ಆರೋಗ್ಯ ಲೇಖನಗಳು

ವಿವೇಕದ ಹಲ್ಲು (WISDOM TOOTH) ತೆಗೆಸಿದರೆ ‘ಬುದ್ಧಿವಂತಿಕೆ’ ಕಡಿಮೆಯಾಗುತ್ತಾ…?

ಬಾಯಿಯ ದವಡೆಯಲ್ಲಿ ಹುಟ್ಟುವ ಮೂರನೇ ದವಡೆ ಹಲ್ಲುಗಳಿಗೆ ಸಾಮಾನ್ಯವಾಗಿ ವಿವೇಕದ ಹಲ್ಲು ಎಂದು ಕರೆಯಲಾಗುತ್ತದೆ. ಈ ಹಲ್ಲು ಸಾಮಾನ್ಯವಾಗಿ 17 ರಿಂದ 21 ವರ್ಷಗಳ ನಡುವೆ ಬಾಯಿಯಲ್ಲಿ ಮೂಡುತ್ತದೆ. ಸಾಮಾನ್ಯವಾಗಿ ಮನುಜರಲ್ಲಿ ಬುದ್ಧಿಶಕ್ತಿ ಅಥವಾ ವಿವೇಕ ಮೂಡುವ ಸಮಯದ ಅವಧಿಯಲ್ಲಿ ಈ ಮೂರನೇ ದವಡೆ ಹಲ್ಲು ಹುಟ್ಟುವುದರಿಂದ ಇದಕ್ಕೆ ವಿವೇಕದ ಹಲ್ಲು ಎಂಬ ಅನ್ವರ್ಥನಾಮ ಬಂದೊದಗಿದೆ. ಆದರೆ ಮನುಷ್ಯರ ಹಲ್ಲಿಗೂ ಬುದ್ಧಿವಂತಿಕೆಗೂ ಯಾವುದೇ ಸಂಬಂಧವಿರುವುದಿಲ್ಲ.

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದ ಆಹಾರ ಪದಾರ್ಥಗಳಿಗೂ, ಜೀವನಶೈಲಿಗೂ ಮತ್ತು ಇಂದಿನ ಜನಾಂಗದ ಜನರ ಜೀವನಶೈಲಿ ಹಾಗೂ ಆಹಾರ ಪದ್ಧತಿಗೂ ಅಜಗಜಾಂತರವಾದ ವ್ಯತ್ಯಾಸವಿದೆ. ಹಿಂದಿನ ಕಾಲದಲ್ಲಿ ಹಿರಿಯರು ಹೆಚ್ಚು ಹೆಚ್ಚು ನಾರುಯುಕ್ತ, ಗೆಡ್ಡೆ ಗೆಣಸು ಮತ್ತು ಕಚ್ಚಾ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಈ ರೀತಿಯ ಆಹಾರ ಪದ್ಧತಿ ಹಲ್ಲು ಮತ್ತು ದವಡೆಗಳ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡುತ್ತಿತ್ತು. ದವಡೆಗಳು ಪರಿಪೂರ್ಣ ಬೆಳವಣಿಗೆ ಹೊಂದಿ, ಮೂರನೇ ದವಡೆ ಹಲ್ಲು ಬರಲು ಸಾಕಷ್ಟು ಜಾಗ ದವಡೆಯೊಳಗೆ ನಿರ್ಮಾಣವಾಗುತ್ತಿತ್ತು. ಆ ಕಾರಣದಿಂದಲೇ ಹಿಂದಿನ ಕಾಲದಲ್ಲಿ ದವಡೆ ಹಲ್ಲು ಮೂಡುವಾಗ ಯಾವುದೇ ತೊಂದರೆ, ನೋವು ಉಂಟಾಗುತ್ತಿರಲಿಲ್ಲ

