ಆರೋಗ್ಯ ಲೇಖನಗಳು

ಕ್ಷಯರೋಗ ನಿರ್ಮೂಲನೆಗೆ ಸಮಯ ಮೀರುತ್ತಿದೆ, ಇರಲಿ ಜಾಗೃತಿ

“The Clock is Ticking”
ವಿಶ್ವ ಆರೋಗ್ಯ ಸಂಸ್ಥೆಯು ಈ ವರ್ಷದ ವಿಶ್ವ ಕ್ಷಯ ದಿನಾಚರಣೆಯ ಅಂಗವಾಗಿ ನೀಡಿದ ಘೋಷವಾಕ್ಯ “The Clock is Ticking”. ಇದರ ಅರ್ಥ “ಕ್ಷಯರೋಗ ನಿರ್ಮೂಲನೆಗೆ ಸಮಯ ಮೀರುತ್ತಿದೆ” 2025ರ ಒಳಗೆ ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಭಾರತವು ನಿಗದಿಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಗುರಿ ಹಾಗೂ ಕಾರ್ಯತಂತ್ರದ ಪ್ರಕಾರ ಟಿಬಿ ಸಾವುಗಳನ್ನು 95%ರಷ್ಟು ಕಡಿಮೆ ಮಾಡುವುದು ಮತ್ತು ಹೊಸ ಪ್ರಕರಣಗಳನ್ನು 2015 ಮತ್ತು 2035ರ ನಡುವೆ 90% ಕಡಿಮೆ ಮಾಡುವುದಾಗಿದೆ. ಈ ಗುರಿಗಳನ್ನು ಸಾಧಿಸಲು ಸಮಯ ಮೀರುತ್ತಿದೆ ಎಂದು ಈ ಸಾಲಿನ ಘೋಷವಾಕ್ಯ ಎಚ್ಚರಿಸುತ್ತಿದೆ.

ಸಾವಿರಾರು ವರ್ಷಗಳ ನಂತರವೂ, ಅಷ್ಟೇಕೆ ಸಾಂಕ್ರಾಮಿಕ ರೋಗಕಾರಕವನ್ನು ಅನ್ವೇಷಿಸಿ 140 ವರ್ಷಗಳ ನಂತರವೂ ಟಿಬಿ ವಿಶ್ವದ ಮಾರಕ ಸಾಂಕ್ರಾಮಿಕ ಕೊಲೆಗಾರರಲ್ಲಿ ಒಬ್ಬನಾಗಿ ಉಳಿದಿದೆ ಎಂದರೆ ಇದು ಸಮುದಾಯದ ಹಾಗೂ ಸರಕಾರಗಳ ಅನಾದರತೆಗೆ ಹಿಡಿದ ಕೈಗನ್ನಡಿಯೇ ಸರಿ.

ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ರೋಗವಾದ ಟಿಬಿಯು ದೇಶದ ಆರೋಗ್ಯ, ಸಾಮಾಜಿಕ ಹಾಗೂ ಮುಖ್ಯವಾಗಿ ಆರ್ಥಿಕ ಪ್ರಗತಿಯ ಮೇಲೆ ದೀರ್ಘಾವಧಿ ವ್ಯತಿರಿಕ್ತ ಪರಿಣಾಮ ಬೀರಬಲ್ಲ ಸಾಂಕ್ರಾಮಿಕ ರೋಗದ ಬಗೆಗಿನ ಅಲಕ್ಷ ಹಾಗೂ ಅನಾದರತೆ ಸಲ್ಲವೇ ಸಲ್ಲ.

ವಿಶ್ವ ಟಿಬಿ ದಿನ:
ಪ್ರತಿ ವರ್ಷ ಕ್ಷಯ ರೋಗದ ವಿನಾಶಕಾರಿ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಜಾಗತಿಕ ಟಿಬಿ ಸಾಂಕ್ರಾಮಿಕ ರೋಗವನ್ನು ಕೊ£ಗೊಳಿಸುವ ಪ್ರಯತ್ನಗಳನ್ನು ಹೆಚ್ಚಿಸಲು ಮಾರ್ಚ್ 24ರಂದು ವಿಶ್ವ ಕ್ಷಯ(ಟಿಬಿ) ದಿನವನ್ನು ಆಚರಿಸಲಾಗುತ್ತದೆ.

ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗದ ಮೂಲ ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾ ಎಂದು 1882ರ ಮಾರ್ಚ್ 24ರಂದು ಡಾ.ರಾಬರ್ಟ್ ಕಾಕ್ ಎಂಬವರು ಪತ್ತೆ ಹಚ್ಚಿದ್ದರು. ಬರ್ಲಿನ್‍ನಲ್ಲಿ ಕಾಕ್ ಘೋಷಣೆಯ ಸಮಯದಲ್ಲಿ ಯುರೋಪ್ ಮತ್ತು ಅಮೇರಿಕಾದಲ್ಲಿ ಟಿಬಿಯು ಉಲ್ಬಣಗೊಳ್ಳುತ್ತಿತ್ತು ಹಾಗೂ ಪ್ರತಿ ಏಳು ಜನರಲ್ಲಿ ಒಬ್ಬರು ಇದಕ್ಕೆ ಬಲಿಯಾಗುತ್ತಿದ್ದರು. ಕಾಕ್ ಅವರ ಸಂಶೋಧನೆಯು ರೋಗ ಪತ್ತೆ ಹಚ್ಚಲು ಮತ್ತು ಗುಣಪಡಿಸಲು ದಾರಿ ತೆರೆಯಿತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಜಾಗೃತಿಗಾಗಿ ವಿಶ್ವ ಟಿ.ಬಿ.ದಿನವನ್ನು ಆಚರಿಸಲಾಗುತ್ತಿದೆ.

ಆತಂಕದ ಮೂಲ:
ಜಗತ್ತಿನಾಧ್ಯಂತ 10 ಮಿಲಿಯನ್ ಪ್ರಕರಣಗಳಲ್ಲಿ ಇದು ಸುಮಾರು 2.6 ಮಿಲಿಯನ್ ಪ್ರಕರಣಗಳು ಭಾರತದಲ್ಲಿಯೇ ಇದೆ. ಅರ್ಥಾತ್ ವಿಶ್ವದ ಕ್ಷಯರೋಗ ಪ್ರಕರಣಗಳಲ್ಲಿ ಭಾರತವು ನಾಲ್ಕನೇ ಒಂದು ಭಾಗಕ್ಕಿಂತ ಹೆಚ್ಚಿನದಾಗಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತಿ ಒಂದು ಕೋಟಿ ಜನಸಂಖ್ಯೆಯಲ್ಲಿ 27 ಲಕ್ಷ ಜನರಿಗೆ ಕ್ಷಯ ರೋಗ ಇದೆ. ಆದರೆ ಭಾರತದಲ್ಲಂತೂ ಪ್ರತಿ ಒಂದು ಕೋಟಿ ಜನರಿಗೆ 40 ಲಕ್ಷ ಜನರಿಗೆ ಕ್ಷಯ ರೋಗ ಲಕ್ಷಣಗಳಿವೆ. ಈ ಸೋಂಕು ತಗುಲಿದ ವ್ಯಕ್ತಿಯು ಒಂದು ವರ್ಷದಲ್ಲಿ ಹತ್ತು ಜನರಿಗೆ ಸೋಂಕು ತಗುಲಿಸಬಹುದು.

ಕ್ಷಯವು ವಂಶಾನುಗತ ರೋಗವಲ್ಲ, ಇದು ಸೋಂಕುರೋಗ. ಯಾವುದೇ ವ್ಯಕ್ತಿಗೂ ಕ್ಷಯ ಬರಬಹುದು. ಕಫದಲ್ಲಿ ಬ್ಯಾಕ್ಟಿರಿಯಾ ಇರುವ ರೋಗಿಗಳು ಕೆಮ್ಮಿದಾಗ, ಉಗುಳಿದಾಗ ಅಥವಾ ಸೀನಿದಾಗ ತುಂತುರು ಹನಿಗಳ ಮೂಲಕ ಈ ಕ್ರಿಮಿಗಳು ಗಾಳಿಯನ್ನು ಸೇರಿಕೊಂಡು ಉಸಿರಿನ ಮೂಲಕ ಇತರರಿಗೆ ಹರಡುತ್ತದೆ.

2019ರಲ್ಲಿ 2.64 ದಶಲಕ್ಷ ಭಾರತೀಯರನ್ನು ಬಾಧಿಸಿರುವ ಮತ್ತು ಸುಮಾರು 4.5 ಲಕ್ಷ ಜನರ ಆಹುತಿಯನ್ನು ತೆಗೆದುಕೊಂಡಿರುವ ಟಿ.ಬಿ.ಗೆ ಬಂದಾಗ ಮೂಲಭೂತ ಸರಳ ಕೆಮ್ಮು ಶಿಷ್ಟಾಚಾರಗಳನ್ನು ಅನುಸರಿಸುವುದು ಅಗತ್ಯವೆಂದು ಜನರು ಪರಿಗಣಿಸದಿರುವುದು ಆತಂಕಕ್ಕೆ ಕಾರಣವಾಗಿದೆ.

