ಸಾಧಕರಿಗೆ ನಮನ

ಯಶೋಗಾಥೆ: ಬಿಹಾರದ ಜಲಯೋಧ ಲಾಂಗಿ ಭುಯಾನ್

ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಬಿಹಾರ ಇನ್ನು ಕೂಡ ಪೂರ್ಣ ಅಭಿವೃದ್ಧಿ ಕಂಡಿಲ್ಲ. ಮೂಲಭೂತ ಅವಶ್ಯಕತೆಯಾದ ನೀರಿನ ಕೊರತೆ ಇನ್ನೂ ಕೂಡ ಅಲ್ಲಿನ ಜನರನ್ನು ಕಾಡುತ್ತಿದೆ. ಈ ನಡುವೆ ತನ್ನ ಊರಿನ ನೀರಿನ ಸಮಸ್ಯೆ ಬಗೆಹರಿಸಲು ಪಣ ತೊಟ್ಟು ಬರೋಬ್ಬರಿ 20 ವರ್ಷಗಳ ಕಾಲ ಕೆಲಸ ಮಾಡಿ ಊರಿಗೆ ನೀರು ಹರಿಸಿದ ರೋಚಕ ಕಥೆ ಲಾಂಗಿ ಭುಯಾನ್‌ದ್ದು.

ಬಿಹಾರದ ಗಯಾ ಜಿಲ್ಲೆಯ ಲಾಹ್ತುವಾ ಪ್ರಾಂತ್ಯದ ಕೋಥಿಲಾವಾ ಹಳ್ಳಿ ತೀರಾ ಹಿಂದುಳಿದ ಹಳ್ಳಿ. ಬೆಟ್ಟ ಗುಡ್ಡಗಳ ನಡುವಿನ ಈ ಹಳ್ಳಿ ನೀರಿನ ಸಮಸ್ಯೆಯಿಂದ ಬಳಲುತ್ತಿತ್ತು. ಭೌಗೋಳಿಕ ರಚನೆ ಕೂಡ ಸಮಸ್ಯೆಗೆ ಕಾರಣವಾಗಿತ್ತು. ಬೆಟ್ಟದ ಮೇಲಿದ್ದ ಹಳ್ಳಿಯಾದ್ದರಿಂದ ನೀರು ನಿಲ್ಲುತ್ತಿರಲಿಲ್ಲ. ಮಳೆ ನೀರೆಲ್ಲ ಹರಿದು ಹೋಗುತ್ತಿತ್ತು.

ಊರಿನಲ್ಲಿ ಬೇರೆ ಆದಾಯದ ಮೂಲಗಳಿರಲಿಲ್ಲ, ಕೃಷಿ ಚಟುವಟಿಕೆಗಳಿಗೆ ನೀರಿನ ಅಗತ್ಯವಿದ್ದುದರಿಂದ ಕೃಷಿ ಕಾರ್ಯ ಕಷ್ಟವಾಗಿತ್ತು. ಪರಿಣಾಮ ಗ್ರಾಮದ ಯುವಕರು ಊರು ತೊರೆಯಲು ಆರಂಭಿಸಿದರು. ಕೃಷಿ ಭೂಮಿ ಹಾಳು ಬೀಳತೊಡಗಿತು.

ಜಿಲ್ಲಾ ಕೇಂದ್ರ ಗಯಾದಿಂದ 80 ಕಿ.ಮೀ ದೂರದ ಈ ಹಳ್ಳಿಯ ಲಾಂಗಿ ಭುಯಾನ್ ಕೆಲಸ ಗೋವು ಮೇಯಿಸುವುದು. ಗ್ರಾಮದ ಯುವಕರು ಊರು ಬಿಡುತ್ತಿರುವುದು ಅವರಿಗೆ ಬೇಸರ ತರಿಸಿತ್ತು. ಹಳ್ಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳಷ್ಟೇ ಉಳಿಯತೊಡಗಿದ್ದರು. ಪ್ರತಿದಿನ ಗೋವುಗಳನ್ನು ಮೇಯಿಸಲು ಹಳ್ಳಿಯ ಸಮೀಪದ ಭಗೇದಾ ಸಹ್ವಾಸಿ ಅರಣ್ಯ ಪ್ರದೇಶದ ಕಡೆ ಹೋಗುತ್ತಿದ್ದ ಲಾಂಗಿ ಅಲ್ಲಿ ಮಳೆ ನೀರೆಲ್ಲ ಬೆಟ್ಟದ ಮೇಲಿಂದ ಸಂಗ್ರಹವಾಗಿ ಅನಂತರ ತೊರೆಯಾಗಿ ಹೋಗುತ್ತಿದ್ದುದನ್ನು ಗಮನಿಸಿದರು. ಆ ನೀರನ್ನು ಊರೆಡೆ ಹರಿಸಿದರೆ ಅದೇ ಹಳ್ಳಿಯ ಕೃಷಿಗೆ ಸಾಕಾಗುತ್ತಿತ್ತು.

ನೀರನ್ನು ಊರಿಗೆ ತರುವ ನಿರ್ಣಯ ಮಾಡಿದ ಲಾಂಗಿ ಭುಯಾನ್ ಊರವರೊಂದಿಗೆ ಈ ಕುರಿತು ಮಾತಾಡಿದಾಗ ಯಾರೂ ಕೂಡ ಆಸಕ್ತಿ ತೋರಿಸಲಿಲ್ಲ. ಆದರೆ ದೃಢ ನಿರ್ಧಾರ ಕೈಗೊಂಡ ಲಾಂಗಿ ಭುಯಾನ್ ತನ್ನ ಯೋಜನೆಯನ್ನು ಆರಂಭಿಸುತ್ತಾರೆ. ಮೊದಲು ಇಡೀ ಜಾಗದ ಸರ್ವೆ ಮಾಡಿದ ಅವರು ನಂತರ ಕಾಲುವೆ ತೋಡುವ ಹಾದಿಯನ್ನು ನಿಗದಿ ಮಾಡುತ್ತಾರೆ.

