ಪರಿಸರ- ಜೀವ ವೈವಿಧ್ಯ ಲೇಖನಗಳು

ವಿಶ್ವ ಆನೆಗಳ ದಿನ- ಆಗಸ್ಟ್ 12: ‘ಬಂಡೂಲ’ ಒಂದಾನೆಯ ಕತೆ

(ಕ್ಲಿಕ್: ಪೂರ್ಣಚಂದ್ರ)

ಆಗಸ್ಟ್‌ 12. ಭೂಮಿಯಲ್ಲೇ ಅತಿ ದೊಡ್ಡ ಜೀವಿ ಎನಿಸಿದ ಆನೆಗಳ ಸಂರಕ್ಷಣೆಗೆ ಪಣತೊಡುವ ದಿನ, ವಿಶ್ವ ಆನೆಗಳ ದಿನ. ಈ ಸಂದರ್ಭದಲ್ಲಿ ಆನೆಗಳ ಬದುಕಿನ ಕುರಿತ ಕಥನ, 400ಕ್ಕೂ ಅಧಿಕ ಪುಟಗಳ ‘ಬಂಡೂಲ’ ಕಾದಂಬರಿಯಿಂದ ಆಯ್ದ ಒಂದು ಭಾಗ ಇಲ್ಲಿದೆ. ವಿಕಿ ಕಾನ್‌ಸ್ಟಂಟೇನ್‌ ಕ್ರುಕ್ ಅವರ ಇಂಗ್ಲಿಷ್‌ ಕಾದಂಬರಿ ‘ದ ಎಲಿಫೆಂಟ್ ಕಂಪನಿ’ ಯನ್ನು ಕನ್ನಡದ ಉದಯೋನ್ಮುಖ ಲೇಖಕಿ ರಾಜ್ಯಶ್ರೀ ಕುಳಮರ್ವ ಇದನ್ನು ಅನುವಾದಿಸಿದ್ದಾರೆ. ಬಿ.ಆರ್‌ ಶಂಕರ್ ಅನುವಾದ ಸಾಹಿತ್ಯ ಮಾಲೆ ಅಡಿಯಲ್ಲಿ ಬೆಂಗಳೂರಿನ ‘ಛಂದಪುಸ್ತಕ’ ಇದನ್ನು ಪ್ರಕಟಿಸಿದೆ.

ಉಪಯುಕ್ತ ನ್ಯೂಸ್ ಓದುಗರಿಗಾಗಿ ‘ಬಂಡೂಲ’ದ ಆಯ್ದ ಭಾಗವನ್ನು ಇಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಮುಂದೆ ಓದಿ.

**********
ನವೆಂಬರ್ ತಿಂಗಳ ಒಂದು ದಿನ. ಆನೆಗಳ ಪಾಠಶಾಲೆಯ ಆ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿತ್ತಷ್ಟೆ. ಐದು ವರ್ಷ ಪ್ರಾಯದ ಎಲ್ಲಾ ಮರಿಗಳೂ ಅವುಗಳ ತಾಯಂದಿರೊಡನೆ ಶಾಲೆಗೆ ಸೇರಿಕೊಳ್ಳಲು ಆಗಮಿಸಿದ್ದವು.

ಆ ತಾಯಂದಿರಲ್ಲಿ ಮೂವತ್ತರ ಆಸುಪಾಸಲ್ಲಿದ್ದ ಮಹೂನಿ (ಬೆಂಕಿಯ ಹರಳು) ಎಂಬ ಹೆಸರಿದ್ದ ಹೆಣ್ಣಾನೆಯೊಂದಿತ್ತು. ಹೆಸರಿಗೆ ತಕ್ಕಂತೆ ಅದರ ಕಣ್ಣುಗಳು ಗಾಢ ಕಂದುಬಣ್ಣದಲ್ಲಿದ್ದು ಅದರ ಮೇಲೆ ಬೆಳಕು ಬಿದ್ದಾಗ ಬೆಂಕಿಯ ಜ್ವಾಲೆಗಳಂತೆ ಫಳಫಳನೆ ಹೊಳೆಯುತ್ತಿದ್ದವು. ಅದು ತನ್ನ ಪುಟ್ಟ ಮರಿಯನ್ನು ಶಾಲೆಗೆ ಸೇರಿಸುವುದಕ್ಕಾಗಿ ಬಹುದೂರದ ಕ್ಯಾಂಪೊಂದರಿಂದ ದಿನಗಟ್ಟಲೆ ಪ್ರಯಾಣ ಮಾಡಿಬಂದಿತ್ತು. ಯಾತ್ರೆಯುದ್ದಕ್ಕೂ ಊಜಿಯು ಅದರ ತಲೆಯ ಮೇಲೆಯೇ ಕುಳಿತಿದ್ದು, ದಟ್ಟ ಕಾಡಿನ ಮರಗಿಡಗಳನ್ನು ಹಾಯ್ದು ಮುಂದುವರಿಯುವಾಗ ತನ್ನ ಕೈಯಲ್ಲಿದ್ದ ಹರಿತವಾದ ಕತ್ತಿಯಿಂದ ಅವನ್ನೆಲ್ಲ ಸವರಿ ದಾರಿ ಮಾಡಿಕೊಡುತ್ತಿದ್ದ. ಹಾಗೆ ಗಿಡಗಂಟಿಗಳನ್ನೆಲ್ಲ ಕಡಿದು ಮಹೂನಿಗೆ ದಾರಿಮಾಡಿಕೊಡುವಾಗ ಅಪ್ಪಿತಪ್ಪಿ ಒಂದು ವಿಚಿತ್ರವಾದ ಬಳ್ಳಿಯನ್ನೂ ಕಡಿದುಬಿಟ್ಟಿದ್ದ. ಅದರ ರಸ ಮೈಮೇಲೆ ಬಿದ್ದಲ್ಲಿ ಚರ್ಮ ಸುಟ್ಟುಹೋದಂತಾಗಿ ಗುಳ್ಳೆಗಳೇಳುತ್ತಿದ್ದವು.

