ಜಿಲ್ಲಾ ಸುದ್ದಿಗಳು

ಮಂಗಳೂರು: ‘ಯೋಧಗಾಥೆ’ ಕೃತಿ ಬಿಡುಗಡೆ

ಕಾಸರಗೋಡಿನಲ್ಲಿ ಹುಟ್ಟಿ ಕಾಶ್ಮೀರದಲ್ಲಿ ಗೆಲುವಿನ ಧ್ವಜ ಹಾರಿಸಿದ ನಿವೃತ್ತ ಯೋಧ ಶಂಕರನಾರಾಯಣ ಹೊಳ್ಳರ ಜೀವನಗಾಥೆ

ಮಂಗಳೂರು: ಎರ್ನಾಕುಳಂನಲ್ಲಿ ವಾಸವಾಗಿರುವ ಶಿಕ್ಷಕಿ, ಬರಹಗಾರ್ತಿ ಶ್ರೀಮತಿ ಪರಿಣಿತ ರವಿಯವರ ನಾಲ್ಕನೆಯ ಕೃತಿ ‘ಯೋಧಗಾಥೆ’ಯನ್ನು ಸೊಮವಾರ (ಅ.12) ಸಂಜೆ 4.00 ಗಂಟೆಗೆ ಝೂಮ್ ಆಪ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಕಾಲೇಜು ಮಂಗಳೂರಿನ ಪ್ರಾಂಶುಪಾಲರಾದ ಡಾ. ಉದಯ ಕುಮಾರ್ ಇವರು ಲೋಕಾರ್ಪಣೆಗೊಳಿಸಿದರು.

85 ರ ಹರೆಯದ ನಿವೃತ್ತ ಸೈನಿಕರಾದ ಶಂಕರನಾರಾಯಣ ಹೊಳ್ಳರ ಸೇನೆಯ ಅನುಭವಗಳನ್ನು ಬಹಳ ರೋಚಕವಾಗಿ ಬಿಚ್ಚಿಡುತ್ತಾ, ಕೃತಿಯು ನವಿರು ಹಾಗೂ ರೋಮಾಂಚನವನ್ನು ಮೂಡಿಸುತ್ತದೆ. ಅನುಭವ ಹಾಗೂ ಅಗಾಧವಾದ ಮಾನವೀಯ ಕೌಟುಂಬಿಕ ಬದುಕನ್ನು ಕಟ್ಟಿಕೊಡುವ ಈ ಕೃತಿಯು ಸಮಾಜಕ್ಕೆ ಸ್ಪೂರ್ತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹೊಳ್ಳರು ಕಾಸರಗೋಡಿನಲ್ಲಿ ಹುಟ್ಟಿ ಕಾಶ್ಮೀರದ ಗಡಿಯಲ್ಲಿ ನಿಂತು ಭಾರತದ ಗೆಲುವಿನ ಬಾವುಟವನ್ನು ಹಾರಿಸಿದ ಯಶೋಗಾಥೆಯ ಮಿಂಚು ಈ ಕೃತಿಯಲ್ಲಿ ಅನನ್ಯವಾಗಿ ಅಡಕವಾಗಿದೆ. ಆಕರ್ಷಕವಾದ ಆರಂಭ, ಸೈನಿಕ ಬದುಕಿನ ಭಾವನಾತ್ಮಕ ಸಂಗತಿಗಳು, ಮಾನವೀಯ ಭಾವುಕ ಕ್ಷಣಗಳು, ಕೌಟುಂಬಿಕ ವಾತ್ಸಲ್ಯದ ವಿವರಣೆಗಳನ್ನು ಪರಿಣಿತ ಅವರು ಕೃತಿಯೊಳಗೆ ಸೊಗಸಾಗಿ ಬೆಸೆದು ಅತ್ಯಂತ ಭಾವನಾತ್ಮಕಗೊಳಿಸಿದ್ದಾರೆ. ಪ್ರೇರಣಾದಾಯಕ ಹಾಗೂ ಸಮಾಜಕ್ಕೆ ಮಾರ್ಗದರ್ಶಕವಾಗಿರುವ ಈ ಕೃತಿಯು ಒಂದು ಕಾಲದ ದೇಶದ ಸಾಂಸ್ಕೃತಿಕ ಚರಿತ್ರೆಯ ಭಾಗವಾಗಿರುವುದರಿಂದ ಇಂತಹ ಕೃತಿಗಳಿಗೆ ಬಹಳಷ್ಟು ಮಹತ್ವವಿದೆ ಎಂದು ಕೃತಿಯನ್ನು ಪರಿಚಯಿಸಿ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬಳೆ ಮಾತನಾಡಿದರು.

