ಜೀವನ-ದರ್ಶನ

ಮಂಥನ: ಸತ್ಯವಂತರಿಗಿದು ಕಾಲವಲ್ಲ..!!


*********
ಇದು ಪುರಂದರ ದಾಸರ ಪದ್ಯದ ಒಂದು ಸಾಲು. ಅಂಥ ಮಹಾನುಭಾವರಿಗೇ ಹಾಗನ್ನಿಸಿರಬೇಕಾದರೆ ನಮ್ಮಂಥವರ ಪಾಡೇನು. ಹಾಗೆಂದು ಸತ್ಯವನ್ನು ಬಿಡಬೇಕೆಂದು ದಾಸರು ಹೇಳಲಾರರು. ಸತ್ಯವಂತರಿಗೆ ಬದುಕು ಕಷ್ಟವೆನ್ನುವುದೇ ಇದರ ಭಾವ. ಅದೇ ದೃಷ್ಟಿಕೋನದಿಂದ ನೋಡಿದರೆ ನಮಗೂ ಕೆಲವು ಸತ್ಯದರ್ಶನವಾಗುವುದರಲ್ಲಿ ಸಂದೇಹವಿಲ್ಲ. ಸತ್ಯದಲ್ಲಿರುವವನಿಗೆ ಯಾವಾಗಲೂ ಕಷ್ಟವೇ. ಅಂತೆಯೇ ಅನ್ಯಾಯ ಮಾರ್ಗದಲ್ಲಿರುವವನು ಯಾವಾಗಲೂ ಆನಂದವಾಗಿರುತ್ತಾನೆ. ಇದು ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಕೇಳಿಬರುವ ಉದ್ಗಾರ. ಮೇಲ್ನೋಟಕ್ಕೆ ಸತ್ಯವೂ ಹೌದು. ಆದರೆ ಕಷ್ಟ ಸುಖ ಎನ್ನುವುದು ಒಂದು ಮಾನಸಿಕ ಸ್ಥಿತಿ. ವ್ಯಕ್ತಿಯಿಂದ ವ್ಯಕ್ತಿಗೆ ಇದರ ಅರ್ಥ ವ್ಯಾಪ್ತಿ ಭಿನ್ನವಾಗಿರುತ್ತದೆ. ನಾವಂದುಕೊಂಡಂತೆ ವಾಸ್ತವವಿರುವುದಿಲ್ಲ. ಸ್ಥೂಲವಾಗಿ ನೋಡುವಾಗ ಕೆಲವು ವಿಪರ್ಯಾಸಗಳನ್ನು ನಾವು ಕಾಣಬಹುದು.

ಬಹಳ ಹಿಂದಿನ ಕಾಲದಿಂದಲೂ ಸತ್ಯವಂತರು ಸುಖದಲ್ಲಿರುತ್ತಾರೆ, ದುರ್ಮಾರ್ಗಿಗಳು ಕಷ್ಟದಲ್ಲಿರುತ್ತಾರೆ ಎನ್ನುವುದಕ್ಕೆ ಪ್ರಮಾಣವಿಲ್ಲ. ಸ್ವಭಾವಕ್ಕೂ ಅನುಭವಿಸುವ ವರ್ತಮಾನಕ್ಕು ಯಾವುದೇ ಸಂಬಂಧವಿಲ್ಲ. ಉದಾಹರಣೆಗೆ ಸತ್ಯ ಹರಿಶ್ಚಂದ್ರನಿಗಿಂತ ಸತ್ಯವಂತರು ಯಾರೂ ಇರಲಾರರು. ಹಾಗೆಯೇ ಆತನಷ್ಟು ಕಷ್ಟಗಳನ್ನು ಯಾರೂ ಅನುಭವಿಸಲಾರರು. ಉತ್ತರಾರ್ಧದಲ್ಲಿ ಸುಖ ಸಿಕ್ಕಿರಬಹುದು. ಆದರೆ ಪೂರ್ವಾರ್ಧದ ಕಷ್ಟಗಳು, ಪಟ್ಟ ಬವಣೆಗಳು ಒಂದೇ ಎರಡೇ… ಸತ್ಯವಂತನಾದರೂ ಪಡೆದಂಥ ಕಷ್ಟ ಯಾವ ದುರ್ಮಾರ್ಗಿಗೂ ಬಾರದಷ್ಟು. ಅದೇ ರೀತಿ ರಾವಣ, ಜರಾಸಂಧ, ಕಂಸ ದುರ್ಯೋಧನಾದಿಗಳು ರಾಕ್ಷಸ ಸ್ವಭಾವದವರಾದರೂ ಪ್ರಪಂಚದಲ್ಲಿರುವ ಸುಖವೆಲ್ಲವನ್ನೂ ಅನುಭವಿಸಲಿಲ್ಲವೇ.

