈಗೊಳ್ಳಬೇಕು. ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯಾದ ಆತ್ಮನಿರ್ಭರ ಕಾರ್ಯಕ್ಕೆ ಕಾಲೇಜಿನಲ್ಲಿ ಕಲಿತ ಪ್ರತಿಭಾನ್ವಿತ ಕುಡಿಗಳು ತೊಡಗಿಸಿಕೊಳ್ಳಬೇಕು. ಬೇರೆ ಬೇರೆ ಕ್ಷೇತ್ರಗಳಲ್ಲಿ ತನ್ನತನದ ಛಾಪು ಒತ್ತುವುದರೊಂದಿಗೆ ದೇಶದ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಕಾಲೇಜಿನಲ್ಲಿ ಕಲಿತ ವಿದ್ಯಾಲಯದ ಚಿಂತನೆಯನ್ನು ದೈನಂದಿನ ಬದುಕಿನಲ್ಲಿ ಅನುಷ್ಠಾನಗೊಳಿಸಬೇಕು. ಈ ಮೂಲಕ ವಿವೇಕಾನಂದರ ಹೆಸರನ್ನು ಇಟ್ಟುಕೊಂಡ ಈ ಸಂಸ್ಥೆಯ ಧ್ಯೇಯ, ವಿವೇಕಾನಂದರ ವ್ಯಕ್ತಿತ್ವ ಎಲ್ಲರದಾಗಬೇಕು ಎಂದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಮಹೇಶ್ ಪ್ರಸನ್ನ ಮಾತನಾಡಿ ಜೀವನದ ಗುರಿಯನ್ನು ತಲುಪುವಲ್ಲಿ ಸಾಕಷ್ಟು ಸವಾಲುಗಳನ್ನು ವಿದ್ಯಾರ್ಥಿಗಳು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿನ ದೌರ್ಬಲ್ಯದಿಂದ ಹೊರಬಂದು ಭಾವನಾತ್ಮಕ ಸ್ಥಿರತೆಯನ್ನು ಗಟ್ಟಿ ಮಾಡಿಕೊಂಡಾಗ ನಮ್ಮಲ್ಲಿನ ಶಕ್ತಿಯು ಹೊರಹೊಮ್ಮಲು ಸಾಧ್ಯವಾಗುತ್ತದೆ.ಯಾವುದೇ ಕ್ಷೇತ್ರವಾದರೂ ಅದನ್ನು ಆರಿಸಿ ಸಾಧನೆ ಮಾಡುತ್ತಾ ಮುಂದುವರೆಯಬೇಕು, ಜೊತೆಗೆ ತಾನು ಕಲಿತ ಸಂಸ್ಥೆಯನ್ನು, ಕಲಿಸಿದ ಗುರುಗಳನ್ನು ಗೌರವಿಸುವಂತಾಗಬೇಕು. ಜೀವನದಲ್ಲಿ ನಂಬಿಕೆ, ನಮೃತೆ ಮತ್ತು ವಿನಯಗಳನ್ನು ಮೈಗೂಡಿಕೊಳ್ಳಬೇಕು ಎಂದು ನುಡಿದರು.

