ಆರೋಗ್ಯ ಪ್ರಮುಖ ಲೇಖನಗಳು

ನಿಮ್ಮ ದೇಹ ಪ್ರಕೃತಿಗೆ ಯಾವ ಆಹಾರ ಸೂಕ್ತ…? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

ಆಯುರ್ವೇದ ಶಾಸ್ತ್ರದಲ್ಲಿ ವಾತ, ಪಿತ್ತ ಹಾಗೂ ಕಫ ಎಂಬ ಮೂರು ದೋಷಗಳನ್ನು ಹೇಳಲಾಗಿದೆ. ಮಾನವನ ಇಡೀ ಶರೀರದಲ್ಲಿ ಎಲ್ಲ ಕ್ರಿಯೆಗಳು ಈ ಮೂರು ದೋಷಗಳನ್ನು ಒಳಗೊಂಡಿದೆ. ಇವುಗಳ ಸಮತೋಲನವೇ ಆರೋಗ್ಯ, ಏರುಪೇರೇ ಅನಾರೋಗ್ಯ.

‘ದೇಹ ಪ್ರಕೃತಿ’ ಎಂಬುದು ಸಾಮಾನ್ಯವಾಗಿ ಉಪಯೋಗಿಸುವ ಪದ. ಇದು ಪ್ರತಿಯೊಬ್ಬರಲ್ಲೂ ಭಿನ್ನ. ನಮ್ಮ ಶರೀರದಲ್ಲಿರುವ ವಾತ, ಪಿತ್ತ, ಕಫಗಳ ಪ್ರಮಾಣಕ್ಕೆ ಅನುಗುಣವಾಗಿ ಮುಖ್ಯವಾಗಿ ಮೂರು ವಿಧದ ಪ್ರಕೃತಿಗಳನ್ನು ಹೇಳಲಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲೂ ಮೂರೂ ಅಂಶಗಳಿದ್ದರೂ ಯಾವುದಾದರೂ ಒಂದು ಅಥವಾ ಎರಡು ದೋಷಗಳು ಮುಖ್ಯವಾಗಿ ಕಾಣಿಸಿಕೊಳ್ಳುತ್ತವೆ.

ಆಹಾರ ಸೇವನೆ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗ. ಅದನ್ನು ಕ್ರಮರಹಿತವಾಗಿ ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ‘ಲೋಕೋಭಿನ್ನರುಚಿಃ’ ಎಂಬಂತೆ ಆಹಾರದಲ್ಲಿಯೂ ಪ್ರತಿಯೊಬ್ಬರ ಆಯ್ಕೆಯೂ ಭಿನ್ನ. ಆದರೆ ನಮ್ಮ ದೇಹ ಪ್ರಕೃತಿ ಯಾವುದೆಂಬುದನ್ನು ಗಮನಿಸಿ ಆಹಾರ ಸೇವಿಸಿದರೆ ಅದು ಉತ್ತಮ ಆರೋಗ್ಯಕ್ಕೆ ಪೂರಕ. ಅದಕ್ಕಾಗಿ ಮೊದಲು ನಮ್ಮ ‘ದೇಹ ಪ್ರಕೃತಿ’ಯನ್ನು ತಿಳಿದುಕೊಳ್ಳಬೇಕು.

ಬೆಳಗ್ಗೆ ಬೇಗ ಏಳುವುದರಿಂದ ಏನು ಲಾಭ…?

ವಾತ ದೋಷ ಪ್ರಧಾನವಾಗಿರುವ ಪ್ರಕೃತಿಯವರು ಖಾರ, ಕಹಿ ಮತ್ತು ಕಷಾಯ ರಸದ ಆಹಾರ, ಶೀತ, ಒಣ ಪದಾರ್ಥಗಳನ್ನು ಸೇವಿಸಿದರೆ ವಾತದೋಷ ಪ್ರಕೋಪವಾಗಿ ಕೈ, ಕಾಲು ಸಂಧಿಗಳಲ್ಲಿ ನೋವು, ಒಣಚರ್ಮ, ಮಲಬದ್ಧತೆ ಹಾಗೂ ಇನ್ನೂ ಅನೇಕ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತವೆ.