ಜೀವಿತ ಕಾಲವೆಲ್ಲವೂ ಸುಖದ ಸುಪ್ಪತ್ತಿಗೆಯಲ್ಲಿದ್ದು ಕೊನೆಗಾಲದ ಅಲ್ಪ ಸಮಯ ಜೀವ ಕಾಯದಿಂದ ಹೊರ ಹೋಗುವ ಕಷ್ಟಕ್ಕೆ ಮಾತ್ರ ಒಳಗಾಗಿದ್ದರು. ಆದರೆ ಹುಟ್ಟಿದವನಿಗೆ ಸಾವು ಅನಿವಾರ್ಯ. ಅದು ಸತ್ಯವಂತನಿಗೂ ದುರ್ಮಾರ್ಗಿಗೂ ಬಿಟ್ಟಿದ್ದಲ್ಲ. ಆದ್ದರಿಂದ ಆ ನೋವು ಕೂಡ ಎಲ್ಲರಿಗೂ ಸಹಜವೇ. ಹಾಗಾದರೆ ಕೆಟ್ಟದ್ದನ್ನು ಮಾಡಿದರೂ ಸುಖವಾದ ಬದುಕನ್ನು ಅನುಭವಿಸಿ ಕೊನೆಗಾಲದ ಅಲ್ಪ ದುಃಖ ಅನುಭವಿಸುವವನೇ ಜಾಣನೇ.. ಅಥವಾ ಜೀವನ ಪೂರ್ತಿ ಸತ್ಯ, ಅಹಿಂಸೆ, ಮಾತು ತಪ್ಪದ ವೃತ, ನ್ಯಾಯ, ಧರ್ಮ ಎಂದು ಕಷ್ಟಗಳನ್ನೇ ಎದುರಿಸಿ, ಯಾವುದೋ ಒಂದು ಕಾಲದಲ್ಲಿ ಏನೋ ಒಂದು ಸಣ್ಣ ಸುಖದ ಅನುಭವವಾದಾಗ ಅದು ತಾನು ಮಾಡಿದ ಸತ್ಕರ್ಮದ ಫಲವೆಂದು ಪರಿಗಣಿಸಿ ಜೀವನವನ್ನು ಕಳಕೊಂಡವನು ಜಾಣನೇ.?

ಶ್ರೀರಾಮಚಂದ್ರ ಮಗನಾಗಿಯೂ, ಗಂಡನಾಗಿಯೂ, ರಾಜನಾಗಿಯೂ, ತಂದೆಯಾಗಿಯೂ ಯಾವುದೇ ಸುಖವನ್ನನುಭವಿಸಿಲ್ಲ. ಆದರೆ ರಾವಣ ಒಂದು ಜನ್ಮದಲ್ಲಿ ಅನುಭವಿಸುವಂಥ ಸಂಪೂರ್ಣ ಸುಖವನ್ನು ತನ್ನದಾಗಿಸಿಕೊಂಡ. ಅತ್ತ ದುರ್ಯೋಧನವಿರಬಹುದು, ಕಂಸನಿರಬಹುದು, ಹಿರಣ್ಯಾಕ್ಷನಿರಬಹುದು, ಇತ್ತ ಅಲೆಗ್ಸಾಂಡರ್ ಇರಬಹುದು, ಘೋರಿ ಘಜ್ನಿ ಇರಬಹುದು ಇಂಗ್ಲೀಷರಿರಬಹುರು ಮಾಡಿದ ಅನಾಚಾರಗಳಿಗೆ ಲೆಕ್ಕವುಂಟೇ? ಜೀವನದಲ್ಲಿ ಮಾಡುವಷ್ಟು ಅನಾಚಾರಗಳನ್ನು ಮಾಡಿ ಸುಖದ ಅಮಲಿನಲ್ಲಿ ತೇಲಿ ಮರಣವೆಂಬ ಅನಿವಾರ್ಯತೆಯಲ್ಲಿ ಲೀನರಾದವರೇ ಇವರೆಲ್ಲ. ಹಾಗಾದರೆ ಮಾಡುವ ಕರ್ಮಕ್ಕೂ ಪಡುವ ಸುಖ ದುಃಖಕ್ಕೂ ಏನಾದರು ಸಂಬಂಧವುಂಟೆಂದು ಹೇಳಲಾದೀತೇ.? ಹಾಗಾದರೆ ನಾವು ಸತ್ಯವಂತರಾಗಿ ಬಾಳಿದರೆ ಕಷ್ಟಗಳು ಬಾರದಿರಬಹುದು ಅಥವಾ ಬರಲೂಬಹುದು.