ಮೌಲ್ಯಗಳಿಗೆಲ್ಲ ನೀತಿಯೇ ಮೂಲಬೀಜ. ನಡೆನುಡಿ, ಆಚಾರ ವಿಚಾರಗಳಲ್ಲಿ ನೈತಿಕತೆಯನ್ನು ಮೇಳೈಸಿಕೊಂಡಾಗ ಬದುಕಿಗೊಂದು ಅರ್ಥ ಪ್ರಾಪ್ತವಾಗುತ್ತದೆ. ನೈತಿಕತೆಯು ಭಾರತೀಯ ಧರ್ಮ, ತತ್ವ-ಸಿದ್ಧಾಂತಗಳ, ರಾಜ ಮಹಾರಾಜರ, ದಾರ್ಶನಿಕರ, ದೇಶದ ನಾಯಕರ ಉತ್ಕಟೇಚ್ಛೆಯಾಗಿದೆ. ವಿವೇಕಾನಂದರ ಉದಾತ್ತ ಧ್ಯೇಯ ಧೋರಣೆಗಳನ್ನು ಪಾಲಿಸುವುದರೊಂದಿಗೆ ವ್ಯಕ್ತಿತ್ವ ನಿರ್ಮಾಣದಲ್ಲಿ ಗಟ್ಟಿತನವನ್ನು ರೂಪಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನ ಅವಿರತವಾಗಿ ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಮೂಹ ಮಾಧ್ಯಮಗಳನ್ನು ನಕಾರಾತ್ಮಕವಾಗಿ ಬಳಸದೆ ರಾಷ್ಟ್ರದ ಅಭಿವೃದ್ಧಿಯ ಕಾರ್ಯಕ್ಕೆ ವಿನಿಯೋಗಿಸಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಮಾತನಾಡಿ ಪರೀಕ್ಷೆಯನ್ನು ಗೆದ್ದಂತೆ ವಿದ್ಯಾರ್ಥಿಗಳು ಬದುಕನ್ನು ಗೆಲ್ಲಬೇಕು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ವಿದ್ಯಾರ್ಥಿಗಳ ಸಾಧನೆಗೆ ಎತ್ತಿ ಹಿಡಿದ ಕನ್ನಡಿ. ವಿದ್ಯಾರ್ಥಿಗಳ ಈ ಪ್ರತಿಭೆಯು ಸಮಾಜದ ಸುಖಕ್ಕೆ ಉಪಯೋಗಬೇಕು. ಸಹಜ ಕಲಿಕೆಯ ಖುಷಿಯನ್ನು ಅನುಭವಿಸಬೇಕು. ತಮ್ಮ ಯಶಸ್ಸಿಗೆ ಕಾರಣರಾದ ವ್ಯಕ್ತಿಗಳನ್ನು ನಾವು ಎಂದೂ ಮರೆಯಬಾರದು. ಶಿಕ್ಷಣದ ಎಲ್ಲ ಆಯಾಮಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಪಡೆಯಬೇಕು. ಶಿಕ್ಷಣ ಮತ್ತು ಸಂಸ್ಕಾರ ಬೇರೆಬೇರೆಯಾಗಿರದೇ ಶಿಕ್ಷಣವೇ ಸಂಸ್ಕಾರವಾಗಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜದಲ್ಲಿ ಹೊಳೆಯುವ ವಜ್ರಗಳಾಗಿ ರೂಪುಗೊಳ್ಳಬೇಕು ಎಂದು ನುಡಿದರು.