ಅವರು ಪ್ರಯಾಣದ ಕೊನೆಯಲ್ಲಿ ಪಾಠಶಾಲೆಯ ಕ್ಯಾಂಪನ್ನು ತಲುಪಿದಾಗ ವಿಲಿಯಮ್ಸ್ ಎಲ್ಲರನ್ನೂ ಸ್ವಾಗತಿಸಲು ಮತ್ತು ಪುಟಾಣಿ ವಿದ್ಯಾರ್ಥಿಯನ್ನು ಪರೀಕ್ಷಿಸಲೆಂದು ಬಳಿಸಾರಿದ. ಆದರೆ ಹತ್ತಿರಕ್ಕೆ ತೆರಳಿ ಸಾಧುಸ್ವಭಾವದ ತನ್ನ ಹಳೆಯ ಗೆಳತಿ ಮಹೂನಿಯ ಮುಖ ನೋಡಿದಾಗ ಆತ ಹೌಹಾರಿದ. ಅದರ ಮುಖದಲ್ಲಿ ಕೆಲವು ಕಡೆ ಚರ್ಮ ಸುಟ್ಟುಹೋಗಿದ್ದು ಕಣ್ಣುಗಳೆರಡೂ ಯಾವುದೋ ಅಪಾರದರ್ಶಕ ಪರದೆಯಿಂದ ಮುಚ್ಚಿಹೋಗಿದ್ದವು.

ವಿಲಿಯಮ್ಸ್ ಅದರ ಊಜೀಯ ಬಳಿ ಆದದ್ದೇನೆಂದು ವಿಚಾರಿಸಿದಾಗ ಆತ ಆ ವಿಚಿತ್ರ ಬಳ್ಳಿಯ ರಸ ತಗುಲಿರಬಹುದೇನೋ ಎಂದುತ್ತರಿಸಿದ. ಕಳವಳಗೊಂಡು ವಿಲಿಯಮ್ಸ್ ಅದನ್ನು ಕೂಲಂಕಷವಾಗಿ ಪರಿಶೀಲಿಸಿದ. ಬೆಳಕು ಅಥವಾ ಕತ್ತಲೆಯನ್ನು ಗುರುತಿಸುವಷ್ಟು ಮತ್ತು ಸಣ್ಣಪುಟ್ಟ ಚಲನೆಗಳೇನಾದರೂ ತುಸುವಾದರೂ ಕಾಣುವಷ್ಟು ದೃಷ್ಟಿ ಉಳಿದಿದೆಯೇ ಎಂದು ಪರೀಕ್ಷಿಸಿದ. ಬೆರಳನ್ನು ಅದರ ಕಣ್ರೆಪ್ಪೆಗಳ ಅತಿ ಹತ್ತಿರಕ್ಕೆ ತಂದು ಅತ್ತಿತ್ತ ಚಲಿಸಿದಾಗಲೂ ಕಣ್ಣಗುಡ್ಡೆ ಅಲ್ಲಾಡಲಿಲ್ಲ. ದುರದೃಷ್ಟವಶಾತ್ ಮಹೂನಿಯು ಶಾಶ್ವತ ಅಂಧತ್ವಕ್ಕೆ ತುತ್ತಾಗಿಬಿಟ್ಟಿತ್ತು.

ಆನೆಗಳ ಆಸ್ಪತ್ರೆ ಹತ್ತಿರದಲ್ಲೇ ಇದ್ದರೂ ಅಲ್ಲಿಗೆ ಕರೆದುಕೊಂಡು ಹೋಗುವುದರಿಂದೇನೂ ಸಮಸ್ಯೆ ಪರಿಹಾರವಾಗುತ್ತಿರಲಿಲ್ಲ. ಮಹೂನಿಯ ದೃಷ್ಟಿ ಮರಳಿಬರುವ ಸಾಧ್ಯತೆ ಏನೇನೂ ಇರಲಿಲ್ಲ. ಕಡೆಪಕ್ಷ ಅಲ್ಲೇ ಇದ್ದರೆ ಅದು ಸುರಕ್ಷಿತವಾಗಿರಬಹುದೆಂದು ವಿಲಿಯಮ್ಸ್ ಭಾವಿಸಿದ. ಆ ಕ್ಯಾಂಪಿನಲ್ಲಿ ಅದಕ್ಕೆ ತಿನ್ನಲು ಬೇಕಾದಷ್ಟು ಧಾರಾಳವಾಗಿ ಆಹಾರವನ್ನು ದಾಸ್ತಾನು ಮಾಡಿರಿಸಿದ್ದರು. ಪಕ್ಕದಲ್ಲಿ ತಂಪಾಗಿ ಹರಿಯುವ ತೊರೆಯೂ ಇದ್ದು ಮನಸೋ ಇಚ್ಛೆ ಅಭ್ಯಂಜನ ಮಾಡಿಕೊಳ್ಳಬಹುದಿತ್ತು. ಆ ಪಾಪದ ಆನೆಗೆ ಅಷ್ಟಾದರೂ ಪ್ರೀತ್ಯಾದರಗಳನ್ನು ಪಡೆಯುವ ಹಕ್ಕಿತ್ತು.

