ದ.ಕ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯಿಂದ ನ.28ಕ್ಕೆ ಪ್ರತಿಭಟನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ಗಳ ಸಾಲದ ಸುಳಿಗೆ ಬಿದ್ದ ಬಡ ಮಹಿಳೆಯರ ಸಾಲಮನ್ನಾ ಮಾಡಲು ಆಗ್ರಹಿಸಿ ಹಾಗೂ ಮೈಕ್ರೋ ಫೈನಾನ್ಸ್ ವ್ಯವಹಾರ ಸ್ತಂಭನಗೊಳಿಸಲು ಒತ್ತಾಯಿಸಿ ದ.ಕ. ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಸಾಲ ಸಂತ್ರಸ್ತರ ಬೃಹತ್ ಪ್ರತಿಭಟನಾ ಸಮಾವೇಶ ನ.28ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗುವುದು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಸಂಚಾಲಕ ಬಿ.ಎಂ. ಭಟ್ ಮಾತನಾಡಿ, ಸಮಾವೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಸಾಲ ಸಂತ್ರಸ್ತರು ಪಾಲ್ಗೊಳ್ಳಲಿದ್ದಾರೆ. ನಮ್ಮ ಹೋರಾಟಕ್ಕೆ ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ, ಜಿಲ್ಲೆಯ ದಲಿತ ಸಂಘಟನೆಗಳು, ಬೆಳ್ತಂಗಡಿ ಮತ್ತು ಪುತ್ತೂರು ಬೀಡಿ ಕಾರ್ಮಿಕರ ಸಂಘಟನೆಗಳು, ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಸಂಘ, ದ.ಕ. ಜಿಲ್ಲಾ ಸಾರಿಗೆ ನೌಕರರ ಸಂಘ ಬೆಂಬಲ ವ್ಯಕ್ತಪಡಿಸಿವೆ ಎಂದರು.
ಬ್ಯಾಂಕೇತರ ಕಿರು ಹಣಕಾಸು ಸಂಸ್ಥೆ ಸಾಲ ರೂಪದಲ್ಲಿ ಸಹಾಯ ಮಾಡಬಹುದೇ ಹೊರತು ಲೇವಾದೇವಿ ವ್ಯವಹಾರ ನಡೆಸಬಾರದು. ಇದೀಗ ಮೈಕ್ರೋ ಫೈನಾನ್ಸ್ ನಡೆಸುತ್ತಿರುವುದು ಶುದ್ಧ ಲೇವಾದೇವಿ ವ್ಯವಹಾರವಾಗಿದೆ. ಸಾಲ ನೀಡುವಾಗಲೇ ಸಾಲದ ಮೊದಲ ಕಂತನ್ನು ಕಡಿತ ಮಾಡಲಾಗುತ್ತದೆ. ಈಶ್ವರಮಂಗಲದಲ್ಲಿ ಸಾಲ ಕಟ್ಟಲಾಗದೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಮರು ಪಾವತಿ ಮಾಡದವರ ಮನೆ ಜಪ್ತಿ ಕಾರ್ಯ ನಡೆಯುತ್ತಿದೆ ಎಂದು ಅವರು ನುಡಿದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ಗಳು ಸುಮಾರು 56 ಸಾವಿರ ಕೋಟಿ ರೂ. ಸಾಲ ಹಂಚಿದ ಬಗ್ಗೆ ಮಾಹಿತಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಸುಮಾರು 15 ಸಾವಿರ ಕೋಟಿ ರೂ. ಹಂಚಲಾಗಿದೆ. ಜಿಲ್ಲೆಯ ಒಂದು ಗ್ರಾಮದಲ್ಲಿರುವ 300 ಮಂದಿಯಲ್ಲಿ 250 ಮಂದಿಗೆ ಸಾಲ ಹಂಚಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷ ಇಮ್ತಿಯಾಜ್ ಬಿ.ಕೆ., ಹಿರಿಯ ಕಮ್ಯುನಿಸ್ಟ್ ಮುಖಂಡ ಎಲ್. ಮಂಜುನಾಥ್, ಕಾರ್ಮಿಕ ಮುಖಂಡರಾದ ಈಶ್ವರಿ, ನೆಬಿಸಾ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್ ಸುದ್ದಿಜಾಲ)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