ವಿಶೇಷ ಸನ್ಮಾನ:
ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳು ಸೇರಿದಂತೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ 224 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ರಾಷ್ಟ್ರಮಟ್ಟದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 4273 ನೇ ರ‍್ಯಾಂಕ್, ಇಂಜಿನಿಯರಿಂಗ್ ನಲ್ಲಿ 9ನೇ ರ‍್ಯಾಂಕ್ ಮತ್ತು ಫಾರ್ಮಾದಲ್ಲಿ 10 ನೇ ರ‍್ಯಾಂಕ್ ಗಳಿಸಿದ ಗೌರೀಶ್ ಕಜಂಪಾಡಿ, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 39 ನೇ ರ‍್ಯಾಂಕ್, ವೆಟರ್ನರಿಯಲ್ಲಿ 127ನೇ ರ‍್ಯಾಂಕ್, ಫಾರ್ಮಾದಲ್ಲಿ 217ನೇ ರ‍್ಯಾಂಕ್, ನ್ಯಾಚುರೋಪತಿ ವಿಭಾಗದಲ್ಲಿ 63ನೇ ರ‍್ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ 364ನೇ ರ‍್ಯಾಂಕ್ ,ನೀಟ್ ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 5352 ನೇ ರ‍್ಯಾಂಕ್ ಗಳಿಸಿದ ಅಕ್ಷಯ್ ಪಾಂಗಾಳ್, ನೀಟ್ ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 58462 ನೇ ರ‍್ಯಾಂಕ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 1033 ನೇ ರ‍್ಯಾಂಕ್ ಮತ್ತು ನ್ಯಾಚುರೋಪತಿ ವಿಭಾಗದಲ್ಲಿ 1220ನೇ ರ‍್ಯಾಂಕ್ ಗಳಿಸಿದ ಶಮಾ ಕೆ, ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 41409 ನೇ ರ‍್ಯಾಂಕ್ ಗಳಿಸಿದ ಅಂಜಲಿ, ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 21267 ನೇ ರ‍್ಯಾಂಕ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 895 ನೇ ರ‍್ಯಾಂಕ್ ಮತ್ತು ನ್ಯಾಚುರೋಪತಿ ವಿಭಾಗದಲ್ಲಿ 1454ನೇ ರ‍್ಯಾಂಕ್ ಗಳಿಸಿದ ಬಿ. ಎನ್. ಈಶ್ವರ ಪ್ರಸನ್ನ, ಇಂಜಿನಿಯರಿಂಗ್ ನಲ್ಲಿ 1226ನೇ ರ‍್ಯಾಂಕ್ ಗಳಿಸಿದ ನಿಶಾ ಎಂ.ಎಸ್, ಇಂಜಿನಿಯರಿಂಗ್ ನಲ್ಲಿ 1356ನೇ ರ‍್ಯಾಂಕ್ ಗಳಿಸಿದ ಸಾಕ್ಷಾತ್ ಎಸ್ ಎಂ, ಆರ್ಕಿಟೆಕ್ಚರ್ ಇಂಜಿನಿಯರಿಂಗ್‌ಗಾಗಿ ನಡೆದ ರಾಷ್ಟ್ರ ಮಟ್ಟದ ಫಲಿತಾಂಶದಲ್ಲಿ 174ನೇ ರ‍್ಯಾಂಕ್ ಗಳಿಸಿದ ಮೊನಾ ಎಸ್ ಟಿ, ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ ಆರನೇ ರ‍್ಯಾಂಕ್ ಮತ್ತು ತಾಲೂಕಿಗೆ ಹಾಗೂ ಕಾಲೇಜಿನಲ್ಲಿ ಪ್ರಥಮ ಸ್ಥಾನ ಮತ್ತು ನ್ಯಾಚುರೋಪತಿ ವಿಭಾಗದಲ್ಲಿ 1082ನೇ ರ‍್ಯಾಂಕ್ ಗಳಿಸಿದ ವಿಜಿತ್ ಕೃಷ್ಣ, ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ ಏಳನೇ ರ‍್ಯಾಂಕ್ ಗಳಿಸಿದ ಅಂಕಿತಾ ಸಿ, ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ಎಂಟನೇ ರ‍್ಯಾಂಕ್ ಹಾಗೂ ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ ವರಲಕ್ಷ್ಮಿ ಪಿ ಎಸ್, ಕಲಾ ವಿಭಾಗದಲ್ಲಿ ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸಿದ ವಿರೇಶ ಇವರನ್ನು ಶಾಲು ಹೊದಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.