ಮಹೂನಿ ಮತ್ತದರ ಮರಿಯನ್ನು ಕ್ಯಾಂಪಿನ ಅಂಗಳದಿಂದಾಚೆಗೆ ಕರೆದೊಯ್ಯುವಾಗ ವಿಲಿಯಮ್ಸ್ ಒಂದು ವಿಸ್ಮಯಕಾರಿ ಅಂಶವನ್ನು ಗಮನಿಸಿದ. ಆ ಪುಟಾಣಿ ಮರಿಯು ಮುಂದೆ ಹೋಗಿ ತಾಯಿಯ ಎದುರು ಬೆನ್ನುಹಾಕಿ ನಿಂತುಕೊಂಡಿತು. ಆಗ ಮಹೂನಿಯು ತನ್ನೆದುರು ಮರಿ ನಿಂತಿರುವುದನ್ನು ಗ್ರಹಿಸಿ ಮೆಲ್ಲನೆ ತನ್ನ ಸೊಂಡಿಲನ್ನೆತ್ತಿ ಅದರ ಬೆನ್ನ ಮೇಲಿರಿಸಿತು. ಮರಿಯು ನಿಧಾನಕ್ಕೆ ಮುಂದುವರಿಯಿತು. ಹೀಗೆ ಸಣ್ಣ ಹುಡುಗನೊಬ್ಬ ತನ್ನ ಅಂಧ ತಾಯಿಯನ್ನು ಕೈಹಿಡಿದು ನಡೆಸುವಂತೆ ಆ ಪುಟ್ಟ ಮರಿಯು ತನ್ನ ತಾಯಿಯನ್ನು ಕ್ಯಾಂಪಿನ ತುಂಬಾ ಓಡಾಡಿಸುತ್ತಿತ್ತು.

ವಿಲಿಯಮ್ಸ್ ಗಮನಿಸಿದಂತೆ ಸಾಧಾರಣವಾಗಿ ಆ ವಯಸ್ಸಿನ ಮರಿಯಾನೆಗಳು ಮಹಾ ತಂಟೆಕೋರರಾಗಿರುತ್ತಿದ್ದವು. ತಾವೇ ಆಹಾರ ಹುಡುಕಿ ತಿನ್ನುವಷ್ಟು ಬಲಿತಿರುತ್ತಿದ್ದರಿಂದ ತಮ್ಮಷ್ಟಕ್ಕೆ ಸ್ವೇಚ್ಛೆಯಿಂದ ಅಲೆಯುವುದನ್ನು ಇಷ್ಟಪಡುತ್ತಿದ್ದವು. ಅವುಗಳು ಹತ್ತಿರದಲ್ಲಿರುವಾಗ ಯಾವಾಗಲೂ ಬೇಕಾದಷ್ಟು ಪುಂಡತನವನ್ನೆಸಗಿ ತಂತಮ್ಮ ತಾಯಂದಿರಿಗೆ ತಲೆನೋವು ತಂದಿಡುತ್ತಿದ್ದವು. ಆದರೆ ಆ ಪುಟ್ಟ ವಯಸ್ಸಿಗೆ ಮಹೂನಿಯ ಮರಿಯಲ್ಲಿದ್ದ ಜವಾಬ್ದಾರಿ ಮತ್ತು ವಯಸ್ಸಿಗೆ ಮೀರಿದ ಪ್ರೌಢಿಮೆಯನ್ನು ಗಮನಿಸಿದ ವಿಲಿಯಮ್ಸ್ ಮಾನವ ಸಹಜವಾದ ಹೊಂದಾಣಿಕೆ ಆನೆಗಳಲ್ಲೂ ಇರುವುದನ್ನು ಅರಿತು ಸೋಜಿಗವಾಯಿತೆಂದು ಬರೆದಿದ್ದ. ಮಾನವ ಕುಟುಂಬಗಳಲ್ಲಿ ಸಾಮಾನ್ಯವಾಗಿ ಹೆತ್ತವರೋ ಮಕ್ಕಳೋ ಯಾರಾದರೊಬ್ಬರು ಅಪಘಾತಕ್ಕೀಡಾದರೆ ಇನ್ನೊಬ್ಬರು ಜವಾಬ್ದಾರಿ ತೆಗೆದುಕೊಳ್ಳಲು ಮುಂದಾಗಿ ಎಲ್ಲವನ್ನೂ ನಿಭಾಯಿಸುವುದು ಹೇಗೆ ಸಾಧ್ಯವೋ ಹಾಗೆಯೇ ಆನೆಗಳ ಪ್ರಪಂಚದಲ್ಲೂ ನಡೆಯುವುದನ್ನು ನೋಡಿ ಆತ ನಿಜಕ್ಕೂ ಅಚ್ಚರಿಗೊಂಡಿದ್ದ.