ಅದೇ ರೀತಿ ಪಿತ್ತ ಪ್ರಧಾನ ಪ್ರಕೃತಿ ಉಳ್ಳವರು ಖಾರ, ಉಪ್ಪು, ಹುಳಿ ಪದಾರ್ಥ, ಅತಿಯಾದ ಬಿಸಿ, ಆಹಾರವನ್ನು ಸೇವಿಸಿದರೆ ಪಿತ್ತಸಂಬಂಧಿ ತೊಂದರೆಗಳಾದ ಹೊಟ್ಟೆ ಉರಿ, ಉರಿಮೂತ್ರ, ಕಾಮಾಲೆ, ಅತಿಸಾರ ಇನ್ನಿತರ ರೋಗಗಳು ಉಂಟಾಗುತ್ತವೆ.

ಕಫ ಪ್ರಧಾನ ಪ್ರಕೃತಿಯವರು ಶೀತ, ಮಂದ ಆಹಾರ, ಜೀರ್ಣಿಸಲು ಬಹಳ ಸಮಯ ತೆಗೆದುಕೊಳ್ಳುವಂತಹ ಆಹಾರ, ಅತಿಯಾದ ಸಿಹಿ, ಉಪ್ಪು, ಹುಳಿ ಸೇವನೆಯಿಂದ ಕಫ ಸಂಬಂಧಿ ತೊಂದರೆಗಳಾದ ಅಜೀರ್ಣ, ಅತಿನಿದ್ರೆ, ಬೊಜ್ಜು, ಮಧುಮೇಹದಂತಹ ಸಮಸ್ಯೆಗಳು ಉಂಟಾಗುತ್ತವೆ.

ನಮ್ಮ ದೇಹ ಪ್ರಕೃತಿಯನ್ನು ಅರಿತು ಆಹಾರ ಸೇವನೆ ಮಾಡುವುದರಿಂದ ಎಷ್ಟೋ ರೋಗಗಳನ್ನು ತಡೆಗಟ್ಟಬಹುದು. ವಾತ ಪ್ರಕೃತಿಯವರು ಬಿಸಿ, ಸಿಹಿ, ಉಪ್ಪು, ಹುಳಿ ಇರುವಂತಹ ಆಹಾರ ಸೇವಿಸಿದರೆ ಉತ್ತಮ. ಪಿತ್ತ ಪ್ರಕೃತಿಯವರಿಗೆ ತಂಪು, ಸಿಹಿ, ಕಹಿ, ಕಷಾಯ ರಸಗಳ ಸೇವನೆ ಯೋಗ್ಯ. ಹಾಗೆಯೇ ಕಫ ಪ್ರಕೃತಿಯವರಿಗೆ ಬಿಸಿಯಾದ, ಲಘು ಆಹಾರ ಸೇವನೆ ಉತ್ತಮ.

ಆರು ರಸಗಳಿರುವ ಆಹಾರ ಸೇವನೆ ಆರೋಗ್ಯಕರವಾದರೂ ಆಹಾರದ ಪ್ರಮುಖ ಗುಣಗಳು ಪ್ರಕೃತಿಗೆ ಅನುಗುಣವಾಗಿರಬೇಕು. ಹಿತ, ಮಿತವಾದ ಆಹಾರ ಸೇವನೆ, ಋತುವಿಗೆ ಅನುಸಾರವಾಗಿ, ಸಮಯಕ್ಕೆ ಸರಿಯಾಗಿ, ಪ್ರಕೃತಿಗೆ ಅನುಗುಣವಾಗಿ ಆಹಾರವನ್ನು ಸೇವಿಸುವುದರಿಂದ ಬಹಳಷ್ಟು ರೋಗಗಳ ಚಿಕಿತ್ಸೆಯೂ ಸಂಪೂರ್ಣ ಫಲಕಾರಿಯಾಗುತ್ತದೆ.

ಡಾ. ಕಾವ್ಯಶ್ರೀ ಕುಳಮರ್ವ

Related posts

ನಮ್ಮೊಳಗಿನ ಗಾಂಧೀಜಿಯನ್ನು ಬಡಿದೆಬ್ಬಿಸಿ: ಡಾ. ಚೂಂತಾರು

Upayuktha

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಪೇಜಾವರ ಮಠದಿಂದ 5 ಲಕ್ಷ ರೂ ದೇಣಿಗೆ

Upayuktha

ದ.ಕ. ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳಿಂದ ಕೊರೊನಾ ಪಾಸಿಟಿವ್ ಇಲ್ಲ

Upayuktha