ಇದಮಿತ್ಥಂ ಎಂದು ಹೇಳುವಂತಿಲ್ಲ. ಆದರೆ ಇವತ್ತಿಗೂ ಧರ್ಮ ಉಳಿದಿದೆಯೆಂದಾದರೆ ಅದು ಸ್ವಭಾವದಿಂದಲೇ ಹೊರತು ಪ್ರಭಾವದಿಂದಲ್ಲ. ಕಷ್ಟಗಳು ಏನೇ ಬರಲಿ, ಪ್ರಭಾವ ಯಾವುದೇ ಇರಲಿ ಸ್ವಭಾವ ಸಾತ್ವಿಕವಾದರೆ ಧರ್ಮ ಬಿಟ್ಟಿರಲಾಗದು. ಅದೇರೀತಿ ಧರ್ಮ ಕೆಟ್ಟು ಹೋಗದು. ಸಾತ್ವಿಕನಾದವನಿಗೆ ದುರ್ಮಾರ್ಗದಲ್ಲಿ ಬದುಕಬೇಕೆಂದರೂ ಬದುಕಲಾಗದು. ಅಂತೆಯೇ ತಾಮಸ ಸ್ವಭಾವದವರಿಗೆ ಸತ್ಯ ಮಾರ್ಗದಲ್ಲಿಯೂ.

ಸ್ವಭಾವಕ್ಕನುಗುಣವಾಗಿ ಜೀವಿಗಳು ಅಂದರೆ ಮಾನವರು ಕ್ರಿಯೆಯಲ್ಲಿ ತೊಡಗಿಕೊಂಡು ಅದರಲ್ಲಿ ಕೊನೆ ಹಂತ ತಲುಪುವುದೇ ಮೋಕ್ಷ. ಆದ್ದರಿಂದ ತಾಮಸ ಸ್ವಭಾವದ ರಾಕ್ಷಸಗುಣವಿರುವ ವ್ಯಕ್ತಿತ್ವ ವಿಕಸನವಾಗುವುದು ಬಹುಷಃ ದುರ್ಮಾರ್ಗದಿಂದಲೇ ಇರಬಹುದು. ಆದ್ದರಿಂದ ಇವರೆಲ್ಲ ಎಷ್ಟು ದುಷ್ಟರಾಗುತ್ತಾರೋ ಅಷ್ಟು ಪರಿಪೂರ್ಣತ್ವದ ಕಡೆಗೆ ಹೋಗುತ್ತಿರಬಹುದು. ಹಾಗೆಯೇ ಸಾತ್ವಿಕ ಸ್ವಭಾವದವರು ಎಷ್ಟು ಕಷ್ಟ ಸಹಿಷ್ಣುಗಳಾಗಿರುತ್ತಾರೋ, ಎಷ್ಟು ಸತ್ಯವಂತರಾಗಿರುತ್ತಾರೋ ಅಷ್ಟು ತಮ್ಮ ಗುರಿಯೆಡೆಗೆ ಹೋಗುತ್ತಿರಬಹುದು. ಅದಕ್ಕೆಂದೇ ದಾಸರು ಅಂದಿರಬೇಕು. ದುಷ್ಟ ಜನರಿಗೆ ಸುಭಿಕ್ಷ ಕಾಲ, ಹರಿ ಸ್ಮರಣೆ ಮಾಡುವವಗೆ ಕ್ಷಯವಾಗುವ ಕಾಲ. ದುರ್ಜನರೇ ಹೆಚ್ಚಾಗಿ ಸಜ್ಜನರು ಕಡಿಮೆಯಾಗಿರುವುದು ಕಲಿಯುಗದ ಮಹಿಮೆ. ಅದಕ್ಕನುಗುಣವಾಗಿ ಇಲ್ಲಿ ದುರ್ವೃತ್ತಿಯೇ ವಿಜ್ರಂಭಿಸಬೇಕಲ್ಲವೇ? ಅಲ್ಲವೇ ಮತ್ತೆ..ಇವತ್ತು ಸಿನೆಮಾ, ಟಿ.ವಿ. , ಮುಂತಾದ ದೃಶ್ಯ ಮಾಧ್ಯಮಗಳಿರಬಹುದು, ಪತ್ರಿಕೆಗಳಿರಬಹುದು ವಿಜ್ರಂಭಿಸುವುದು ಕ್ರೈಂ ನ್ಯೂಸ್ ಗಳೇ ಹೊರತು ಸದ್ವಿಚಾರಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯೇ ತಾನೆ. ರಾಜಕೀಯವಿರಲಿ, ಮಠ ಮಂದಿರಗಳಿರಲಿ, ವಿದ್ಯಾಸಂಸ್ಥೆಗಳಿರಲಿ ವಿಜ್ರಂಭಿಸುವುದು ಅಸತ್ಯವೇ. ಏನನ್ನೋಣ ಕಾಲಮಹಿಮೆ…
ಪುರಂದರ ದಾಸರ ಈ ಪದ್ಯ ಇವತ್ತಿನ ಪರಿಸ್ಥಿತಿಗೆ ಎಷ್ಟೊಂದು ಪ್ರಸ್ತುತವಾಗಿದೆಯಲ್ಲವೇ.??
ನೋಡಿ ಹೀಗಿದೆ ಈ ದೇವರ ನಾಮ…..