ತಾಯಿಯನ್ನು ಗಮನಿಸಿಕೊಳ್ಳುವ ಕಾರ್ಯದಿಂದಾಗಿ ಮರಿಯಾನೆಗೆ ಶಾಲೆಯಲ್ಲಿ ಕಲಿಯಬೇಕಾಗಿದ್ದ ಶಿಸ್ತು ಸಂಯಮ, ನಿಯಮಪಾಲನೆ ತಾನಾಗಿಯೇ ರೂಢಿಯಾಗುತ್ತಿತ್ತು. ಒಂದೊಮ್ಮೆ ಈ ಹೊರೆ ಹೆಚ್ಚಾಗಿ ಮರಿಯೆಲ್ಲಾದರೂ ಕಾಡಿಗೆ ಪಲಾಯನ ಮಾಡಿದರೆ ಎಂದು ವಿಲಿಯಮ್ಸ್ ಕಳವಳಗೊಂಡಿದ್ದ. ಯಾಕೆಂದರೆ ಆ ಮರಿಯಿಲ್ಲದಿದ್ದರೆ ಮಹೂನಿಯು ಜೀವಿತಕಾಲವಿಡೀ ಬೇರೆ ಮನುಷ್ಯರ ಮೇಲೆ ಅವಲಂಬಿತವಾಗಿ ಬದುಕಬೇಕಾಗಿದ್ದಿತ್ತು.

ಈಗಿದ್ದ ಕ್ಯಾಂಪಿನಿಂದ ಮಹೂನಿ ಮತ್ತದರ ಮಗನನ್ನು ಆನೆಗಳು ನಿವೃತ್ತ ಜೀವನ ಕಳೆಯುವ ವೃದ್ಧಾಶ್ರಮದ ಕ್ಯಾಂಪೊಂದಕ್ಕೆ ಕಳುಹಿಸಿಕೊಡಲಾಯಿತು. ಬ್ರಿಟಿಷರು ಆಡುಮಾತಿನಲ್ಲಿ ಅದನ್ನು ‘ಹಳೆ ಭರಣಿಗಳ ಮನೆ’ (Old Cracks’ Home) ಎಂದು ಕರೆಯುತ್ತಿದ್ದರು. ಅಂದರೆ ಮುರಿದು ಹೋದ, ಹಾಳಾಗಿ ಹೋದ ವಸ್ತುಗಳಿರುವ ತಾಣವೆಂದರ್ಥ. ಅದೊಂದು ನದೀ ತಟದಲ್ಲಿದ್ದು, ಅಲ್ಲಿ ಭೂಮಿ ಸಮತಟ್ಟಾಗಿತ್ತು. ಆದ್ದರಿಂದ ನದೀತೀರದ ಮರಳ ರಾಶಿಯಿಂದ ತೇಗದ ದಿಮ್ಮಿಗಳನ್ನು ಮುಂದಕ್ಕೆ ದೂಡುವ ಕೆಲಸ ಸುಲಭಸಾಧ್ಯವಾಗಿತ್ತು. ಹೆಚ್ಚು ಹೊರೆಯಾಗದ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಶಕ್ತವಾಗಿರುವ ಹಿರಿಯ ಆನೆಗಳನ್ನು ಮತ್ತು ಸಣ್ಣಮಟ್ಟಿನ ಅಂಗವಿಕಲತೆಯಿರುವ ಆನೆಗಳನ್ನು ಈ ಕ್ಯಾಂಪಿಗೆ ಕಳುಹಿಸಿಕೊಡಲಾಗುತ್ತಿತ್ತು. ಬಂಡೂಲ ಕೂಡಾ ಒಂದೊಮ್ಮೆ ಇದೇ ಕ್ಯಾಂಪಿನಲ್ಲಿ ಕೆಲಕಾಲ ವಾಸವಾಗಿತ್ತು. ಪೊಟೊಕೆಯು ಅದು ಬೆಳವಣಿಗೆ ಹೊಂದುತ್ತಿದ್ದ ಸಮಯದಲ್ಲಿ ಶ್ರಮದ ಕೆಲಸಗಳಿಂದ ದೂರವಿಡುವುದಕ್ಕಾಗಿ ಅದನ್ನು ಇಲ್ಲಿಗೆ ತಂದಿಟ್ಟಿದ್ದ. ಸಂಪೂರ್ಣ ನಿವೃತ್ತಿ ಹೊಂದಿದ ಆನೆಗಳು ಮಾತ್ರ ಯಾವುದೇ ಕೆಲಸ ಮಾಡಬೇಕಿರಲಿಲ್ಲ. ಅವುಗಳ ಸರಪಳಿಗಳನ್ನೆಲ್ಲ ಬಿಚ್ಚಿ ಸ್ವತಂತ್ರವಾಗಿ ಓಡಾಡಲು ಬಿಡಲಾಗುತ್ತಿತ್ತು. ಮಾತ್ರವಲ್ಲ ಅವಕ್ಕೆ ಉಪ್ಪು ಮತ್ತು ಹುಣಸೇ ಮುದ್ದೆಗಳನ್ನು ತುಸು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಲಾಗುತ್ತಿತ್ತು; ತಿಂದ ಆಹಾರ ಸರಿಯಾಗಿ ಜೀರ್ಣವಾಗಲೆಂದು. ಬಹುಬೇಗನೆ ಮಹೂನಿ ಮತ್ತದರ ಮರಿಯು ಕ್ಯಾಂಪಿನಲ್ಲಿ ಚೆನ್ನಾಗಿ ಹೊಂದಿಕೊಂಡುಬಿಟ್ಟವು. ಅಲ್ಲಿನ ಜನರು ಮರಿಗೆ ಹೊಸದಾಗಿ ಹೆಸರಿಟ್ಟು ‘ಬೋ ಲಾನ್ ಪ್ಯಾ’ ಅಂದರೆ ‘ಮಾರ್ಗದರ್ಶಿ’ ಎಂದು ಕರೆಯತೊಡಗಿದರು.