ಯಾವ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆ ಇದೆಯೋ ಅವರಿಗೆ ಈ ರೋಗ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಕ್ಷಯ ರೋಗವು ಸಾಮಾನ್ಯವಾಗಿ ಶ್ವಾಸಕೋಶಕ್ಕೆ ಬರುತ್ತದೆ. ದೇಹದ ಇತರ ಭಾಗಗಳಾದ ಮೆದುಳು, ಮೂಳೆ, ಗರ್ಭನಾಳ ಮತ್ತು ಚರ್ಮಕ್ಕೂ ಈ ರೋಗ ತಗುಲಬಹುದು. ದೇಶದಲ್ಲಿ ಲಕ್ಷಾಂತರ ಜನರ ಹಾಗೂ ಕುಟುಂಬಗಳ ಆರೋಗ್ಯ ಹಾಗೂ ಆರ್ಥಿಕ ಪ್ರಗತಿಗೆ ಮಾರಕವಾದ ಮತ್ತು ಸಾವಿರಾರು ವರ್ಷಗಳಿಂದ ಹಿಡಿತ ಸಾಧಿಸಿರುವ ರೋಗವನ್ನು ಕಡೆಗಣನೆ ಮಾಡುವಂತಿಲ್ಲ.

ಆರ್ಥಿಕ ಬರೆ:
ಅಧ್ಯಯನಗಳ ಪ್ರಕಾರ ಕ್ಷಯರೋಗದಿಂದಾಗಿ ವ್ಯಕ್ತಿಯೊಬ್ಬ ಕನಿಷ್ಠ 4 ತಿಂಗಳ ಶ್ರಮದ ನಷ್ಟ ಅನುಭವಿಸುತ್ತಾನೆ ಹಾಗೂ ಇದರಿಂದಾಗಿ ವಾರ್ಷಿಕವಾಗಿ ಕುಟುಂಬದ ಆದಾಯವು ಶೇಕಡಾ 20-30ರಷ್ಟು ಕಡಿಮೆಯಾಗುತ್ತದೆ. ರೋಗದಿಂದಾಗುವ ಅಕಾಲಿಕ ಮರಣ ಸುಮಾರು 15 ವರ್ಷಗಳ ಆದಾಯ ನಷ್ಟ ಉಂಟುಮಾಡುತ್ತದೆ ಎಂದು ತಿಳಿದಾಗ ಕ್ಷಯರೋಗದ ದೀರ್ಘ ದುಷ್ಪರಿಣಾಮಗಳನ್ನು ಅರ್ಥೈಸಬಹುದಾಗಿದೆ.

ಜೀವಹಾನಿ, ಆದಾಯನಷ್ಟ ಹಾಗೂ ಕೆಲಸದ ನಷ್ಟದ ದೃಷ್ಠಿಯಿಂದ ಭಾರತದಲ್ಲಿ ಟಿಬಿಯ ಆರ್ಥಿಕ ನಷ್ಟ ಗಣನೀಯವಾಗಿದೆ. ನಮ್ಮ ದೇಶದಲ್ಲಿ ಒಂದು ಅಂದಾಜಿನ ಪ್ರಕಾರ ಈ ರೋಗದಿಂದಾಗಿ 170 ಮಿಲಿಯ ಮಾನವ ದಿನಗಳ ಶ್ರಮವು ವಾರ್ಷಿಕವಾಗಿ ನಷ್ಟವಾಗುತ್ತದೆ ಮತ್ತು ಟಿಬಿಯಿಂದಾಗಿ ವಾರ್ಷಿಕ ವೆಚ್ಚವು ಕಡಿಮೆ ಎಂದರೆ 3 ಬಿಲಿಯನ್ ಅಮೇರಿಕನ್ ಡಾಲರ್‍ಗಳು ಎಂದು ಅಂದಾಜಿಸಲಾಗಿದೆ.