ನಂತರ ವಿದ್ಯಾರ್ಥಿಗಳಾದ ಅಕ್ಷಯ್ ಪಾಂಗಳ್ ಮತ್ತು ವರಲಕ್ಮೀ ಪಿ.ಎಸ್ ಮಾತನಾಡಿ ಈ ಕಾಲೇಜಿನಲ್ಲಿ ದೊರೆತ ನಿರಂತರ ಪ್ರೋತ್ಸಾಹವೇ ನಮ್ಮ ಯಶಸ್ಸಿಗೆ ಕಾರಣ. ಉಪನ್ಯಾಸಕರ ಪಠ್ಯಕ್ರಮ, ಸಲಹೆ ಸೂಚನೆಗಳು ನಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಸಹಕಾರಿಯಾಗಿವೆ. ಉತ್ತಮ ಶಿಕ್ಷಣವನ್ನು ನೀಡಿದ ವಿದ್ಯಾಸಂಸ್ಥೆ, ಗುರುಹಿರಿಯರು ಮತ್ತು ಪ್ರೋತ್ಸಾಹಿಸಿದ ಹೆತ್ತವರಿಗೆ ಕೃತಜ್ಞನಾಗಿದ್ದೇನೆ ಎಂದು ಅಭಿಪ್ರಾಯಪಟ್ಟರು.

ಯಕ್ಷ ಕವನ- ಪ್ರತಿಭಾ ನಮನ:
ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ ರೂಪುಗೊಳ್ಳಲು ಕಲಿತ ಸಂಸ್ಥೆ, ಪೋಷಣೆ ನೀಡಿದ ಪೋಷಕರು, ಮಾರ್ಗದರ್ಶನ ನೀಡಿದ ಗುರುಗಳ ತ್ಯಾಗ ಇದೆ. ಇದನ್ನು ವಿದ್ಯಾರ್ಥಿಗಳಿಗೆ ನೆನಪಿಸಿ ಜೀವನದಲ್ಲಿ ನೈತಿಕತೆಯನ್ನು ರೂಪಿಸಿಕೊಳ್ಳಲು ಅಭಿನಂದನೆಯ ಜೊತೆ ಮಾರ್ಗದರ್ಶನವನ್ನು ಯಕ್ಷಗಾನದ ಹಾಡಿನ ಮೂಲಕ ಪ್ರಸ್ತುತ ಪಡಿಸಲಾಯಿತು. ವಿದ್ಯಾರ್ಥಿಗಳಾದ ಹೇಮಸ್ವಾತಿ, ಶ್ರೇಯಾ, ಅಂಬಾತನಯ, ನವೀನ್‌ಕೃಷ್ಣ ಇವರು ಹಿಮ್ಮೇಳದಲ್ಲಿ ಸಹಕರಿಸಿದರು. ಪರಿಕಲ್ಪನೆ ಮತ್ತು ಸಾಹಿತ್ಯವನ್ನು ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀಧರ ಶೆಟ್ಟಿಗಾರ್ ರವರ ಮಾರ್ಗದರ್ಶನದಲ್ಲಿ ಮೂಡಿಬಂತು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯೆ ವತ್ಸಲಾ ರಾಜ್ಞಿ, ರವಿ ಮುಂಗ್ಲಿಮನೆ, ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ. ಜಿ. ಭಟ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು.

ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥರಾದ ಪರಮೇಶ್ವರ ಶರ್ಮ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಹರ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿ ಚೈತ್ರ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಇಡೀ ದೇಶವೇ ಲಾಕ್‌ಡೌನ್ ಆದರೂ ಕೇರಳದಲ್ಲಿ ಮದ್ಯದ ಅಂಗಡಿಗಳಿಗಿಲ್ಲ ಕಡಿವಾಣ

Upayuktha

ಕಡಿತದ ಭೀತಿಯಲ್ಲಿ ಅಶ್ವತ್ಥ ವೃಕ್ಷ..! ರಕ್ಷಣೆಗೆ ಪರಿಸರ ಪ್ರೇಮಿಗಳ ಆಗ್ರಹ

Upayuktha

ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ: ಭತ್ತದ ನಾಟಿ ಕಾರ್ಯಕ್ಕೆ ಡಾ. ಪ್ರಭಾಕರ ಭಟ್ ಚಾಲನೆ

Upayuktha