ಅಡುಗೆ-ಆಹಾರ ಲೇಖನಗಳು

ನಾವು ಅಡುಗೆಯವರು… ತಾಯಿ ಅನ್ನಪೂರ್ಣೇಶ್ವರಿಯ ಸೇವಕರು…

ಪ್ರಾತಿನಿಧಿಕ ಚಿತ್ರ

ಹೌದು ನಾವು ಅಡುಗೆಯವರು. ಮಾನವನ ಉಗಮವಾದಾಗಿನಿಂದ ಪ್ರಾರಂಭವಾದ ನಮ್ಮ ಈ ವೃತ್ತಿ ಕೊನೆಯ ಮಾನವನಿರವವರೆಗೂ ಮುಂದುವರಿಯುತ್ತಲೇ ಇರುವುದು. ಆದ್ದರಿಂದ ನಾವು ಸದಾ ಕಾಲವೂ ಉದ್ಯೋಗಿಗಳೇ. ನಿರುದ್ಯೋಗ ಸಮಸ್ಯೆ ನಮಗೆ ಅನ್ವಯವಾಗುವುದಿಲ್ಲ. ಸರ್ವ ಕಾಲದಲ್ಲಿ ಸರ್ವತ್ರವಾಗಿ ಸರ್ವರಿಗೂ ನಾವು ಅನಿವಾರ್ಯರು. ಹಾಗೆಂದು ನಾವು ಅಹಂಕಾರ ಪಡುವಂತಿಲ್ಲ. ಇವತ್ತು ಸಮಾಜದಲ್ಲಿ ಎಲ್ಲರಿಂದಲೂ ಒಂದು ಹಂತದ ಅಂತರವನ್ನು ಕಾಯ್ದಿರಿಸಿಕೊಂಡು ಒಂದು ರೀತಿಯ ಕೀಳರಿಮೆಯನ್ನು ಅನುಭವಿಸುವವರೂ ನಾವೇ. ಇದಕ್ಕೆ ಕೆಲವು ಕಾರಣಗಳೂ ಇಲ್ಲದಿಲ್ಲ.

ಇವತ್ತು ಸಂಗೀತಜ್ಞರು, ಸಾಹಿತಿಗಳು, ವಿವಿಧ ಪದವಿಗಳನ್ನು ಪಡೆದವರು, ಅಥವಾ ಬೇರೆ ಬೇರೆ ಉದ್ಯೋಗದಲ್ಲಿರುವವರು ಕೂಡ ಅಡಿಗೆಯ ಉದ್ಯೋಗವನ್ನು ಆರಿಸಿಕೊಂಡು ಈ ವೃತ್ತಿಯಲ್ಲಿ ಔನ್ನತ್ಯವನ್ನು ಕಂಡುಕೊಂಡಂಥ ಉದಾಹರಣೆಗಳು ಬಹಳಷ್ಟಿವೆ. ಆದರೆ ಹಿಂದಿನ ಕಾಲದಲ್ಲಿ ಹಾಗೆ ಇರಲಿಲ್ಲ. ಪ್ರತೀ ಮನೆಯಲ್ಲಿ ಐದಾರು ಮಕ್ಕಳು. ವಿದ್ಯೆಯೂ ಕಡಿಮೆ. ಉದ್ಯೋಗವಕಾಶಗಳೂ ಕಡಿಮೆ. ಹೊಟ್ಟೆಪಾಡಿಗೆ ಏನಾದರೊಂದು ದಾರಿ ಇದ್ದರೆ ಅದು ಅಡಿಗೆ ವೃತ್ತಿ.