‘ಹಳೆ ಭರಣಿಗಳ ಮನೆ’ಯಲ್ಲಿ ಮರಿ ಮತ್ತು ಮಹೂನಿ ಪ್ರತಿನಿತ್ಯದ ಕೆಲಸಗಳನ್ನು ನಿಯಮಿತವಾಗಿ ಮಾಡುವ ರೂಢಿ ಮಾಡಿಕೊಂಡಿದ್ದವು. ಮಹೂನಿ ತನ್ನ ಮಾಮೂಲಿನ ಉದ್ಯೋಗವನ್ನು ಊಜಿûೀಯ ನಿರ್ದೇಶನದಂತೆ ಚಲಿಸಿಕೊಂಡು ಸರಿಯಾಗಿಯೇ ಮಾಡುತ್ತಿತ್ತು. ಮಧ್ಯಾಹ್ನ ಕೆಲಸಗಳು ಮುಗಿದ ನಂತರ, ಮಾರ್ಗದರ್ಶಿ ಅಲ್ಲಿಗೆ ಬಂದು ತಾಯಿಯನ್ನು ಕರೆದೊಯ್ಯುತ್ತಿತ್ತು. ಅನಂತರ ನದಿನೀರಿನಲ್ಲಿ ಸ್ನಾನ ಮುಗಿಸಿಕೊಂಡು ತಾಯಿಗೆ ಅವಶ್ಯವಿರುವಷ್ಟು ಅಂದರೆ ಸುಮಾರು ಆರುನೂರು ಪೌಂಡುಗಳಷ್ಟು ಹಸಿರು ಆಹಾರವನ್ನು ಅರಸಿಕೊಂಡು ಅಲೆದಾಡುತ್ತಿತ್ತು. ಮೊತ್ತಮೊದಲಾಗಿ ತಾಯಿಯನ್ನು ಕೇಯಿಂಗ್ ಜೊಂಡುಹುಲ್ಲುಗಳ ಪ್ರದೇಶಕ್ಕೆ ಕರೆದೊಯ್ದು ಇಬ್ಬರೂ ಆರಾಮಾಗಿ ಒಂದು ಗಂಟೆ ಹೊತ್ತು ಅಲ್ಲೇ ಕಳೆಯುತ್ತಿದ್ದವು. ಚೆನ್ನಾಗಿ ಆ ಹುಲ್ಲನ್ನೆಲ್ಲ ಮೆದ್ದ ನಂತರ ಮಾರ್ಗದರ್ಶಿಯ ಬೆನ್ನಮೇಲೆ ಸೊಂಡಿಲನ್ನಿರಿಸಿಕೊಂಡು ಚಲಿಸಿ ಇಬ್ಬರೂ ಬಿದಿರುಮೆಳೆಗೆ ತೆರಳುತ್ತಿದ್ದರು. ಎಳೆಬಿದಿರನ್ನೆಲ್ಲಾ ಮತ್ತೆ ಹಲವು ಗಂಟೆಗಳ ಕಾಲ ತಿಂದು ಅನಂತರ ಬಳ್ಳಿಗಳು ಮತ್ತು ಕಬ್ಬು ರಾಶಿರಾಶಿಯಾಗಿರುವ ಸ್ಥಳಕ್ಕೆ ತೆರಳುತ್ತಿದ್ದವು. ಅಲ್ಲೂ ಒಂದೆರಡು ಗಂಟೆಗಳ ಕಾಲ ತಿಂದು ತೇಗಿ ಆರಾಮಾಗಿ ದೈತ್ಯ ಮರಗಳಡಿ ತಂಪು ನೆರಳಲ್ಲಿ ವಿಶ್ರಮಿಸಿ ಆಮೇಲೆ ನೀರು ಕುಡಿಯಲೆಂದು ಹತ್ತಿರದ ನದಿಗೆ ತೆರಳುತ್ತಿದ್ದವು.

ದೃಢ ಚಿತ್ತದ ಮರಿ ಮಾರ್ಗದರ್ಶಿ ಮಾತ್ರ ದಿನವಿಡೀ ಬಿಡುವಾಗಿದ್ದರೂ ಕಾಡಾನೆಗಳ ಮಂದೆಯೊಡನೆ ಸ್ವತಂತ್ರವಾಗಿ ಪಲಾಯನ ಮಾಡಬೇಕೆಂಬ ತುಡಿತವು ಸ್ವಲ್ಪವೂ ಇರಲಿಲ್ಲ. ಮಹೂನಿ ಮತ್ತು ಮಾರ್ಗದರ್ಶಿ ಯಾವಾಗಲೂ ಪೂರ್ಣ ಮನಸ್ಸಿನಿಂದ ಜತೆಗೇ ಇರುತ್ತಿದ್ದರು. ಅವುಗಳ ಚಲನವಲನಗಳು ಮಾತ್ರವಲ್ಲ ಆಲೋಚನೆಗಳೂ ಕೂಡಾ ಒಂದೇ ರೀತಿಯಾಗಿ ಇರುತ್ತಿದ್ದವು. ಇನ್‍ಫ್ರಾಸೋನಿಕ್ ತರಂಗಾಂತರಗಳ ಮಾತುಕತೆಗಳೆಲ್ಲ ಅವಕ್ಕೆ ಏನೋ ವಿಶೇಷವಾದ ಒಳಾರ್ಥವನ್ನು ನೀಡುತ್ತಿದ್ದವು. ಸುತ್ತಲಿನ ಜನರಿಗೆ ಸ್ವಲ್ಪವೂ ಕೇಳಿಸದಂತೆ ಅವು ಪರಸ್ಪರ ಮಾತಾಡುತ್ತಿದ್ದವು.