ವೆಚ್ಚದ ಮೇಲಿನ ಪ್ರತಿಫಲ:
ಸೋಂಕಿಗೆ ಒಳಗಾದ ವ್ಯಕ್ತಿ ಚಿಕಿತ್ಸೆಯನ್ನು ತೆಗೆದುಕೊಳ್ಳುವುದರಲ್ಲಿ ಸ್ವಲ್ಪ ಎಡವಟ್ಟುಮಾಡಿಕೊಂಡರೂ ಇತರರಿಗೆ ಸುಲಭವಾಗಿ ರೋಗವನ್ನು ಹರಡಬಲ್ಲನು. ಆದುದರಿಂದ ಸಾಂಕ್ರಾಮಿಕ ರೋಗಗಳಲ್ಲಿ ಅಗ್ರಗಣ್ಯವಾದ ಕ್ಷಯರೋಗ ನಿವಾರಣೆಗೆ ಸಮಾಜವು ವೆಚ್ಚಮಾಡಲು ಉತ್ಸುಕವಾಗಿರಬೇಕು ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಫಿಲಿಪ್ ಮಶ್ಗ್ರೋವ್ ಪ್ರತಿಪಾದಿಸಿದ್ದಾರೆ. ಟಿಬಿ ನಿವಾರಣೆಗೆ ವೆಚ್ಚ ಮಾಡುವ ಪ್ರತಿ ಒಂದು ಡಾಲರ್ 33 ಡಾಲರಿನಷ್ಟು ಪ್ರಯೋಜನವನ್ನು ತರಬಲ್ಲುದು.

ಎಚ್ಚರ ಇರಲಿ-ಭಯ ಬೇಡ:
ಮಕ್ಕಳಿಗೆ ಹಾಕಲಾಗುವ ಬಿ.ಸಿ.ಜಿ ಕ್ಷಯರೋಗ ತಡೆಗಟ್ಟಲು ಸಹಕಾರಿ. ಚಿಕಿತ್ಸೆಗೆ ಸ್ಪಂದಿಸದ ಕೆಮ್ಮು ಅಥವಾ ಜ್ವರದ ಬಗ್ಗೆ ಅನಾದರತೆ ಬೇಡ. ಸಂಶಯ ಬಂದಾಗ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡರಾಯಿತು. ಎಲ್ಲೆಂದರಲ್ಲಿ ಉಗಿಯುವುದು ರೋಗ ಹರಡುವಿಕೆಗೆ ಕಾರಣ. ಕೊಟ್ಟ ಔಷಧಿಯನ್ನು ಕ್ರಮಬದ್ಧವಾಗಿ ಸೇವಿಸಿದರೆ ಟಿ.ಬಿ ರೋಗ ಮಾಯವಾಗುತ್ತದೆ. ಮದ್ಯ ಸಿಗರೇಟುಗಳಿಂದ ದೂರವಿದ್ದು ಪೂರಕ ಪೌಷ್ಟಿಕ ಆಹಾರ ಸೇವಿಸಿದರೆ ಉತ್ತಮ.

ಟಿಬಿ ಎಲ್ಲ ಸೋಂಕುಗಳಂತಲ್ಲ. ರೋಗಪೀಡಿತ ಜಾಗದಲ್ಲಿ ಬೇರೆ ಬೇರೆ ಹಂತದ ಬೆಳವಣಿಗೆಯಲ್ಲಿರುವ ಬ್ಯಾಕ್ಟೀರಿಯಾಗಳಿರುತ್ತವೆ. ಇವೆಲ್ಲವನ್ನೂ ಹದ್ದುಬಸ್ತಿಗೆ ತರಲು ವಿವಿಧ ಔಷಧಿಗಳನ್ನು ಒಟ್ಟಿಗೇ ಕೊಡಬೇಕಾಗುತ್ತದೆ ಮತ್ತು ಚಿಕಿತ್ಸೆಗೆ ದೀರ್ಘಕಾಲ ಹಿಡಿಯುತ್ತದೆ. ಔಷಧಿಗಳನ್ನು ತಪ್ಪದೆ ದಿನಾಲೂ ಸೇವಿಸಬೇಕು. ಕನಿಷ್ಠ 6 ತಿಂಗಳು ಟಿ.ಬಿ. ಮಾತ್ರೆಗಳನ್ನು ಚಾಚೂ ತಪ್ಪದೆ ತೆಗೆದುಕೊಳ್ಳಬೇಕು. ರೋಗಿ 6 ತಿಂಗಳ ಚಿಕಿತ್ಸೆ ಸರಿಯಾಗಿ ತೆಗೆದುಕೊಳ್ಳದಿದ್ದರೆ ಕ್ಷಯರೋಗ ಮತ್ತೆ ಮರುಕಳಿಸಬಹುದು ಹಾಗೂ ಔಷಧ ನಿರೋಧಕ ಟಿ.ಬಿ ಯಾಗಿ ಪರಿವರ್ತನೆಗೊಳ್ಳಬಹುದು.