ಕಾಲ ಕ್ರಮೇಣ ವೈಜ್ಞಾನಿಕತೆ, ಮೂಲಸೌಕರ್ಯಗಳ ಬೆಳವಣಿಗೆ ಹೊಂದಿ, ಜೀವನಶೈಲಿ, ಆಹಾರ ಪದ್ಧತಿಗಳಲ್ಲಿ ಬಹಳಷ್ಟು ಮಾರ್ಪಾಡು ಹೊಂದಿದವು. ಈ ರೀತಿಯ ಬೆಳವಣಿಗೆ ದವಡೆಯ ಬೆಳವಣಿಗೆಗೆ ಪೂರಕವಾಗಿರಲಿಲ್ಲ. ದವಡೆಗಳ ಬೆಳವಣಿಗೆ ಕುಂಠಿತವಾಯಿತು. ಸಿದ್ಧ ಆಹಾರ ಅಥವಾ ಜಿಗುಟಾದ, ನಾರು ರಹಿತ ಹಾಗೂ ಮೆದುವಾದ ಮೊದಲೇ ತಯಾರು ಪಡಿಸಿದ ಆಹಾರಗಳನ್ನು ಸೇವಿಸುವ ಕ್ರಮ ಹೆಚ್ಚಾಗಿ ಬೆಳೆದು ಬಂದಿತು. ಕಚ್ಚಾ ಪದಾರ್ಥಗಳು. ನಾರುಯುಕ್ತ, ಗೆಡ್ಡೆ ಗೆಣಸು, ಹಣ್ಣು ಹಂಪಲುಗಳ ಸೇವನೆ ಕಡಿಮೆಯಾಗುತ್ತಾ ಬಂತು. ದವಡೆಗಳ ಬೆಳವಣಿಗೆ ಕುಂಠಿತವಾಯಿತು. ಆ ಕಾರಣದಿಂದಲೇ ಮೂರನೇ ದವಡೆ ಹಲ್ಲು ಬರಲು ಸ್ಥಳಾವಕಾಶದ ಕೊರತೆ ಬಂತು.

ಯುವಜನರಲ್ಲಿ 17ರಿಂದ 21 ವರ್ಷದ ಅವಧಿಯಲ್ಲಿ ಮೂರನೇ ದವಡೆ ಹಲ್ಲು ಮೂಡುವ ಸಮಯದಲ್ಲಿ ತೊಂದರೆ ಕಾಣಿಸಿಕೊಳ್ಳತೊಡಗಿತು. ಇದನ್ನೇ ವಿಜ್ಞಾನಿಗಳು ಹಾಗೂ ದಂತ ವೈದ್ಯರು “ಆಧುನೀಕತೆಯ ರೋಗ” ಅಥವಾ Disease of Civilization ಎಂದು ಕರೆದರು. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರಿಗೆ 32 ಹಲ್ಲು ಸರಿಯಾಗಿ ಮೂಡಿ ಬರುತ್ತಿತ್ತು.