ಸಂಪೂರ್ಣ ಅಂಧತ್ವ ಆವರಿಸಿದ್ದರೂ ಮಹೂನಿಯ ವರ್ಚಸ್ಸು ಕುಂದಿರಲಿಲ್ಲ. ಅದು ಮೊದಲಿನಷ್ಟೇ ಚೆನ್ನಾಗಿ ಹಗಲಲ್ಲಿ ಕೆಲಸವನ್ನು ಮಾಡುತ್ತಿತ್ತು, ರಾತ್ರಿಯಲ್ಲಿ ಆಹಾರವನ್ನರಸುತ್ತ ಅಲೆಯುತ್ತಿತ್ತು. ನೋವು ನಲಿವುಗಳೆಲ್ಲವನ್ನೂ ಅನುಭವಿಸುತ್ತಿತ್ತು. ತನ್ನ ಮಗನೊಂದಿಗಿನ ಅದರ ಅನುಬಂಧವು ಯಾವಾಗಲೂ ಎದ್ದು ಕಾಣುವಂತಿತ್ತು. ಆ ಮರಿಯಂತೂ ತನ್ನ ತಾಯಿಯನ್ನು ಕಣ್ರೆಪ್ಪೆಯಂತೆ ಜೋಪಾನವಾಗಿ ನೋಡಿಕೊಳ್ಳುತ್ತಿತ್ತು. ಮಹೂನಿಯ ಅತ್ಯುತ್ತಮ ಪರಿಸ್ಥಿತಿಯು ಮಾರ್ಗದರ್ಶಿಯ ಶ್ರ್ರಮಕ್ಕೆ ಸಾಕ್ಷಿಯಾಗಿತ್ತು. ಅದರ ಪ್ರೀತಿ ಮತ್ತು ಆರೈಕೆಯಲ್ಲಿ ಮಹೂನಿಯು ಮೂರು ವರ್ಷಗಳ ಕಾಲ ದೈಹಿಕವಾಗಿ ಸಮರ್ಥವಾಗಿ ಆರೋಗ್ಯವಾಗಿತ್ತು. ವಿಲಿಯಮ್ಸ್ ಮಹೂನಿಯ ಭೇಟಿಗೆಂದೇ (ತನಗೆ ಬಿಡುವಾದಾಗಲೆಲ್ಲ) ಆ ಕ್ಯಾಂಪಿಗೆ ತೆರಳುತ್ತಿದ್ದ. ಅಲ್ಲಿಂದ ವಾಪಸ್ಸಾಗುವಾಗ ಆತನ ಜೀವನೋತ್ಸಾಹವು ಇಮ್ಮಡಿಯಾಗುತ್ತಿತ್ತು. ಮಹೂನಿಯು ಸಂತೋಷದಿಂದಿರುವುದನ್ನು ನೋಡುವುದೇ ಆತನಿಗೆ ಅತ್ಯಂತ ಖುಷಿಯನ್ನು, ನೆಮ್ಮದಿಯನ್ನು ತಂದುಕೊಡುತ್ತಿತ್ತು.

ಹೀಗೇ ಕಾಲ ಕಳೆದು ಒಂದು ಮಳೆಗಾಲದ ಋತುವಿನ ಆರಂಭದ ಸಮಯದಲ್ಲಿ ವಿಲಿಯಮ್ಸ್ ಬಿಡುವು ಮಾಡಿಕೊಂಡು ಮಹೂನಿಯ ಕ್ಯಾಂಪಿಗೆ ಭೇಟಿ ನೀಡಿದ. ಆತ ಅಲ್ಲಿಗೆ ತಲುಪಿದಾಗ, ಜೋರಾಗಿ ಮಳೆ ಸುರಿಯುತ್ತಿದ್ದು ನದಿಯ ನೀರು ರಭಸದಿಂದ ಉಕ್ಕೇರುತ್ತಿತ್ತು. ಮಹೂನಿಯು ಇನ್ನಿತರ ಆನೆಗಳ ಒಡಗೂಡಿ, ದಿಮ್ಮಿಗಳನ್ನು ನೀರಿಗೆ ದೂಡುವುದರಲ್ಲಿ ಮಗ್ನವಾಗಿತ್ತು. ಮಾರ್ಗದರ್ಶಿಯೂ ತಾಯಿಯಿರುವ ಸ್ಥಳದಿಂದ ಹೆಚ್ಚು ದೂರ ಹೋಗದೆ ಅನತಿ ದೂರದಲ್ಲಿ ತಿರುಗಾಡುತ್ತಿದ್ದುದನ್ನು ವಿಲಿಯಮ್ಸ್ ಗಮನಿಸಿದ.