ಸತ್ಯವಂತರಿಗಿದು ಕಾಲವಲ್ಲ ||ಪ|| ದುಷ್ಟಜನರಿಗೆ ಸುಭಿಕ್ಷಕಾಲ ||

ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ ಪರಮಪಾಪಿಗಳಿಗೆ ಸುಭಿಕ್ಷಕಾಲ
ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ
ಧರೆಗೆ ಜಾರೆಯಳ ಕೊಂಡಾಡುವ ಕಾಲ ||

ಉಪಕಾರ ಮಾಡಿದರೆ ಅಪಕರಿಸುವ ಕಾಲ ಸಕಲವು ತಿಳಿದವಗೆ ದುರ್ಭಿಕ್ಷಕಾಲ
ಪತಿಸುತರು ಎಂಬವರ ನಂಬಲರಿಯದ ಕಾಲ ಸಟೆಯಲ್ಲವಿದೆ ವಿಪರೀತ ಕಾಲ ||

ಧರ್ಮವ ಮಾಡುವಗೆ ನಿರ್ಮೂಲವಾಗುವ ಕಾಲ
ಕರ್ಮಿಪಾತಕರಿಗೆ ಬಹುಸೌಖ್ಯಕಾಲ ನಿರ್ಮಲಾತ್ಮಕ ಸಿರಿಪುರಂದರವಿಠಲನ ಮರ್ಮದೊಳು ಭಜಿಸಲರಿಯದ ಕಾಲವಯ್ಯ||
***********
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ದಾರಿ-ದೀಪ: ಸದ್ಬಳಕೆಯೇ ಸಂಸ್ಕೃತಿ, ದುರ್ಬಳಕೆಯೇ ವಿಕೃತಿ

Upayuktha

ಬಾಳಿಗೆ ಬೆಳಕು: ಇಲ್ಲಿ ನಿಷ್ಪ್ರಯೋಜಕ ಎನ್ನುವ ವಸ್ತು ಇಲ್ಲವೇ ಇಲ್ಲ

Upayuktha

ಬಾಳಿಗೆ ಬೆಳಕು: ಯತ್ರ ಯೋಗೇಶ್ವರಃ ಕೃಷ್ಣೋ… ಎಲ್ಲಿ ಕೃಷ್ಣನಿರುತ್ತಾನೋ ಅಲ್ಲಿ ವಿಜಯ ಖಚಿತ…

Upayuktha