ಲೇಖನಗಳು

ವಿಶ್ವವೇ ನಿನ್ನದಾಗಿರುವಾಗ ನಿನಗೊಂದು ಆಚರಣೆಯ ದಿನ ಬೇಕಿತ್ತೇ ?

ವಿಶ್ವ ಮಹಿಳಾ ದಿನಾಚರಣೆ- ಮಾರ್ಚ್ -8

ಹೌದು, ಈ ಆಚರಣೆಯ ಅವಶ್ಯಕತೆ ಇಂದು ಎಂದಿಗಿಂತಲೂ ಹೆಚ್ಚಿದೆ. 2021 ರ ಈ ಸಂಧರ್ಭದಲ್ಲೂ ಮಹಿಳಾ ಸ್ವಾತಂತ್ರ್ಯ- ಮಹಿಳಾ ಸಮಾನತೆ – ಮಹಿಳಾ ಹಕ್ಕು – ಮಹಿಳಾ ಸುರಕ್ಷೆ – ಮಹಿಳಾ ದೌರ್ಜನ್ಯ – ಮಹಿಳಾ ವಿಮೋಚನೆ – ಮಹಿಳಾ ಮೀಸಲಾತಿ – ವರದಕ್ಷಿಣೆ ವಿರೋಧಿ ಚಳವಳಿ – ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಘೋಷಣೆಗಳಲ್ಲಿ – ಹೋರಾಟಗಳಲ್ಲಿ ನಾವು ಬಂಧಿಯಾಗಿದ್ದೇವೆಂದರೆ ನಾಚಿಕೆ ಅವಮಾನ ಆಗಬೇಕಿರುವುದು ನಮಗೋ – ನಾಗರಿಕತೆಗೋ ಅರ್ಥವಾಗುತ್ತಿಲ್ಲ.

ಭಾರತಕ್ಕೆ ಸೀಮಿತವಾಗಿ ಹೇಳುವುದಾದರೆ ಯಾವ ಮಾನವೀಯ ಸಂಬಂಧ ನಮ್ಮ ಜೀವನದಲ್ಲಿ ಅತ್ಯಂತ ಮಹತ್ವ ಪಡೆಯುತ್ತದೆ ಎಂದು ಯಾರನ್ನೇ ಕೇಳಿದರೂ ಬಹುತೇಕರ ಉತ್ತರ ನಿಸ್ಸಂಶಯವಾಗಿ ” ತಾಯಿ ” ಎಂದೇ ಇರುತ್ತದೆ. ಹಾಗಾದರೆ ಇದು ನಿಜವೇ ?

ಇದು ನಿಜವಾಗುವುದು ಕೇವಲ ನಮ್ಮ ಹೆತ್ತಮ್ಮನ ವಿಷಯದಲ್ಲಿ ಮಾತ್ರ. ಇನ್ನೂ ಹೆಚ್ಚೆಂದರೆ ನಮ್ಮ ರಕ್ತ ಹಂಚಿ ಹುಟ್ಟಿದ ಅಕ್ಕ ತಂಗಿಯರ ವಿಷಯದಲ್ಲಿ ಮಾತ್ರ. ಉಳಿದ ಹೆಣ್ಣುಮಕ್ಕಳ ವಿಷಯದಲ್ಲಿ ಭಾವನೆ – ಮೇಲ್ನೋಟದ ಅಭಿಪ್ರಾಯ ಏನೇ ಇದ್ದರೂ ನಡವಳಿಕೆ ಮಾತ್ರ ಘನಘೋರ ಆತ್ಮವಂಚನೆ. ಎಲ್ಲಾ ಪಾವಿತ್ರ್ಯದ ಗುಣಗಳನ್ನು ಆಕೆಯ ಮೇಲೆ ಹೊರಿಸಿ ಅದರಿಂದ ಆಕೆಯನ್ನು ಮಾನಸಿಕವಾಗಿ ಬಂಧಿಸಿ ಆಕೆಯ ಮೇಲೆ ನಿಯಂತ್ರಣ ಹೇರಿ ಆಕೆಯನ್ನು ಶೋಷಿಸುವ ಸುಲಭೋಪಾಯ ಕಂಡುಕೊಂಡಿದ್ದೇವೆ. ಆಕೆಯನ್ನು ವಿಚಿತ್ರ ಸುಖಲೋಲುಪತೆಯ ಪ್ರಾಣಿ ಎಂದೇ ಪರಿಗಣಿಸಲಾಗಿದೆ.

ಅದು ಸಿನಿಮಾವಿರಲಿ ಸಾಹಿತ್ಯವಿರಲಿ ಕಲೆ ಇರಲಿ ರಾಜಕೀಯವಿರಲಿ ಭಕ್ತಿ ಭಾವಗಳೇ ಇರಲಿ ಆಕೆಗೆ ಗೌರವದ ಸ್ಥಾನ ನೀಡಲಾಗುತ್ತದೆ ಅದರೆ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗುತ್ತದೆ.