ಬಂಡವಾಳವಿಲ್ಲದೆ, ಬುದ್ಧಿಮತ್ತೆ ಕಡಿಮೆ ಇದ್ದರೂ ‘ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ’ ಎನ್ನುವಂತೆ ಅಡಿಗೆಯ ವೃತ್ತಿಯನ್ನು ಆರಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದ್ದರಿಂದ ಈ ವೃತ್ತಿಗೆ ಗೌರವವೂ ಅಷ್ಟರಲ್ಲೇ ಇತ್ತು. ಯಾರೋ ಒಬ್ಬರ ಕೈಕೆಳಗೆ ಕೆಲಸ ಮಾಡಿ ಆತ ಕೊಟ್ಟ ಸಂಭಾವನೆ ಪಡೆದು ಜೀವನ ಸಾಗಿಸುತ್ತಿದ್ದವರಲ್ಲಿ, ಹೆಚ್ಚೇನೂ ಸಾಧನೆ ನಿರೀಕ್ಷಿಸುವಂತಿಲ್ಲ.ಆದರೆ ಅಲ್ಲಿ ಕೂಡ ಕೆಲವು ಸಾಧಕರು ಕೆಲವೇ ಸಮಯದಲ್ಲಿ ಎಲ್ಲ ಅಡಿಗೆಯ ಸೂಕ್ಷ್ಮಗಳನ್ನು ಕಲಿತುಕೊಂಡು ಉತ್ತಮ ಹೆಸರು ಸ್ಥಾನ ಮಾನವನ್ನು ಪಡಕೊಂಡು ಎತ್ತರಕ್ಕೆ ಏರಿದವರೂ ಇದ್ದಾರೆ.

ಆದರೆ ಇವತ್ತು ಹಾಗಿಲ್ಲ. ಈ ಕ್ಷೇತ್ರ ಕೂಡ ಹೆಸರು, ಸ್ಥಾನ, ಧನ ಎಲ್ಲವೂ ಯಥೇಚ್ಛವಾಗಿ ಸಿಗುವಂತೆ ಮಾಡಿದೆ. ಶಿಸ್ತು, ಸಮಯಪ್ರಜ್ಞೆ, ಪ್ರಾಮಾಣಿಕತೆ, ಶುಚಿತ್ವ, ಆರೋಗ್ಯ, ವಿಶ್ವಾಸ, ನಗುಮುಖದ ಸೇವೆ ಇದಿಷ್ಟು ಬಂಡವಾಳವಿದ್ದಲ್ಲಿ ಅಡುಗೆಯವರನ್ನು ಕೂಡ ಯಾರೂ ಅಗೌರವಿಸುವುದಿಲ್ಲ. ಆದರೊಂದು ಸಮಸ್ಯೆ ಅಡುಗೆಯವರನ್ನು ಇನ್ನೂ ಕಾಡುತ್ತಿದೆ ಎಂದರೆ ಅದರ ಪರಿಹಾರವು ಹೇಗೆಂದೇ ತಿಳಿಯದು. ಅದೇನೆಂದರೆ ಅಡುಗೆಯವರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬಾರದಿರುವುದು. ಬಹುಷಃ ಇದು ಜ್ವಲಂತ ಸಮಸ್ಯೆಯೇ. ಅಡುಗೆಯವರು ಎಂದೊಡನೆ ಶ್ರೀಮಂತರಾಗಿರಬಹುದು, ವಿವಿಧ ರೀತಿಯ ವಾಹನ ಮಾಲಿಕರಿರಬಹುದು, ಸ್ಪರದ್ರೂಪಿಯಾಗಿರಬಹುದು, ಸಮಾಜಮುಖಿಯೂ ಆಗಿರಬಹುದು ಆದರೆ ಸಂಸಾರ ಮಕ್ಕಳು ಎಂಬಲ್ಲಿಗೆ ಬಂದರೆ ಪರಿಣಾಮ ಶೂನ್ಯವೇ. ಇದರ ಹೊರತಾಗಿ ಅಡುಗೆ ವೃತ್ತಿ ಯಾರನ್ನೂ ಕೈ ಬಿಡದೆ ಸದಾಕಾಲ ಪೋಷಿಸುವುದರಲ್ಲಿ ಸಂದೇಹವೇ ಇಲ್ಲ.