ತನ್ನ ಜೀವನದ ಬಹುದೊಡ್ಡ ಸವಾಲನ್ನು ಸ್ವೀಕರಿಸಿದ ಲಾಂಗಿ ಭುಯಾನ್ ಭಗೇದಾ ಸಹ್ವಾಸಿ ಅರಣ್ಯ ಪ್ರದೇಶದಿಂದ 2001ರಿಂದ ಕಾಲುವೆ ತೋಡಲು ಆರಂಭಿಸುತ್ತಾರೆ. ಪ್ರತಿದಿನ ಗೋವು ಮೇಯಿಸುವ ಕೆಲಸದ ನಡುವೆಯೇ ಕಾಲುವೆ ತೋಡಿದ ಲಾಂಗಿ 20 ವರ್ಷಗಳ ಕಾಲ ಸತತ ಕೆಲಸ ಮಾಡಿ ತನ್ನ ಕನಸು ನನಸು ಮಾಡುತ್ತಾರೆ. 4 ft ಅಗಲ 3 ft ಆಳದ 3 ಕಿ.ಮೀ ಉದ್ದದ ಕಾಲುವೆ ಈ ವರ್ಷ ಪೂರ್ಣಗೊಳ್ಳುತ್ತದೆ.

ಭಗೇದಾ ಸಹ್ವಾಸಿ ಅರಣ್ಯ ಪ್ರದೇಶದಿಂದ ಸಂಗ್ರಹವಾದ ನೀರು ಕೋಥಿಲಾವಾ ಹಳ್ಳಿಯ ಕೆರೆ ತುಂಬುತ್ತಿದ್ದಂತೆ ಲಾಂಗಿ ಭುಯಾನ್ ಕಣ್ಣುಗಳಿಂದ ಆನಂದ ಭಾಷ್ಪ ಜಿನುಗುತ್ತದೆ.ತನ್ನ ಊರಿನ ಬಹುಕಾಲದ ಸಮಸ್ಯೆಗೆ ಮುಕ್ತಿ ಹಾಡಿದ ಸಂತಸ ಲಾಂಗಿ ಕಣ್ಣುಗಳಲ್ಲಿ ಕಾಣುತ್ತಿತ್ತು.

ಊರವರ ನಿರಾಸಕ್ತಿ ನಡುವೆಯೇ ಊರಿನ ಸಮಸ್ಯೆ ನಿವಾರಣೆಗೆ ಪಣತೊಟ್ಟ ಲಾಂಗಿ ಭುಯಾನ್ ಇಂದು ಹೀರೋ ಆಗಿ ಮೆರೆದಿದ್ದಾರೆ. 20 ವರ್ಷಗಳ ಕಠಿಣ ಪರಿಶ್ರಮ ಫಲ ನೀಡಿದೆ. ಹಳ್ಳಿ ಮತ್ತೆ ಕೃಷಿ ಚಟುವಟಿಕೆಗೆ ಮರಳುತ್ತಿದೆ. ಹಳ್ಳಿ ತೊರೆದ ಯುವಕರು ಮತ್ತೆ ಹಳ್ಳಿಯೆಡೆಗೆ ಮುಖ ಮಾಡಿದ್ದಾರೆ.

ತನ್ನದೇ ಜಿಲ್ಲೆಯ ಬೆಟ್ಟ-ಗುಡ್ಡಗಳನ್ನು ಸುತ್ತಿಗೆ, ಹಾರೆಗಳಿಂದ ಕಡಿದು ರಸ್ತೆ ಮಾಡಿದ ದಶರಥ್ ಮಾಂಝಿಯಂತೆ ಇಂದು ಲಾಂಗಿ ಭುಯಾನ್ ಬಿಹಾರದಲ್ಲಿ ದಂತ ಕಥೆಯಾಗಿದ್ದಾರೆ. ದೇಶ ವಿದೇಶಗಳ ಮಾಧ್ಯಮಗಳು ಇವರ ಸಾಧನೆಯನ್ನು ಪ್ರಚುರಪಡಿಸಿವೆ. ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ದೂರದೃಷ್ಟಿಯಿಂದ ಊರಿನ ಅಭಿವೃದ್ಧಿಗೆ ಕಾರಣನಾದ ಅಪರೂಪದ ದೃಷ್ಟಾಂತಗಳಲ್ಲಿ ಇದೂ ಒಂದು. ಕಠಿಣ ಪರಿಶ್ರಮ ಮತು ದೃಢ ನಿರ್ಧಾರಗಳು ಮಹತ್ತರ ಸಾಧನೆಗೆ ಮುನ್ನಡಿಯಾಗುತ್ತವೆ ಎಂಬುದಕ್ಕೆ ಲಾಂಗಿ ಭುಯಾನ್ ಜೀವನವೊಂದು ನಿದರ್ಶನ.

-ತೇಜಸ್ವಿ ಕೆ, ಪೈಲಾರು, ಸುಳ್ಯ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಇಂದು ಪ್ರಧಾನಿ ಮೋದಿ ಜನ್ಮದಿನ: ನನಗೇಕೆ ಮೇೂದಿ ಇಷ್ಟವಾಗುತ್ತಾರೆ?

Upayuktha

ಕ್ರೀಡಾಲೋಕ: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಕೀರ್ತಿ ತಂದ ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್

Upayuktha

ಎಲ್ಲರ ವಿರೋಧ ಕಟ್ಟಿಕೊಂಡ ಅರುಂಧತಿ ರಾಯ್

Upayuktha