ಎಲ್ಲಾ ಜೀವರಾಶಿಗಳಿಗೂ ಸ್ವಾತಂತ್ರ್ಯವಿಲ್ಲದ ಜೀವನವೆಂದರೆ ಅದು ಜೀತವಿದ್ದಂತೆ.
ಈ ಕ್ಷಣದಲ್ಲಿಯೂ ಅನಧಿಕೃತವಾಗಿ ನಮ್ಮೆಲ್ಲರ ಮಾತುಗಳಲ್ಲಿ – ಮನಸ್ಸುಗಳಲ್ಲಿ – ಚರ್ಚೆಗಳಲ್ಲಿ – ಹರಟೆಗಳಲ್ಲಿ – ಅಸೂಯೆಗಳಲ್ಲಿ ಅತ್ಯಂತ ವಿಕೃತವಾಗಿ ಚಿತ್ರಿತವಾಗುವುದೇ ಮಹಿಳೆಯರ Character ಬಗ್ಗೆ.

ನಮ್ಮ ಅಕ್ಕ ತಂಗಿ ತಾಯಿ ಹೆಂಡತಿ ಬಿಟ್ಟರೆ ಉಳಿದವರ ಬಗ್ಗೆ ಅನೇಕರಲ್ಲಿ ಮಾತು ಹಗುರವಾಗುತ್ತದೆ. ಮೇಲ್ನೋಟಕ್ಕೆ ಇದು ಹೇಳುವಷ್ಟು ಗಂಭೀರವಾಗಿಲ್ಲ. ಆದರೆ ಆಂತರ್ಯದಲ್ಲಿ ಇದು ವಾಸ್ತವಕ್ಕೆ ಹತ್ತಿರವಾಗಿದೆ ಎಂದೆನಿಸುತ್ತದೆ.

ಹಾಗಾದರೆ ಮಹಿಳೆಯರೆಲ್ಲಾ ಶ್ರೇಷ್ಠರೇ – ಗೌರವಾನ್ವಿತರೇ – ಎಲ್ಲಾ ಒಳ್ಳೆಯ ಗುಣಗಳೇ ತುಂಬಿರುವ ಸಭ್ಯರೇ ?
ಇಲ್ಲ. ನಾವು ಆಕೆಯ ಸ್ವಾತಂತ್ರ್ಯ- ಸಮಾನತೆಯ ಬಗೆಗೆ ಮಾತ್ರ ಹೇಳುತ್ತಿರುವುದು. ಗುಣಾವಗುಣಗಳಲ್ಲಿ ಆಕೆಯೂ ಪುರಷರಷ್ಟೇ ಸ್ವಾರ್ಥಿ – ತ್ಯಾಗಿ – ವಂಚಕಿ – ಪ್ರೀತ್ಯಾಧಾರಳು – ಅಸೂಯಪರಳು – ಭ್ರಷ್ಟಳು – ಶ್ರಮಿಕಳು – ಒಳ್ಳೆಯವಳು ಎಲ್ಲವೂ ಒಳಗೊಂಡ ವ್ಯಕ್ತಿತ್ವ. ಅದು ಮಾನವ ಸಹಜ ಖಾಸಗಿ ವರ್ತನೆ ಮತ್ತು ಸಹಜ ಸಾಮಾಜಿಕ ವ್ಯವಸ್ಥೆಯ ಪ್ರತಿಬಿಂಬ. ಕೆಲವು ಕಡೆ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಮಹಿಳೆಯರು ಅತ್ಯಂತ ಕೆಟ್ಟದಾಗಿ ನಡೆದುಕೊಂಡಿರುವ ಉದಾಹರಣೆಗಳು ಇದ್ದ ಮಾತ್ರಕ್ಕೆ ಅದು ನಾವು ಆಕೆಗೆ ನೀಡುವ ಸ್ವಾತಂತ್ರ್ಯ- ಸಮಾನತೆ ನಿರಾಕರಿಸಲು ನೆಪವಾಗಬಾರದು.

ಈ ಅಂತರರಾಷ್ಟ್ರೀಯ ಮಹಿಳಾ ದಿನದ ಆಚರಣೆಯಂದು ಮಹಿಳೆಯರ ಬಗ್ಗೆ ನಾವು ಹೊಂದಿರುವ ಧೋರಣೆಗಳನ್ನು – ಭಾವನೆಗಳನ್ನು ಆಕೆಯ ಕುರಿತು ಆಡುವ ಕುಹುಕದ ಮಾತುಗಳನ್ನು ಸಾಧ್ಯವಾದಷ್ಟೂ ನಿಯಂತ್ರಿಸಿಕೊಳ್ಳುವ ಸಂಕಲ್ಪವನ್ನು ಮನದಲ್ಲಿಯೇ ಮಾಡಿ ಕೊಳ್ಳೋಣ.
ಇದು ನಾವು ನಮ್ಮ ತಾಯಿ ಅಕ್ಕ ತಂಗಿ ಗೆಳತಿಯರಿಗೆ ಕೊಡಬಹುದಾದ ದೊಡ್ಡ ಕಾಣಿಕೆ .ಇದು ಕೇವಲ ಅಕ್ಷರಗಳಲ್ಲ ನಡವಳಿಕೆಗಳಾಗಲಿ

-ವಿವೇಕಾನಂದ ಎಚ್‌.ಕೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

Related posts

ಇಂದು ವಿಶ್ವ ಜಲ ದಿನ: ಜಲಮೂಲಗಳನ್ನು ಸಂರಕ್ಷಿಸೋಣ

Upayuktha

‘ಡಿಜಿಟಲ್ ಅಮಲು’ ಇಳಿಸೋದು ಹೇಗೆ…?

Upayuktha

ಪಾಂಡಿತ್ಯ, ಕಾವ್ಯಶಕ್ತಿ, ದೈವತ್ವದ ಶ್ರೀ ಜಗನ್ನಾಥದಾಸರು

Upayuktha