ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಾರ್ಚ್ 3ರಂದು ಕಾಲೇಜು ಪ್ರಾಂಗಣದಲ್ಲಿ ಆಯೋಜಿಸಲಾದ ವಾರ್ಷಿಕೋತ್ಸವ ಸಾಂಸ್ಕೃತಿಕ ಸಂಭ್ರಮದಲ್ಲಿ ‘ಅಗ್ರಪೂಜೆ’ ಎಂಬ ಯಕ್ಷ ರೂಪಕವು ಮನೋಜ್ಞವಾಗಿ ಪ್ರಸ್ತುತಿಗೊಂಡಿತು. ಈ ಪ್ರಸಂಗದಲ್ಲಿ ಕಾಲೇಜಿನ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರವಾದ ‘ಯಕ್ಷಕಲಾ ಕೇಂದ್ರ’ ಇದರ ಯಕ್ಷಾಧ್ಯಯನ ತಂಡದ ಉಪನ್ಯಾಸಕ ಮತ್ತು ವಿದ್ಯಾರ್ಥಿ ಕಲಾವಿದರು ಪಾತ್ರ ನಿರ್ವಹಣೆಯನ್ನು ಅರ್ಥಪೂರ್ಣವಾಗಿ ಪ್ರದರ್ಶಿಸಿದರು.
ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಕಲಾ ಪ್ರಕಾರಗಳ ಮಹತ್ವವನ್ನು ವಿದ್ಯಾರ್ಥಿ ಸಮೂಹಕ್ಕೆ ಬಿತ್ತರಿಸುವ ಮತ್ತು ಪೋಷಿಸುವ ಉದ್ದೇಶದಿಂದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮತ್ತು ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಇವರ ಆಶಯದಂತೆ ಕಾಲೇಜಿನ ಯಕ್ಷಕಲಾ ಕೇಂದ್ರವು ಕಾರ್ಯ ನಿರ್ವಹಿಸುತ್ತಿದೆ. ಈ ಅಧ್ಯಯನ ಕೇಂದ್ರವು ವಿದ್ಯಾರ್ಥಿಗಳಿಗೆ ನಾನಾ ಕಲೆಗಳ ಕುರಿತು ಆಸಕ್ತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಹಾಗೆಯೇ ಈ ಕೇಂದ್ರವು ಕಾಲೇಜಿನಲ್ಲಿ ಮಾತ್ರವಲ್ಲದೆ ಇತರ ಸಂಸ್ಥೆಗಳಲ್ಲಿಯೂ ಕಲೆಯನ್ನು ಪೋಷಿಸುವ ಮಹತ್ವಾಕಾಂಕ್ಷೆಯಿಂದ ವಿನೂತನ ಕಾರ್ಯಕ್ರಮಗಳನ್ನು ಸಂಯೋಜಿಸುವಲ್ಲಿ ಯಶಸ್ವಿಯಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಯಕ್ಷ ಪಠ್ಯವನ್ನು ‘ಯಕ್ಷ ಪಠ್ಯ ಗಾಯನ’ ಶೀರ್ಷಿಕೆಯಡಿಯಲ್ಲಿ ಗಾಯನ-ವಾಚನದ ಮೂಲಕ ಪ್ರಚುರಗೊಳಿಸಿದೆ.
ಯಕ್ಷಾಧ್ಯಯನದ ವಿದ್ಯಾರ್ಥಿ ಕಲಾವಿದರಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನಗೊಂಡಿರುವ ಯಕ್ಷವಾಹಿನಿ ಸರಣಿ ಕಾರ್ಯಕ್ರಮವು ಯಕ್ಷಕಲೆಯನ್ನು ಬೆಳೆಸುವ ಕುರಿತು ಜಾಗೃತಿ ಮೂಡಿಸಿದೆ. ಯಕ್ಷ ಸಂವಾದ ತಾಳಮದ್ದಳೆ ಸರಣಿ ಕಾರ್ಯಕ್ರಮವು ಯಕ್ಷಗಾನದಲ್ಲಿ ಅಡಕವಾಗಿರುವ ಸಾಹಿತ್ಯದ ಸತ್ವವನ್ನು ಜನಮಾನಸಕ್ಕೆ ತಲುಪುವಂತೆ ಮಾಡಿದೆ. ಶಾಸ್ತ್ರೀಯ ಕಲಾ ಪ್ರಕಾರಗಳಾದ ಭರತನಾಟ್ಯ, ಕೂಚುಪುಡಿ, ಶಾಸ್ತ್ರೀಯ ಸಂಗೀತ ಮತ್ತು ಅನೇಕ ಜಾನಪದ ನೃತ್ಯ ಪ್ರಕಾರಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವುದು ಈ ಅಧ್ಯಯನ ಕೇಂದ್ರದ ಸಾಧನೆಯಾಗಿದೆ.
‘ಅಗ್ರಪೂಜೆ’ ಎಂಬ ಯಕ್ಷರೂಪಕವು ಉಪನ್ಯಾಸಕ ಮತ್ತು ವಿದ್ಯಾರ್ಥಿ ಕಲಾವಿದರ ಕೂಡುವಿಕೆಯಲ್ಲಿ ಸೃಜನಾತ್ಮಕವಾಗಿ ಮೂಡಿ ಬಂದಿದೆ. ಧರ್ಮರಾಯನ ಸಾರ್ವಭೌಮತೆಯ ಪ್ರತೀಕವಾಗಿ, ಪಂಚ ಪಾಂಡವರ ಸಂಕಲ್ಪದಂತೆ ರಾಜಸೂಯ ಯಾಗವು ನೆರವೇರುತ್ತದೆ. ಭೀಷ್ಮರ ಅಭಿಮತದಂತೆ ಶ್ರೀಕೃಷ್ಣನಿಗೆ ಅಗ್ರ ಪೀಠವನ್ನು ನೀಡಿ ಪೂಜಿಸುತ್ತಾರೆ. ಕುಪಿತರಾದ ಶಿಶುಪಾಲ, ದಂತವಕ್ತ್ರರು ಕೃಷ್ಣನನ್ನು ನಿಂದಿಸುತ್ತಾರೆ. ಶ್ರೀಕೃಷ್ಣನು ನೂರು ನಿಂದನೆಗಳನ್ನು ಸಹಿಸಿ, ಕೊನೆಗೆ ಅವರನ್ನು ಸಂಹರಿಸುತ್ತಾನೆ. ದುಷ್ಟ ಶಿಕ್ಷಣ ಶಿಷ್ಟ ರಕ್ಷಣ ತತ್ವಕ್ಕೆ ಜಯ ಲಭಿಸುತ್ತದೆ.
ಯಕ್ಷರೂಪಕದ ಪೂರಕ ಹಾಡುಗಳನ್ನು ಯಕ್ಷಕಲಾ ಕೇಂದ್ರದ ಸಂಯೋಜಕ ಪ್ರಶಾಂತ್ ರೈ ಇವರು ಬರೆದು ಹಾಡಿದರು. ಶ್ರೀಕೃಷ್ಣನ ಪ್ರೌಢ ಅಭಿನಯ ಮತ್ತು ಯಕ್ಷ ತಂಡದ ಸಮಗ್ರ ನಿರ್ವಹಣೆಯಿಂದ ವಿನೂತನ ಕಲ್ಪನೆಯ ರೂಪಕ ಪರಿಪೂರ್ಣವಾಗಿ ಮೂಡಿ ಬಂತು.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