ಆದರೆ ಈಗಿನ ಜನಾಂಗದ ಮಕ್ಕಳಿಗೆ ಕೇವಲ 28 ಹಲ್ಲು ಬರುತ್ತಿದೆ. ನಾಲ್ಕು ಮೂರನೇ ದವಡೆ ಹಲ್ಲು (ಎರಡು ಮೇಲಿನ ದವಡೆಯಲ್ಲಿ ಮತ್ತು ಎರಡು ಕೆಳಗಿನ ದವಡೆಯಲ್ಲಿ) ಈಗೀಗ ಯುವಜನರಲ್ಲಿ ಮೂಡುವುದೇ ಇಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಹಲ್ಲು ಹುಟ್ಟುವ ಕ್ರಿಯೆಯು ದವಡೆಯ ಗಾತ್ರವನ್ನು ಅನುಸರಿಸುತ್ತದೆ. ಕೆಲವು ಸಲ ದವಡೆಯ ಬೆಳವಣಿಗೆ ಕಡಿಮೆ ಇದ್ದಲ್ಲಿ ಅಥವಾ ಮುಂದಿನ ಹಲ್ಲುಗಳ ಬೆಳವಣಿಗೆ ಹೆಚ್ಚಿದ್ದು ಆ ಸ್ಥಾನದಲ್ಲಿ ವ್ಯತ್ಯಾಸವಾಗುವುದರಿಂದ ಬುದ್ಧಿ ಹಲ್ಲು ಹುಟ್ಟದಿರಬಹುದು. ಹುಟ್ಟಿದರೂ ಅಡ್ಡವಾಗಿ, ಉದ್ದವಾಗಿ ಅಥವಾ ವಕ್ರವಾಗಿ ಬೆಳೆಯಬಹುದು. ಕೆಲವು ವೇಳೆ ಹಲ್ಲು ಮೇಲೆ ಬಾಯಿಯೊಳಗೆ ಮೂಡದೇ ದವಡೆಯ ಮೂಳೆಯೊಳಗೆ ಭದ್ರವಾಗಿ ಸೇರಿಕೊಂಡಿರಬಹುದು. ದವಡೆ ಬೆಳವಣಿಗೆ ಅಸಮರ್ಥವಾಗಿರುವುದೇ ಇದಕ್ಕೆ ಮೂಲ ಕಾರಣ. ಈ ರೀತಿ ಬೆಳವಣಿಗೆ ಹೆಚ್ಚಾಗಿ ಮೇಲ್ದವಡೆಗಿಂತ ಕೆಳಗಿನ ದವಡೆಯಲ್ಲಿ ಕಂಡು ಬರುತ್ತದೆ.

 

ಈ ರೀತಿ ಅಡ್ಡವಾಗಿ ಹುಟ್ಟಿದ ಉಳಿದ ದಂತ ಪಂಕ್ತಿಯ ಮಟ್ಟಕ್ಕೆ ಸಮನಾಗಿ ಇರದಿರುವುದರಿಂದ ಆ ಹಲ್ಲಿನ ಮೇಲಿರುವ ವಸಡು ಮತ್ತು ಹಲ್ಲಿನ ಕಿರೀಟದ ನಡುವೆ ಜಾಗವುಂಟಾಗಿ, ಅಲ್ಲಿ ಆಹಾರ ಪದಾರ್ಥ ಸೇರಿಕೊಂಡು ಕೊಳೆಯಬಹುದು ಅಥವಾ ಬಾಯಿ ವಾಸನೆ ಬರಬಹುದು. ಇಂತಹ ಜಾಗದಲ್ಲಿ ಬ್ಯಾಕ್ಟೀರಿಯಗಳು ಸೇರಿಕೊಂಡು ಅವುಗಳ ಸಂಖ್ಯೆ ವರ್ಧಿಸಿ ಕೀವು ತುಂಬಿಕೊಳ್ಳಬಹುದು. ಈ ಹಂತದಲ್ಲಿ ರೋಗಿಗಳಿಗೆ ವಿಪರೀತ ಹಲ್ಲು ನೋವು, ಬಾಯಿ ತೆರೆಯಲಾಗದಂತ ಸ್ಥಿತಿ ಮತ್ತು ಜ್ವರ ಬರುವ ಸಾಧ್ಯತೆಯೂ ಇದೆ. ಈ ಸ್ಥಿತಿಯನ್ನು ದಂತ ವೈದ್ಯಕೀಯ ಭಾಷೆಯಲ್ಲಿ ‘ಪೆರಿಕೊರನೈಟಿಸ್’ ಎಂದು ಕರೆಯಲಾಗುತ್ತದೆ. ಹೀಗಾದಾಗ ರೋಗಿಗಳಿಗೆ ವಿಪರೀತ ಯಾತನೆ, ತೊಂದರೆ ಮತ್ತು ಆಹಾರ ಜಗಿಯಲಾಗದ ಸ್ಥಿತಿಯನ್ನು ಉಂಟು ಮಾಡುತ್ತದೆ. ಪದೇ ಪದೇ ಈ ರೀತಿ ತೊಂದರೆ ಕಾಡಬಹುದು. ಈ ಹಂತದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಮೂರನೇ ದವಡೆ ಹಲ್ಲನ್ನು ತೆಗೆಸಿಕೊಂಡಲ್ಲಿ ಮುಂದೆ ಬರುವ ಅನಾಹುತಗಳನ್ನು ತಪ್ಪಿಸಬಹುದು. ಈ ಮೂರನೇ ದವಡೆ ಹಲ್ಲಿನಿಂದ ಉಂಟಾಗುವ ರೋಗವನ್ನು ನಿರ್ಲಕ್ಷಿಸಿದರೆ ಕೆಳಗಿನ ದವಡೆಯ ಮೂಳೆಗಳಿಗೆ ಅಥವಾ ಗಂಟಲಿನ ಪದರಗಳಿಗೆ ಕೀವು ಹರಡಿ ಬಾವು ಉಂಟಾಗಬಹುದು ಮತ್ತು ದೇಹದ ಆರೋಗ್ಯವನ್ನು ಹದಗೆಡಿಸಬಹುದು.