ಈ ವೃತ್ತಿಯಲ್ಲಿ ಕೆಲವು ಅನುಭವಗಳೆಂದರೆ.. ಯಾವುದೇ ಅಡುಗೆಯವರು ಅಡುಗೆ ರುಚಿಕರವಾಗಬೇಕೆಂದೇ ಆರಂಭಿಸುತ್ತಾರೆ. ಆದರೆ ಕೆಲವೊಮ್ಮೆ ಪ್ರಮಾದವಶಾತ್ ಯಾವುದೋ ಒಂದು ವ್ಯಂಜನ ರುಚಿ ಕಳಕೊಂಡಿರಬಹುದು. ಆವಾಗ ಊಟ ಮಾಡುವವರು ಸಜ್ಜನರಾದಲ್ಲಿ ಅಡುಗೆಯವನಲ್ಲೇ ಬಂದು ಸೌಜನ್ಯದಿಂದಲೇ ಹೇಳುತ್ತಾರೆ ಕೊರತೆಯನ್ನು. ಆದರೆ ಕೆಲವರು ಬೊಬ್ಬೆ ಹೊಡೆಯುವಂತೆ ತಾನೊಬ್ಬ ಇದ್ದದ್ದನ್ನು ಇದ್ದಂತೆ ಹೇಳುವವ ಎಂಬ ಒಣ ಪ್ರತಿಷ್ಠೆಯಿಂದ ಸಾರಿಗೆ ಉಪ್ಪು ಜಾಸ್ತಿ, ಪಾಯಸಕ್ಕೆ ನೀರು ಜಾಸ್ತಿ, ಸಾಂಬಾರಿಗೆ ಒಗ್ಗರಣೆ ಹಾಕಿಲ್ಲ… ಮುಂತಾದ ನ್ಯೂನತೆಯನ್ನು ಎಲ್ಲರಿಗೂ ಕೇಳುವಂತೆ ಹೇಳಿದಾಗ. ಅಡುಗೆಯವನಿಗೆ ಬೇಸರವಾಗದಿರುತ್ತದೆಯೇ?

ಅಡುಗೆ ಚೆನ್ನಾಗಿರಲು ಹಲವು ಕಾರಣಗಳಿದ್ದಂತೆ, ಹಾಳಾಗಲೂ ಹಲವು ಕಾರಣಗಳಿವೆ. ಸಾಮಾನು ಕ್ವಾಲಿಟಿ ಇಲ್ಲದಿರಬಹುದು, ಪಾತ್ರೆಗಳು ತೆಳು ಇರಬಹುದು, ಅಡುಗೆ ಕೋಣೆ ಸಂಕುಚಿತವಾಗಿರಬಹುದು, ಸ್ಟೌ ಇತ್ಯಾದಿ ಸುಸ್ಥಿತಿಯಲ್ಲಿಲ್ಲದಿರಬಹುದು, ವಿದ್ಯುತ್ ಕೈಕೊಡಬಹುದು, ಮನೆಯವರೊಡನೆ ಹೊಂದಾಣಿಕೆ ಇಲ್ಲದಿರಬಹುದು… ಹೀಗೆ.

ಹಾಗೆಂದು ನಾವೇನು ಪರಿಪೂರ್ಣರಲ್ಲ. ನಮ್ಮಲ್ಲೂ ಅನೇಕ ಕೊರತೆಗಳಿವೆ. ಮೇಲ್ನೋಟದಲ್ಲಿ ನೋಡುವುದಾದರೆ, ವೀಳ್ಯ ಹಾಕಿ ಕೆಲಸದಲ್ಲಿ ತೊಡಗುವುದು, ಬೀಡಿ ಸಿಗರೇಟು ಜರ್ದಾ ಗುಟ್ಕಾ ಸೇವನೆ, ಸಿಡುಕಿ ಮಾತಾಡುವುದು, ಅಡಿಗೆಗೆಂದು ಕೊಟ್ಟ ಸಾಮಾನನ್ನು ಅಪಹರಿಸುವುದು, ಕೆಲಸದಲ್ಲಿ ಅಶ್ರದ್ಧೆ, ಲೆಕ್ಕಾಚಾರವಿಲ್ಲದೆ ಬೇಯಿಸಿ ಹಾಕುವುದು ಹೀಗೆ ಅನೇಕವಿರಬಹುದು.

