ಪ್ರಚಲಿತ ವಿದ್ಯಮಾನಗಳು ಲೇಖನಗಳು

ಎಡವಿದಲ್ಲೇ ಮತ್ತೆ ಎಡವಬೇಕೆ…? ಮರಳಿ ಬದುಕು ಕಟ್ಟೋಣ ಬನ್ನಿ…

ಪ್ರಾತಿನಿಧಿಕ ಚಿತ್ರ (ಕೃಪೆ: ಡಿಎನ್‌ಎ ಇಂಡಿಯಾ)

ಏಟಿನ ಮೇಲೆ ಏಟು, ಹೊಡೆತದ ಮೇಲೆ ಹೊಡೆತ, ಎಡವಿದ ಕಾಲ ಬೆರಳಿನ ಗಾಯ ಮಾಯುವ ಮುನ್ನವೇ ಮತ್ತೆ ಅದೇ ಬೆರಳಿಗೆ ಎಡವಿ ಗಾಯ…

ಕೊರೋನಾ, ಪ್ರವಾಹ, ಆರ್ಥಿಕತೆಯ ಕುಸಿತ ಹಿಂಡಿ ಹಿಪ್ಪೆ ಮಾಡುತ್ತಿದೆ. ಮುಖ್ಯವಾಗಿ ರೈತರು ಅತಿಹೆಚ್ಚು ನಷ್ಟಕ್ಕೆ ಒಳಗಾಗುತ್ತಿದ್ದಾರೆ.

ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ಉದ್ಯೋಗಿಗಳು ಹೇಗೋ ಸ್ವಲ್ಪ ಸಮಯದ ನಂತರ ಚೇತರಿಕೆ ಕಾಣಬಹುದು. ಏಕೆಂದರೆ,

ಒಂದು- ಬದುಕು ಅನಿವಾರ್ಯವಾಗಿರುವುದರಿಂದ ಮತ್ತು ಅದು ನಿರ್ಮಿಸುವ ಒತ್ತಡದಿಂದ ಜನರ ಅವಶ್ಯಕತೆ ತಾನೇತಾನಾಗಿ ಬೇಡಿಕೆ ಮತ್ತು ಪೂರೈಕೆ ನಡುವೆ ಹೆಚ್ಚು ಕಡಿಮೆ ನಿಧಾನವಾಗಿ ಹೊಂದಾಣಿಕೆ ಆಗುತ್ತದೆ.

ಎರಡು- ಈಗಿನ ಸರ್ಕಾರಗಳು ಮತ್ತು ಅವುಗಳ ಯೋಜನೆಗಳು ಬಹುತೇಕ ನಗರ ಕೇಂದ್ರಿತ ಹಾಗು ಮೇಲ್ನೋಟದ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತವೆ. ಖಜಾನೆಯ ಹಣ ನಗರಗಳಿಗೆ ಹರಿಯುವಷ್ಟು ಸರಾಗವಾಗಿ ಹಳ್ಳಿಗಳಿಗೆ ಹರಿಯುವುದಿಲ್ಲ. ಜೊತೆಗೆ ರೈತರು ವ್ಯಾಪಾರಿಗಳು ಮತ್ತು ಅಧಿಕಾರಿಗಳಷ್ಟು ಚಾಲಾಕಿಗಳು ಅಲ್ಲ.

ಗಂಜಿ ಕೇಂದ್ರಗಳ ನಿರ್ವಹಣೆ, ವ್ಯವಸ್ಥೆಯ ಭ್ರಷ್ಟತೆ, ಅದಕ್ಷತೆ, ರೈತರ ಮುಗ್ದತೆ ಗಮನಿಸಿದಾಗ ಆಫ್ರಿಕಾದ ಈ ಘಟನೆಗಳು ನೆನಪಾಗಿ ಕಾಡುತ್ತಿದೆ..

“ನೀವು ಇಲ್ಲಿಗೆ ಬಂದಾಗ ನಿಮ್ಮ ಕೈಯಲ್ಲಿ ಬೈಬಲ್ ಇತ್ತು. ನಮ್ಮ ಬಳಿ ಭೂಮಿ ಇತ್ತು. ಈಗ ನಮ್ಮ ಕೈಯಲ್ಲಿ ನಿಮ್ಮ ಬೈಬಲ್ ಇದೆ. ನಿಮ್ಮ ಬಳಿ ನಮ್ಮ ಜಮೀನು ಇದೆ”

ಇದು ಆಫ್ರಿಕಾದ ಪ್ರಖ್ಯಾತ ಚಿಂತಕರೊಬ್ಬರ ಮಾತುಗಳು. ಹೆಸರು ನೆನಪಾಗುತ್ತಿಲ್ಲ. ನಮ್ಮ ಬೆಂಗಳೂರು ಬಳಿಯ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹಾದು ಹೋಗುವಾಗ ನೆನಪಾಯಿತು……..