 

ಈ ಹಂತದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ ಮಾರಣಾಂತಿಕ ಪರಿಣಾಮ ಉಂಟಾಗಲೂಬಹುದು. ದವಡೆಯ ಒಳಗೆ ಹುದುಗಿಸಿಕೊಂಡ ಹಲ್ಲು, ದವಡೆಯ ಒಳಗಿನ ನರಗಳ ಮೇಲೆ ಒತ್ತಡ ಉಂಟು ಮಾಡಬಹುದು ಮತ್ತು ಕಿವಿನೋವು, ಕುತ್ತಿಗೆ ನೋವು, ತಲೆನೋವು ಮುಂತಾದವುಗಳಿಗೆ ಕಾರಣವಾಗಬಹುದು. ಅದರ ಜೊತೆಗೆ ಎರಡನೇ ದವಡೆ ಹಲ್ಲಿನ ಹಿಂಭಾಗಕ್ಕೆ ಹಾನಿ ಮಾಡಿ, ದಂತ ಕ್ಷಯ ಉಂಟಾಗಬಹುದು. ಕೆಲವೊಮ್ಮೆ ಹುದುಗಿಹೋದ ದವಡೆಹಲ್ಲುಗಳ ಸುತ್ತ ಮಾಂಸದ ಗಡ್ಡೆ ಬೆಳೆದು ದವಡೆ ಕರಗಿ ಹೋಗಿ ದವಡೆ ಮುರಿತ ಉಂಟಾಗಲೂಬಹುದು. ಕೆಲವೊಂದು ಸಂದರ್ಭಗಳಲ್ಲಿ ದವಡೆಯಲ್ಲಿ ಹುದುಗಿಹೋದ ದವಡೆ ಹಲ್ಲುಗಳಿಂದ ಗಡ್ಡೆಗಳು (Benign Tumor) ಅಥವಾ ನಿಧಾನವಾಗಿ ಬೆಳೆಯುವ ಗಡ್ಡೆ ಉಂಟಾದಲ್ಲಿ ಸೂಕ್ತ ಶಸ್ತ್ರಚಿಕಿತ್ಸೆಯ ಮೂಲಕ ಹಲ್ಲು ಮತ್ತು ಗಡ್ಡೆಗಳನ್ನು ತೆಗೆಸಬೇಕಾಗಬಹುದು. ಇದನ್ನು ಸಾಮಾನ್ಯ ಸ್ಥಳೀಯ ಅರಿವಳಿಕೆಯಲ್ಲಿ (Local anesthesia) ಮಾಡಲು ಕಷ್ಟವಾಗಬಹುದು. ಸಾಮಾನ್ಯವಾಗಿ ಅರಿವಳಿಕೆ ಮದ್ದು ನೀಡಿ (General anesthesia) ದವಡೆಹಲ್ಲು ಮತ್ತು ಗಡ್ಡೆಗಳನ್ನು ಹೊರ ತೆಗೆಯಲಾಗುತ್ತದೆ. ಈ ರೀತಿ ಬೆಳೆದ ಹಲ್ಲುಗಳನ್ನು ಸೂಕ್ತ ಕ್ಷ-ಕಿರಣದ ಸಹಾಯದಿಂದ ಹಲ್ಲು ಇರುವ ಜಾಗವನ್ನು ಪತ್ತೆಹಚ್ಚಿ ನುರಿತ ದಂತ ವೈದ್ಯರು ಅಥವಾ ಬಾಯಿ ಮುಖ ಮತ್ತು ದವಡೆ ತಜ್ಞರ (ORAL AND MAXILLOFACIAL SURGEON) ಸಹಾಯದಿಂದ ಶಸ್ತ್ರಚಿಕಿತ್ಸೆಯ ಮುಖಾಂತರ ಹೊರತೆಗೆಯಲಾಗುತ್ತದೆ.