ಭಾರತ ಸರಕಾರದ ಡಾಟ್ಸ್ ಕಾರ್ಯಕ್ರಮದ ಮೂಲಕ ಉತ್ತಮ ಔಷಧÀಗಳನ್ನು ಸರಕಾರದಿಂದ ಉಚಿತವಾಗಿ ಪೂರೈಸಲಾಗುತ್ತಿದೆ. ಆದರೆ ಈ ಬಗ್ಗೆ ಜಾಗೃತಿ ಇಲ್ಲದ್ದರಿಂದ ಜನ ಚಿಕಿತ್ಸೆ ಪಡೆಯದೆ ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ.

ಸೋಂಕು ತಡೆಯೋಣ ಮತ್ತು ಕೊನೆಗೊಳಿಸೋಣ:
ರೋಗದ ಬಗೆಗಿನ ಅಜ್ಞಾನ, ಔಷಧಿ ಸೇವನೆಯಲ್ಲಿ ಅಶಿಸ್ತು, ಕಂಡಲ್ಲಿ ಉಗುಳುವ ಅಭ್ಯಾಸ ಮುಂತಾದ ಕಾರಣಗಳಿಂದಾಗಿ ರೋಗನಿಯಂತ್ರಣ ಕಷ್ಟಸಾಧ್ಯವಾಗಿದೆ. ಕೆಮ್ಮುವಾಗ ಕೈಗಳಿಂದ ಅಥವಾ ಕರವಸ್ತ್ರಗಳಿಂದ ಮುಚ್ಚಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಕೆಮ್ಮುವುದು, ಕಫ ಹೊರಗೆ ಹಾಕುವುದು ಸಲ್ಲವೇ ಸಲ್ಲ. ಕೈಗಳನ್ನು ಸ್ವಚ್ಚವಾಗಿ ತೊಳೆದು ಊಟ ತಿಂಡಿ ಮಾಡುವುದನ್ನು ರೂಡಿಸಿಕೊಳ್ಳಬೇಕು.

ವೈಯುಕ್ತಿಕ ಉದಾಸೀನತೆ, ಅನಾದರಣೆಯು ಸಾಮಾಜಿಕ ಸ್ವಾಸ್ಥ್ಯ ಹಾಗೂ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತವನ್ನೇ ನೀಡುತ್ತದೆ. 2025ಕ್ಕೆ ಭಾರತವನ್ನು ಕ್ಷಯರೋಗ ಮುಕ್ತ ಮಾಡುವ ಸರಕಾರದ ಗುರಿ, ನಮ್ಮೆಲ್ಲರ ಆದ್ಯ ಗುರಿಯಾಗಿರಲಿ. ನಾವೆಲ್ಲಾ ಜಾಗೃತರಾಗಿ ಕ್ಷಯರೋಗ ಸೋಂಕು ತಡೆಗಟ್ಟುವಲ್ಲಿ ಕೈಜೋಡಿಸೋಣ. ಸ್ವಚ್ಚ, ಸ್ವಸ್ಥ ಭಾರತ ನಮ್ಮದಾಗಲಿ.

-ಡಾ.ಎ.ಜಯ ಕುಮಾರ ಶೆಟ್ಟಿ
ಅರ್ಥಶಾಸ್ತ್ರ ಪ್ರಾಧ್ಯಾಪಕ,
ಶ್ರೀ.ಧ.ಮಂ. ಕಾಲೇಜು, ಉಜಿರೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ನಿಮ್ಮ ರಕ್ತದೊತ್ತಡ ಅರಿಯಿರಿ: ಇಂದು (ಮೇ 17) ವಿಶ್ವ ಅಧಿಕ ರಕ್ತದೊತ್ತಡ ದಿನ

Upayuktha

ಸಾಧಿಸಬೇಕಾದ ಗುರಿಯನ್ನು ಯಾವತ್ತೂ ಮರೆಯದಿರಿ; ಯಶಸ್ಸಿಗೆ ಹಲವು ಮಾರ್ಗಗಳು…

Upayuktha

ಏನಿದು ವೆರುಕಸ್ ಕಾರ್ಸಿನೋಮಾ? ಇದು ಅಪಾಯಕಾರಿಯೇ?

Upayuktha