ಹೊಳ್ಳರ ಸೈನಿಕ ಬದುಕಿನ ಅವಿಸ್ಮರಣೀಯ ಅನುಭವಗಳನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟ ಪ್ರಿಯ ವಿದ್ಯಾರ್ಥಿನಿ ಪರಿಣಿತಳ ಶ್ರಮ ಅಭಿಮಾನ ಮೂಡಿಸುತ್ತದೆ. ವಯಸ್ಸಿಗೆ ಮೀರಿದ ಪ್ರಬುದ್ಧತೆ ಅವಳಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗಮನಿಸಿದ್ದೇನೆ ಹಾಗೂ ಅವಳ ಕೃತಿಗಳಲ್ಲೂ ಅದರ ದರ್ಶನವಾಗುತ್ತದೆ. ಪರಿಣಿತ ಕನ್ನಡ ಸಾಹಿತ್ಯ ಲೋಕದಲ್ಲಿ ಭರವಸೆ ಮೂಡಿಸುವ ಲೇಖಕಿಯಾಗಬಲ್ಲಳು ಎಂದು ಹೆಮ್ಮೆಯಿಂದ ಹೇಳುತ್ತೇನೆ. ‘ಯೋಧಗಾಥೆ’ ಕೃತಿಯು ಹೊಳ್ಳರಂತಹ ಹಿರಿಯರು ನಮ್ಮ ಮನೆಯಲ್ಲೂ ಇರಬೇಕೆಂಬ ಆಕಾಂಕ್ಷೆಯನ್ನು ಮೂಡಿಸುತ್ತದೆ ಎಂದು ಅಧ್ಯಕ್ಷತೆ ವಹಿಸಿದ ನಿವೃತ್ತ ಪ್ರಾಧ್ಯಾಪಕರೂ, ಖ್ಯಾತ ಹಾಸ್ಯ ಲೇಖಕರೂ ಆದ ಶ್ರೀಮತಿ ಭುವನೇಶ್ವರಿ ಹೆಗಡೆ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಹೇಳಿದರು.

ದೂರದ ವಾಷಿಂಗ್ಟನ್ ನಿಂದ ಭಾಗವಹಿಸಿದ ಅಂಕಣಕಾರರಾದ ಶ್ರೀವತ್ಸ ಜೋಷಿಯವರು ಕತೆಗಳು, ಕವನಗಳು, ಕಾದಂಬರಿಗಳ ಮಧ್ಯೆ ಈ ರೀತಿ ಒಬ್ಬ ನಿವೃತ್ತ ಸೈನಿಕನ ಯಶೋಗಾಥೆಯನ್ನು ಅಕ್ಷರದಲ್ಲಿ ಮೂಡಿಸಿರುವ ಈ ಕೃತಿ ಖಂಡಿತವಾಗಿಯೂ ಹೆಚ್ಚು ಮೌಲ್ಯಯುತವಾದದ್ದು ಎಂದು ಅಭಿಪ್ರಾಯಪಟ್ಟರು. ಪರಿಣಿತ ರವಿಯವರು ಸ್ವಾಗತಿಸಿ, ಕಾರ್ತಿಕ್ ಶಾಸ್ತ್ರೀಯವರು ವಂದನಾರ್ಪಣೆ ಸಲ್ಲಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕೇರಳ ಹೈಕೋರ್ಟ್‌ ಮಧ್ಯಂತರ ಆದೇಶಕ್ಕೆ ಮಣಿದ ಕಾಸರಗೋಡು ಜಿಲ್ಲಾಡಳಿತ: ತಕ್ಷಣದಿಂದಲೇ ಗಡಿ ರಸ್ತೆಗಳ ತೆರವು, ಪಾಸ್ ಇಲ್ಲದೆ ಸಂಚಾರಕ್ಕೆ ಅನುಮತಿ

Upayuktha

ಜಿಲ್ಲಾಡಳಿತ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಚೇರಿಗೆ ಬೋಟುಗಳ ಹಸ್ತಾಂತರ

Upayuktha

ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಜ್ವರ ತಪಾಸಣಾ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

Upayuktha