ಒಟ್ಟಿನಲ್ಲಿ ಮೂರನೇ ದವಡೆಹಲ್ಲು ಅಥವಾ ವಿವೇಕದ ಹಲ್ಲನ್ನು ಸೂಕ್ತ ಸಮಯದಲ್ಲಿ ಸೂಕ್ತ ವೈದ್ಯರ ಸಲಹೆ ಮತ್ತು ಮಾರ್ಗದರ್ಶನದ ಮುಖಾಂತರ ತೆಗೆಸಿಕೊಳ್ಳುವುದೇ ವಿವೇಕವಂತರ ಲಕ್ಷಣ ಎಂದರೂ ತಪ್ಪಲ್ಲ. ವಿವೇಕದ ಹಲ್ಲು ತೆಗೆಸಿದಲ್ಲಿ ಬುದ್ಧಿಶಕ್ತಿ ಕಡಿಮೆಯಾಗುತ್ತವೆ ಎಂಬ ಮೂಢನಂಬಿಕೆಗೆ ಬಲಿಯಾಗದೆ ಸಕಾಲದಲ್ಲಿ ವಿವೇಕದಲ್ಲಿ ಹಲ್ಲು ತೆಗೆಸಿಕೊಂಡು ಮುಂದೆ ಅದರಿಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಅದಕ್ಕಾಗಿಯೇ ವೈದ್ಯರು PREVENTION IS BETTER THAN CURE ಅಥವಾ ಚಿಕಿತ್ಸೆಗಿಂತ ಚಿಕಿತ್ಸೆ ತಡೆಗಟ್ಟುವುದು ಪರಿಣಾಮಕಾರಿ ಎಂದು ತಿಳಿ ಹೇಳುತ್ತಾರೆ.

– ಡಾ. ಮುರಲೀ ಮೋಹನ ಚೂಂತಾರು

ಸುರಕ್ಷಾದಂತ ಚಿಕಿತ್ಸಾಲಯ, ಹೊಸಂಗಡಿ

Related posts

ಅಂತರಂಗದ ಚಳವಳಿ: ಪ್ರೀತಿ- ಭಕ್ತಿ-ಕಾಮದ ಮೇಲೊಂದು ಕ್ಷಕಿರಣ

Upayuktha

ಕೃಷಿ ಗಣಿತ: ಉತ್ಪಾದನಾ ವೆಚ್ಚ, ಕನಿಷ್ಠ ಬೆಂಬಲ ಬೆಲೆ, ವೈಜ್ಞಾನಿಕ ಬೆಲೆ ಹೇಗೆ?

Upayuktha

ಅಪ್ರತಿಮ ಕ್ರಾಂತಿಕಾರಿ ಭಗತ್ ಸಿಂಗ್‌ 113ನೇ ಜನ್ಮದಿನ: ದೇಶದ ನಮನ

Upayuktha