ಯಾಕೋ ಮಹೂನಿ ತುಸು ಬೇಸರದಲ್ಲಿದ್ದಂತೆ ಕಂಡಿತು. ಮಾತ್ರವಲ್ಲ ನದಿಯಲ್ಲಿ ಪ್ರವಾಹವೂ ಹೆಚ್ಚಾಗುತ್ತಲಿದ್ದು, ವಿಲಿಯಮ್ಸ್ ಅದನ್ನು ಗಮನಿಸಿ ಅದರ ಊಜಿûೀಗೆ ಮಹೂನಿಯನ್ನು ಇತ್ತ ಕರೆತರುವಂತೆ ಕೂಗಿ ಹೇಳಿದ. ಊಜಿ ಮೆಲ್ಲನೆ ಅದನ್ನು ನಡೆಸಿಕೊಂಡು ಇತ್ತ ಬರುತ್ತಿರುವಾಗ ಮಹೂನಿಯು ತನ್ನ ಮಗನನ್ನು ಕರೆಯಿತು. ವಿಲಿಯಮ್ಸ್ ನದೀ ತೀರದುದ್ದಕ್ಕೂ ಕಣ್ಣು ಹಾಯಿಸಿದ. ತಕ್ಷಣ ಸುಮಾರು ನಾನ್ನೂರು ಗಜ ದೂರದಲ್ಲಿ ಜೊಂಡು ಹುಲ್ಲುಗಳ ನಡುವಿಂದ ಗುಂಡಗಿನ ಪುಟಾಣಿ ತಲೆಯೊಂದು ಹೊರಬೀಳುವುದು ಕಾಣಿಸಿತು. ಅದರ ಕಿವಿಗಳು ನಿಮಿರಿ ನಿಂತಿದ್ದು ಪುಟ್ಟದಂತಗಳು ಹಲ್ಲೊಕ್ಕುವ ಕಡ್ಡಿಗಳಂತೆ ಹೊರಮುಖವಾಗಿ ಬಂದಿದ್ದು ಗೋಚರಿಸಿತು. ತಾಯಿಯ ಕರೆಗೆ ಉತ್ತರಿಸುವಂತೆ ಕೂಗು ಹಾಕಿದ್ದು ‘ಒಂದು ನಿಮಿಷ ತಾಳು ಅಮ್ಮಾ, ನಾನು ಬರುತ್ತಾ ಇದ್ದೇನೆ’ ಎನ್ನುವಂತಿತ್ತು. ಆದರೆ ಮಾರ್ಗದರ್ಶಿಯು ಹುಲ್ಲಿನ ಪೊದೆಗಳಿಂದ ಹೊರಬಿದ್ದ ಸ್ಥಳದಲ್ಲಿ, ನದೀ ದಡದಲ್ಲಿ ಸುಮಾರು ಹನ್ನೆರಡು ಅಡಿ ಆಳವಿತ್ತು.

ಮಳೆಗಾಲದಲ್ಲಿ ನದಿಗಳಲ್ಲಿ ಪ್ರವಾಹವು ಉಕ್ಕೇರುವುದು ಅತಿ ಸಾಧಾರಣ ವಿಷಯ. ಆದರೆ ಮುಂದೆ ನಡೆದದ್ದು ಮಾತ್ರ ದಾರುಣವಾದ ಹೃದಯವಿದ್ರಾವಕ ಘಟನೆ. ಮಾರ್ಗದರ್ಶಿಯು ತಾಯಿಯನ್ನು ಸೇರಿಕೊಳ್ಳಲು ಓಡಿ ಬರುತ್ತಿತ್ತು. ದಾರಿಯಲ್ಲಿ ಇಳಿಜಾರಿನ ಭಾಗದಲ್ಲಿ ಇಳಿಯಲೆತ್ನಿಸುವಾಗ ಕಾಲಡಿಯ ಕೆಸರು ಮಣ್ಣು ಕುಸಿದೇ ಬಿಟ್ಟಿತು. ನೀರಿನ ಪ್ರವಾಹವು ಅದರ ಕಾಲಡಿಯ ಮಣ್ಣನ್ನು ಬಾಚಿ ಸೆಳೆದುಕೊಂಡು ಹೋಯಿತು. ಮರಿಯು ಕೈಕಾಲು ಬಡಿದಾಗ ಇನ್ನೂ ರಭಸದಿಂದ ನೆಲದ ಮೇಲೆಲ್ಲ ಕೆಸರು ರಾಡಿಯಾಗಿ ಅದು ಪ್ರವಾಹದೊಳಕ್ಕೆ ಕೊಚ್ಚಿಹೋಗಿಬಿಟ್ಟಿತು.

ವಿಲಿಯಮ್ಸ್ ತಕ್ಷಣ ಬೊಬ್ಬಿರಿದು ದೋಣಿಯೊಂದನ್ನು ತರಲು ಆದೇಶಿಸಿದ. ಆದರೆ ದೋಣಿಯನ್ನು ನೀರಿಗಿಳಿಸುವ ಮೊದಲೇ ಅದರಿಂದೇನೂ ಪ್ರಯೋಜನವಾಗದು ಎಂಬುದು ಸ್ಪಷ್ಟವಾಯಿತು. ಪುಟ್ಟ ಮಾರ್ಗದರ್ಶಿ ಅದಾಗಲೇ ಮುಳುಗಿಹೋಗಿತ್ತು. ಮಹೂನಿಯು ಏಕಾಂಗಿಯಾಗಿ ನಿಂತಿದ್ದ ಭಂಗಿಯನ್ನು ನೋಡಿ ವಿಲಿಯಮ್ಸ್‍ನ ಹೃದಯ ವೇದನೆಯಿಂದ ನರಳಿತು. ಪ್ರವಾಹದ ಅಲೆಗಳು ಅದರ ಪಕ್ಕೆಗೆ ಬಂದು ಬಡಿಯುತ್ತಲೇ ಇದ್ದವು. ಮಳೆಯೂ ಜೋರಾಗಿ ಸುರಿಯುತ್ತಲಿತ್ತು. ಮಹೂನಿಯ ಕಿವಿಗಳು ಇವೆಲ್ಲಾ ಸದ್ದುಗದ್ದಲದ ನಡುವೆ ತನ್ನ ಮರಿಯ ದನಿಗಾಗಿ ಕಾತರದಿಂದ ಅರಸುತ್ತಿದ್ದವು. ಊಜಿಯು ಮೆಲ್ಲನೆ ಮರಿಯು ಮುಳುಗಿದ ಜಾಗಕ್ಕೆ ಅದನ್ನು ನಡೆಸಿಕೊಂಡು ಹೋದ. ಮಹೂನಿ ಮತ್ತೆ ಮತ್ತೆ ಕೂಗು ಹಾಕಿ ತನ್ನ ಕಂದಮ್ಮನನ್ನು ಕರೆಯಿತು. ಮಾರ್ಗದರ್ಶಿ ಮುಳುಗಿದಾಗ ಮನುಷ್ಯರಿಗೆ ಕೇಳಿಸುವಂತೆ ಯಾವುದೇ ಸದ್ದು ಮಾಡದಿದ್ದರೂ, ಮಹೂನಿಗೆ ಅದು ಅನುಭವವಾಗಿರಬಹುದೆಂದು ವಿಲಿಯಮ್ಸ್‍ಗೆ ಖಚಿತವಿತ್ತು. ‘ನನಗನ್ನಿಸಿದಂತೆ ಅದರ ಕೂಗಿನಲ್ಲಿ ಯಾವುದೇ ಆಶಾಮನೋಭಾವವಾಗಲಿ ಭರವಸೆಯಾಗಲೀ ಇರಲಿಲ್ಲ’ ವಿಲಿಯಮ್ಸ್ ಬರೆದಿದ್ದ. ಮಹೂನಿ ಮಗು ಹೂತುಹೋದ ಜಾಗದಲ್ಲೇ ತನ್ನ ವೇದನೆಯನ್ನು ವ್ಯಕ್ತಪಡಿಸಲಾಗದೆ ಆಘಾತಕ್ಕೊಳಗಾಗಿ ನಿಂತುಕೊಂಡಿತ್ತು.