ಕಲಿಯುಗದಲ್ಲಿ ಕ್ಷಿಪ್ರ ಪ್ರಸಾದ ಕರುಣಿಸುವ ದೇವತೆಗಳಿದ್ದರೆ ಅದು ಗಣೇಶ ಮತ್ತು ದುರ್ಗೆ. ಬೇರೆಲ್ಲ ದೇವತಾರಾಧನೆಗಿಂತ ವೇಗವಾಗಿ ನಮಗೆ ಈ ದೇವತೆಗಳು ಫಲ ನೀಡುತ್ತವೆ ಎಂಬ ಪ್ರತೀತಿ ಇದೆ. ಅದಕ್ಕಿಂತಲೂ ವೇಗವಾಗಿ ಪರಿಣಾಮ ನೀಡುವ ಒಂದು ಕಾಯಕ ಇದ್ದರೆ ಅದು ಅಡುಗೆಯ ಕಾಯಕ. ಬೇರೆಲ್ಲ ದೇವತಾರಾಧನೆಯ ಪರಿಣಾಮ ಕಾಲಾಂತರದಲ್ಲಿ ಗೊತ್ತಾದರೆ, ಅಡುಗೆ ಕ್ಷಿಪ್ರ ಪ್ರಸಾದವೇ. ಒಳ್ಳೆಯದೋ ಕೆಟ್ಟದ್ದೋ ಆ ಕ್ಷಣದಲ್ಲಿ ಫಲಿತಾಂಶ. ಸಾಧಾರಣವಾಗಿ ನಾವೇ ಸ್ವಯಂ ಪರೀಕ್ಷಿಸಬಹುದು. ಊಟವಾದ ಮೇಲೆ ಊಟದ ಎಲೆಯು ಖಾಲಿಯಾಗಿದ್ದರೆ ಒಳ್ಳೆಯ ಅಡುಗೆ, ಎಲೆಯು ತುಂಬಿದ್ದರೆ ಸಾಮಾನ್ಯ ಅಡುಗೆ… ನಾವು ಎಲ್ಲರಂತೆ ಹೆಂಡತಿ ಮಕ್ಕಳೊಂದಿಗೆ ಬಾಳುವಂತೆ ಅನುಗ್ರಹಿಸೆಂದು ದೇವರನ್ನು ಬೇಡೋಣ. ಅಡುಗೆಗೆ ಹೇಳಿದವರನ್ನು ಗೌರವಿಸೋಣ. ಸ್ವಾಭಿಮಾನಿಯಾಗಿ ಬಾಳೋಣ…. ಜೈ ಅನ್ನಪೂರ್ಣೇಶ್ವರಿ.
************
-ಸಹಸ್ರಬುಧ್ಯೆ ಮುಂಡಾಜೆ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ – ನವೆಂಬರ್ 7

Upayuktha

ಏನಿದು ‘ಜೋಕಾಲಿ ಯೋಗ’…? ಎಲ್ಲಿಂದ ಬಂತು…?

Upayuktha

ಕೊರೊನಾ ಬಳಿಕ ದೃಶ್ಯ ಮಾಧ್ಯಮಗಳ ಹೆಗಲೇರಿದ ಮಾದಕ ದ್ರವ್ಯದ ಬೇತಾಳ….

Harshitha Harish