ಅದನ್ನು ಸಾಂಕೇತಿಕವಾಗಿ ಹೀಗೆ ಹೇಳಬಹುದು…

“ಇಲ್ಲಿನ ರೈತರು, ಆಗ ತಮ್ಮ ಸ್ವಂತದ ಹೊಲ ಗದ್ದೆಗಳಲ್ಲಿ ನಿಂತು ಆಕಾಶದಲ್ಲಿ ಹಾರಾಡುತ್ತಿದ್ದ ವಿಮಾನಗಳನ್ನು ಕುತೂಹಲದಿಂದ ನೋಡುತ್ತಿದ್ದರು. ಈಗ, ವಿಮಾನಗಳು ಅವರದೇ ಜಮೀನಿನಲ್ಲಿ ಅವರ ಪಾದದ ಬಳಿಯೇ ಸರಿದಾಡುತ್ತವೆ. ಆದರೆ ಆ ಜಮೀನು ಆ ವಿಮಾನಗಳು ಅವರದಲ್ಲ. ಅವರೀಗ ಆ ವಿಮಾನ ನಿಲ್ದಾಣದ ಕೆಲಸಗಾರರು….”

ಭೌತಿಕ ಅಭಿವೃದ್ಧಿ ಖಂಡಿತ ಆಗಿದೆ. ಆದರೆ ಮಾನಸಿಕ ಸ್ವಾತಂತ್ರ್ಯ ಹರಣವಾಗಿದೆ.

ಎಲ್ಲಿಂದಲೋ ಬರುವವರು, ಎಲ್ಲಿಗೋ ಹೋಗುವವರು, ಎಲ್ಲವೂ ಐಷಾರಾಮಿ. ಜಮೀನಿಗಾಗಿ ಪಡೆದ ಹಣ, ಮನೆ ಮದುವೆ ವಾಹನಗಳ ಸುನಾಮಿಯಲ್ಲಿ ಕರಗಿತು. ರೈತರು ಮಾತ್ರ ಅಲ್ಲಿ ಈಗ ಬೇನಾಮಿಗಳು.. ಮತ್ತದೇ ಸಾಲ ಮನ್ನಾ, ಚಳವಳಿ, ಪ್ರತಿಭಟನೆ, ಆತ್ಮಹತ್ಯೆ; ದೇಶ ಮಾತ್ರ ಅಭಿವೃದ್ಧಿಯತ್ತ…

ಇಲ್ಲಿ ವಿರೋಧ ಇರುವುದು ಅಭಿವೃದ್ಧಿ ಹೊಂದುತ್ತಿರುವ ಬಗ್ಗೆ ಅಲ್ಲ. ಅದರ ಶೋಷಕ ವಿಧಾನದ ಬಗ್ಗೆ.

ಕೇವಲ ದೇಶ ವಿದೇಶಗಳ ಪ್ರಯಾಣಕ್ಕಾಗಿ ಅಷ್ಟೊಂದು ಅತ್ಯಾಧುನಿಕ ಮೂಲ ಸೌಕರ್ಯ ಒದಗಿಸುವ ನಮ್ಮದೇ ಪ್ರಜಾಪ್ರಭುತ್ವದ ಸರ್ಕಾರಗಳು ಬಡವರಿಗೆ, ರೈತರಿಗೆ ಅವರ ಜ್ಞಾನದ ಅಭಿವೃದ್ಧಿಗೆ, ಅವರ ಕೃಷಿ, ಬೆಳವಣಿಗೆ, ಸಂಗ್ರಹಣೆ, ಮಾರುಕಟ್ಟೆ, ಬೆಂಬಲ ಬೆಲೆಗೆ ಬೇಕಾದ ಮೂಲ ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ಅಥವಾ ವಿಫಲತೆ ಏಕೆ?

ಅಯ್ಯಾ ದೊರೆಗಳೇ, ಇದು ಪ್ರವಾಸೋದ್ಯಮ ಅವಲಂಬಿತ ದೇಶವಲ್ಲ. ಕೃಷಿ ಆಧಾರಿತ ದೇಶ. ಪ್ರವಾಸೋದ್ಯಮ ಒಂದು ಸಣ್ಣ ಅಂಶ ಅಷ್ಟೇ.

ರೈತರ ಜ್ಞಾನದ ಮಟ್ಟ, ಜೀವನಮಟ್ಟ ಸುಧಾರಣೆಯಾಗದೆ ದೇಶದ ಅಭಿವೃದ್ಧಿ ಅಸಾಧ್ಯ.

– ವಿವೇಕಾನಂದ ಎಚ್.ಕೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಾಧಿಸಬೇಕಾದ ಗುರಿಯನ್ನು ಯಾವತ್ತೂ ಮರೆಯದಿರಿ; ಯಶಸ್ಸಿಗೆ ಹಲವು ಮಾರ್ಗಗಳು…

Upayuktha

‘ವಿಶ್ವ ಕ್ಯಾನ್ಸರ್ ದಿನ’ – ಫೆಬ್ರವರಿ 4′: ಕ್ಯಾನ್ಸರ್‌ ಗುಣಪಡಿಸಬಹುದು, ಆದರೂ ತಡೆಗಟ್ಟುವುದೇ ಒಳ್ಳೆಯದು

Upayuktha

ನಟನಾ ಲೋಕದಲ್ಲಿ ಉದಯಿಸುತ್ತಿರುವ ಗ್ರಾಮೀಣ ಹೊಸ ತಾರೆ ಸಾತ್ವಿಕ್ ಭಂಡಾರಿ

Upayuktha

Leave a Comment