ಊಜಿಯು ಮರಳುವಂತೆ ನಿರ್ದೇಶಿಸಿದಾಗ ಮನಸ್ಸಿಲ್ಲದೇ ಅನಿವಾರ್ಯವಾಗಿ ಅಲ್ಲಿಂದ ಕದಲಿತು. ಅಲೆಗಳನ್ನು ದೂಡುತ್ತಾ ಜೋರಾಗಿ ಅಳುತ್ತಾ ದಡಕ್ಕೆ ಮರಳಿತು. ಅದರ ಅಳು ಇನ್ನೂ ನಿಂತಿರಲಿಲ್ಲ. ಎಲ್ಲರೂ ಭಾರವಾದ ಹೃದಯ ಹೊತ್ತು ಕ್ಯಾಂಪಿಗೆ ಹಿಂತಿರುಗಿದರು. ಆ ರಾತ್ರಿಯಿಡೀ ಮಹೂನಿ ಮೌನವಾಗಿತ್ತು. ದುಃಖತಪ್ತರಾಗಿದ್ದ ವಿಲಿಯಮ್ಸ್ ಮತ್ತು ಇತರ ಊಜಿûೀಗಳು ಅದರ ಇಷ್ಟದ ತಿಂಡಿಗಳನ್ನು ಬಾಯಿಗಿತ್ತು ಸಮಾಧಾನಿಸಿದರು. ಕೊಟ್ಟಿದ್ದರಲ್ಲಿ ಸ್ವಲ್ಪವೇ ಸ್ವಲ್ಪ ತಿಂದು ಅನಂತರ ಸುಮ್ಮನೆ ಕುಳಿತುಬಿಟ್ಟಿತು. ಮಗನನ್ನು ಕಳಕೊಂಡು ಅವರ ಹೃದಯವು ನುಚ್ಚುನೂರಾಗಿಬಿಟ್ಟಿತ್ತು.

ಮೂರು ವಾರಗಳ ನಂತರ ಮಹೂನಿಯ ದೇಹಾಂತ್ಯವಾಯಿತು. ಇಂತಹ ಘಟನೆಗಳಲ್ಲಿ ಮರಣೋತ್ತರ ಶವಪರೀಕ್ಷೆ ಮಾಡಬೇಕಾದದ್ದು ಕಾಯಿದೆಯಾದರೂ ವಿಲಿಯಮ್ಸ್ ಹಾಗೆ ಮಾಡಲಿಲ್ಲ. ‘ಯಾಕೆಂದರೆ ಮರಣದ ಕಾರಣವು ನನ್ನ ಕಣ್ಣೆದುರಲ್ಲೇ ಕುಣಿಯುತ್ತಿತ್ತು’ ಎಂದು ವಿಲಿಯಮ್ಸ್ ದುಃಖತಪ್ತನಾಗಿ ಬರೆದಿದ್ದ.

‘ಬಂಡೂಲ’ ಕಾದಂಬರಿಯ ಪ್ರತಿಗಳಿಗಾಗಿ ಆಸಕ್ತರು- ಛಂದಪುಸ್ತಕ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-560076 (ಸೆಲ್: 98444 22782) ಸಂಪರ್ಕಿಸಬಹುದು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಇದು ನಮ್ಮ ಮಕ್ಕಳಿಗಾಗಿ…

Upayuktha

ಚಟದಿಂದ ಚಟ್ಟ ಹತ್ತಿಸುವ ಇ-ಸಿಗರೇಟ್ ನಿಷೇಧ ಸ್ವಾಗತಾರ್ಹ

Upayuktha

ಕಪ್ಪು ಅರಿಶಿಣ: ಬಹುಬೇಡಿಕೆಯ ಉಪಯುಕ್ತ ಮೂಲಿಕೆ

Upayuktha